ಕಾಂಗ್ರೆಸ್ ಪಕ್ಷದ ಟಾಸ್ಕ್​ಫೋರ್ಸ್ ರಚಿಸಿದ ಸೋನಿಯಾ ಗಾಂಧಿ;​ ಪ್ರಶಾಂತ್ ಕಿಶೋರ್​ ಮಾಜಿ ಸಹವರ್ತಿಗೂ ಸ್ಥಾನ | Prashant Kishor’s Ex Associate 2 Congress Rebels In Congress Party 2024 Panels Sonia Gandhi


ಕಾಂಗ್ರೆಸ್ ಪಕ್ಷದ ಟಾಸ್ಕ್​ಫೋರ್ಸ್ ರಚಿಸಿದ ಸೋನಿಯಾ ಗಾಂಧಿ;​  ಪ್ರಶಾಂತ್ ಕಿಶೋರ್​ ಮಾಜಿ ಸಹವರ್ತಿಗೂ ಸ್ಥಾನ

ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರ

Image Credit source: NDTV

ಪ್ರಶಾಂತ್ ಕಿಶೋರ್ ಅವರ ಮಾಜಿ ಸಹವರ್ತಿ ಸುನೀಲ್‌ ಕಣುಗೋಲು ಅವರನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ.

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ (Prashant Kishor) ಇನ್ನೇನು ಕಾಂಗ್ರೆಸ್ ಸೇರಿಯೇ ಬಿಡುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಜೊತೆ ಹಲವು ಸುತ್ತಿನ ಮಾತುಕತೆಗಳೂ ನಡೆದಿದ್ದವು. ಆದರೆ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರಲ್ಲೇ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆಗೆ ಪ್ರಶಾಂತ್ ಕಿಶೋರ್ ಅವರೇ ತಾವು ಕಾಂಗ್ರೆಸ್​ಗೆ ಸೇರ್ಪಡೆಯಾಗುವುದಿಲ್ಲ ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಅವರ ಮಾಜಿ ಸಹವರ್ತಿ ಸುನೀಲ್‌ ಕಣುಗೋಲು ಅವರನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ.

ಇಂದು 2024ರ ಚುನಾವಣೆಗೆ ಕಾಂಗ್ರೆಸ್ ಪ್ಯಾನೆಲ್​ಗೆ ಪ್ರಶಾಂತ್ ಕಿಶೋರ್ ಅವರ ಮಾಜಿ ಸಹವರ್ತಿ ಸುನೀಲ್, ಇಬ್ಬರು ಕಾಂಗ್ರೆಸ್ ರೆಬೆಲ್ ನಾಯಕರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಇಂದು ತನ್ನ ರಾಜಕೀಯ ವ್ಯವಹಾರಗಳ ಪ್ಯಾನೆಲ್ ಅನ್ನು ಘೋಷಿಸಿತು. ಇದರಲ್ಲಿ ರಾಹುಲ್ ಗಾಂಧಿ ಮತ್ತು ಇಬ್ಬರು ಕಾಂಗ್ರೆಸ್​ನ ಪ್ರಮುಖ ಭಿನ್ನಮತೀಯರು, ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಇದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್​ನ ಚಿಂತನಾ ಶಿಬಿರದಲ್ಲಿ ಟಾಸ್ಕ್​ಫೋರ್ಸ್​ ಸಮಿತಿ ಮತ್ತು ಎಲೆಕ್ಷನ್ ಪ್ಯಾನೆಲ್​ ಸಿದ್ಧಪಡಿಸಲು ನಿರ್ಧರಿಸಲಾಗಿತ್ತು. ಮುಂದಿನ ರಾಷ್ಟ್ರೀಯ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರವನ್ನು ನಿರ್ವಹಿಸುವ ಟಾಸ್ಕ್ ಫೋರ್ಸ್ – 2024ರಲ್ಲಿ “G-23” ಎಂದೇ ಕರೆಯಲ್ಪಡುವ ಭಿನ್ನಮತೀಯರ ಗುಂಪಿನಿಂದ ಕೂಡ ಕೆಲವರನ್ನು ಸೇರಿಸಿಕೊಳ್ಳಲಾಗಿದೆ. ಈ 23 ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂದು ಒತ್ತಾಯಿಸಿದ್ದರು. ಇದು ಕಾಂಗ್ರೆಸ್​ಗೆ ತೀವ್ರ ಮುಜುಗರ ಉಂಟುಮಾಡಿತ್ತು.

TV9 Kannada


Leave a Reply

Your email address will not be published. Required fields are marked *