
ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್
ಮುಂದಿನ ದಿನಗಳಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಸೋಲು ಅನುಭವಿಸಲಿದೆ’ ಎಂದು ಹೇಳಿದ್ದರು.
ದೆಹಲಿ: ಭಾರತದ ಮುಂಚೂಣಿ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ (Prashant Kishor) ಇನ್ನೇನು ಕಾಂಗ್ರೆಸ್ ಪಕ್ಷಕ್ಕೆ (Congress Party) ಸೇರ್ಪಡೆಯಾಗಿಯೇ ಬಿಟ್ಟರು ಎನ್ನುವಂಥ ವಾತಾವರಣ ಕೆಲವೇ ವಾರಗಳ ಹಿಂದೆ ನಿರ್ಮಾಣವಾಗಿತ್ತು. ಆದರೆ ನಂತರ ದಿನಗಳಲ್ಲಿ ‘ಸುಧಾರಣೆಗೆ ಹಿಂಜರಿಯುವ ಪಕ್ಷ ಅದು’ ಎಂದು ದೂರಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ನಿಂದ ದೂರ ಸರಿದಿದ್ದರು. ಇದೀಗ ಮತ್ತೊಮ್ಮೆ ಕಾಂಗ್ರೆಸ್ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ’ ಎಂದು ಕೈಮುಗಿದು ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯ ಕಟ್ಟುವ ಚಿಂತನೆಯಲ್ಲಿರುವ ಅವರು ಇದೀಗ ಬಿಹಾರದ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಮೂಲಕ ಜನರ ಅಭಿಪ್ರಾಯ ತಿಳಿಯುವುದು ಅವರ ಉದ್ದೇಶ. ಗ್ರಾಮಸ್ಥರೊಂದಿಗೆ ಸಂವಾದ ನಡೆಸುವಾಗ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಪಕ್ಷವು ತಾನು ಮುಳುಗುವುದರೊಂದಿಗೆ ತನ್ನ ಕೈ ಹಿಡಿದ ಎಲ್ಲರನ್ನೂ ಮುಳುಗಿಸುತ್ತದೆ’ ಎಂದು ಹೇಳಿದರು.
‘2015ರಲ್ಲಿ ಬಿಹಾರ, 2017ರಲ್ಲಿ ಪಂಜಾಬ್, 2019ರಲ್ಲಿ ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ನಂತರ ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿಯೂ ಗೆಲುವು ಸಾಧಿಸಿದ್ದೆವು. ನಾವು ಸೋತಿದ್ದು ಒಂದೇ ಚುನಾವಣೆ. ಅದು 2017ರ ಉತ್ತರ ಪ್ರದೇಶ ಚುನಾವಣೆ. ಹೀಗಾಗಿಯೇ ನಾನು ಕಾಂಗ್ರೆಸ್ನೊಂದಿಗೆ ಕೆಲಸ ಮಾಡುವುದು ಬೇಡ ಎಂದುಕೊಂಡೆ’ ಎಂದು ವಿವರಿಸಿದರು.
‘ಕಾಂಗ್ರೆಸ್ ಪಕ್ಷವು ಎಂದಿಗೂ ಒಗ್ಗೂಡಿ, ಸಂಘಟಿತ ರೀತಿಯಲ್ಲಿ ಹೋರಾಡಿಲ್ಲ. ಕಾಂಗ್ರೆಸ್ ನಾಯಕರು ಸ್ವತಃ ತಾವು ಮುಳುಗುವುದು ಅಷ್ಟೇ ಅಲ್ಲ, ತಮ್ಮ ಕೈ ಹಿಡಿದವರನ್ನೂ ಮುಳುಗಿಸುತ್ತಾರೆ. ನಾನು ಕಾಂಗ್ರೆಸ್ಗೆ ಹೋದರೆ ನಾನು ಮುಳುಗುತ್ತೇನೆ’ ಎಮದು ಅವರು ಹೇಳಿದರು.
ವೈಶಾಲಿಯಲ್ಲಿ ನಡೆದ ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಶಾಂತ್ ಕಿಶೋರ್ ಮಾತನಾಡಿದರು. ಕೆಲವೇ ದಿನಗಳಿಗೆ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಶಾಂತ್ ಕಿಶೋರ್, ‘ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದಿಂದ ಯಾವುದೆ ಪ್ರಯೋಜನವಿಲ್ಲ. ಮುಂದಿನ ದಿನಗಳಲ್ಲಿ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಸೋಲು ಅನುಭವಿಸಲಿದೆ’ ಎಂದು ಹೇಳಿದ್ದರು.
ಪ್ರಶಾಂತ್ ಕಿಶೋರ್ರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಎರಡು ಬಾರಿ ದೇಶದಲ್ಲಿ ಚರ್ಚೆ ನಡೆದಿತ್ತು. ಆದರೆ ಪ್ರಶಾಂತ್ ಅವರಿಗೆ ನೀಡಲಾಗುವ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಅಥವಾ ಭರವಸೆಯನ್ನು ಪಕ್ಷ ನೀಡದ ಕಾರಣ ಪ್ರಶಾಂತ್ ಕಾಂಗ್ರೆಸ್ ಸೇರ್ಪಡೆಯಿಂದ ಹಿಂದೆ ಸರಿದರು.
ಕಾಂಗ್ರೆಸ್ ಪಕ್ಷವನ್ನು ಹೇಗೆ ಪುನರುಜ್ಜೀವನಗೊಳಿಸಬಹುದು ಎನ್ನುವ ಬಗ್ಗೆ ಪ್ರಶಾಂತ್ ಕಿಶೋರ್ 600 ಸ್ಲೈಡ್ಗಳೊಂದಿಗೆ ವಿವರಣೆ ನೀಡಿದ್ದರು. ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಮುಂದುವರಿದರೂ, ಗಾಂಧಿ ಕುಟುಂಬಕ್ಕೆ ಹೊರತಾದವರೊಬ್ಬರು ಕಾರ್ಯಾಧ್ಯಕ್ಷರು ಅಥವಾ ಉಪಾಧ್ಯಕ್ಷರಾಗಿರಬೇಕು. ರಾಹುಲ್ ಗಾಂಧಿ ಸಂಸದೀಯ ಪಕ್ಷದ ನಾಯಕರಾಗಬೇಕು ಎಂದು ಸಲಹೆ ಮಾಡಿದ್ದರು. ಆದರೆ ಪಕ್ಷದ ಹಿರಿಯ ನಾಯಕರು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಕೆಲ ದಿನಗಳ ಮಾತುಕತೆಯ ನಂತರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ನಿಂದ ದೂರ ಸರಿಯುವುದಾಗಿ ಘೋಷಿಸಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ