ಕಾಂಗ್ರೆಸ್​ ನಾಯಕರೊಂದಿಗೆ 4 ತಾಸು ಸಭೆ ನಡೆಸಿದ ಪ್ರಶಾಂತ್ ಕಿಶೋರ್​; 2024 ಲೋಕಸಭಾ ಚುನಾವಣೆ ಬಗ್ಗೆ ಸುದೀರ್ಘ ವಿಷಯ ಮಂಡನೆ | Prashant Kishor made detailed presentation on Lok Sabha Election today


ಕಾಂಗ್ರೆಸ್​ ನಾಯಕರೊಂದಿಗೆ 4 ತಾಸು ಸಭೆ ನಡೆಸಿದ ಪ್ರಶಾಂತ್ ಕಿಶೋರ್​; 2024 ಲೋಕಸಭಾ ಚುನಾವಣೆ ಬಗ್ಗೆ ಸುದೀರ್ಘ ವಿಷಯ ಮಂಡನೆ

ಪ್ರಶಾಂತ್ ಕಿಶೋರ್​

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇಂದು ಸೋನಿಯಾ ಗಾಂಧಿ-ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚೆ ಮಾಡಿದ್ದಾರೆ.  ಅಷ್ಟೇ ಅಲ್ಲ, 2024ರ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಒಂದು ಸುದೀರ್ಘ ವಿಷಯ ಮಂಡನೆ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಕೆಲಸ ಹೇಗಿರಬೇಕು? ಕಾರ್ಯತಂತ್ರ ಹೇಗೆಲ್ಲ ರೂಪಿಸಬೇಕು? ಯಾವೆಲ್ಲ ಲೋಕಸಭಾ ಕ್ಷೇತ್ರಗಳಿಗೆ ಒತ್ತು ನೀಡಬೇಕು ಎಂಬಿತ್ಯಾದಿ ವಿಷಯಗಳನ್ನು ಅವರಿಂದು ಕಾಂಗ್ರೆಸ್ ವರಿಷ್ಠರ ಮುಂದೆ ಪ್ರಸ್ತುತ ಪಡಿಸಿದ್ದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಪ್ರಶಾಂತ್​ ಕಿಶೋರ್ ಇಂದು ಕಾಂಗ್ರೆಸ್ ನಾಯಕರ ಮುಂದೆ ತಮ್ಮ ವಿಷಯ ಮಂಡನೆ ಮಾಡಿದ್ದಾರೆ. ಅವರ ಯೋಜನೆಗಳನ್ನು ಪರಿಶೀಲಿಸಲು ಕಾಂಗ್ರೆಸ್​ ಹಿರಿಯ ನಾಯಕರ ಸಮಿತಿಯೊಂದು ರಚನೆಯಾಗಲಿದೆ. ಹಾಗೇ, ಇನ್ನೊಂದು ವಾರದೊಳಗೆ ಅದನ್ನು ಅನುಮೋದನೆ ಮಾಡುವ ಸಂಬಂಧ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.  ಅಷ್ಟೇ ಅಲ್ಲ, ಪ್ರಶಾಂತ್ ಕಿಶೋರ್​ ಕಾಂಗ್ರೆಸ್​ಗೆ ಸೇರೋದು ನಿಶ್ಚಿತವಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಇನ್ನೊಂದು ವಾರದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ ಎಂದಿದ್ದಾರೆ.

ಪ್ರಶಾಂತ್ ಕಿಶೋರ್​ ಅವರನ್ನೊಳಗೊಂಡ ಕಾಂಗ್ರೆಸ್ ನಾಯಕರ ಸಭೆ ಸುಮಾರು 4 ತಾಸುಗಳ ಕಾಲ ನಡೆದಿದೆ.  ಅಂದಹಾಗೇ, ಗುಜರಾತ್​​ನಲ್ಲಿ ಡಿಸೆಂಬರ್​​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರೊಳಗೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬುತ್ತಿದೆ. 2020ರಲ್ಲಿ ಕೂಡ ಪ್ರಶಾಂತ್ ಕಿಶೋರ್​ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ವರದಿಯಾಗಿತ್ತು.  ನಂತರ ಅದು ಅಲ್ಲಿಗೇ ನಿಂತಿತ್ತು. ಇತ್ತೀಚೆಗೊಮ್ಮೆ ಈ ಬಗ್ಗೆ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ,  ಪ್ರಶಾಂತ್ ಕಿಶೋರ್​ ಜತೆ ಮಾತುಕತೆ ನಡೆದಿದ್ದು ಹೌದು. ಆದರೆ ಅನೇಕ ವಿಷಯಗಳಲ್ಲಿ ಸೈದ್ಧಾಂತಿಕ ಭಿನ್ನಮತ ಇದ್ದ ಕಾರಣ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿಲ್ಲ ಎಂದಿದ್ದರು. ಇಂದಿನ ಸಭೆಯಲ್ಲಿ ಕಾಂಗ್ರೆಸ್​ನ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ,  ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್ ಇತರರು ಇದ್ದರು.

TV9 Kannada


Leave a Reply

Your email address will not be published. Required fields are marked *