ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ವರದಿ ಕೇಳಿದ ಹೈಕೋರ್ಟ್: ಡಿಕೆ ಶಿವಕುಮಾರ್ ಜೊತೆ ಕಾಂಗ್ರೆಸ್ ವಕೀಲ ಪೊನ್ನಣ್ಣ ಚರ್ಚೆ | Congress Legal Cell Chief AS Ponnanna Meets DK Shivakumar Discusses about Next move in Karnataka High Court


ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ವರದಿ ಕೇಳಿದ ಹೈಕೋರ್ಟ್: ಡಿಕೆ ಶಿವಕುಮಾರ್ ಜೊತೆ ಕಾಂಗ್ರೆಸ್ ವಕೀಲ ಪೊನ್ನಣ್ಣ ಚರ್ಚೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಕಾನೂನು ಘಟಕದ ಮುಖ್ಯಸ್ಥ ಎ.ಎಸ್.ಪೊನ್ನಣ್ಣ

ರಾಮನಗರ: ಕಾಂಗ್ರೆಸ್ ಪಾದಯಾತ್ರೆ ಕುರಿತು ಕರ್ನಾಟಕ ಹೈಕೋರ್ಟ್ ವರದಿ ಕೇಳಿರುವುದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಕಾಂಗ್ರೆಸ್ ಕಾನೂನು ಘಟಕದ ಮುಖ್ಯಸ್ಥರೂ ಆಗಿರುವ ವಕೀಲ ಎ.ಎಸ್.ಪೊನ್ನಣ್ಣ ಸುದೀರ್ಘವಾಗಿ ಚರ್ಚಿಸಿದರು. ಕೆಪಿಸಿಸಿ ಅಧ್ಯಕ್ಷರು ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಇದು ಜನರಿಗಾಗಿ, ನೀರಿಗೋಸ್ಕರ ಮಾಡುತ್ತಿರುವ ಹೋರಾಟ. ಹೀಗಾಗಿ ಕಾಂಗ್ರೆಸ್​ ಪಾದಯಾತ್ರೆ ಸಂವಿಧಾನಬದ್ಧವಾಗಿದೆ. ನಮ್ಮ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಹೈಕೋರ್ಟ್​ನಲ್ಲಿ ವಾದಿಸಲು ಡಿ.ಕೆ.ಶಿವಕುಮಾರ್ ಸೂಚಿಸಿದ್ದಾಗಿ ಅವರು ಟಿವಿ9ಗೆ ತಿಳಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಿ ಅಗತ್ಯ ಸಲಹೆ ಪಡೆದುಕೊಳ್ಳಲು ಡಿ.ಕೆ.ಶಿವಕುಮಾರ್ ಸಲಹೆ ಮಾಡಿದರು. ಈ ಹಿಂದೆ ವಿಚಾರಣೆ ನಡೆದಿರುವ ಇಂಥದ್ದೇ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ಗಮನಿಸಿ, ಇಂಥ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿರುವ ತೀರ್ಪುಗಳನ್ನು ಅಭ್ಯಾಸ ಮಾಡಿ ಹೈಕೋರ್ಟ್​ನಲ್ಲಿ ವಾದಿಸಬೇಕು. ರಾಮನಗರದಲ್ಲಿ ಯಾರೊಬ್ಬರೂ ಐಸಿಯುಗೆ ದಾಖಲಾಗಿಲ್ಲ. ಸರ್ಕಾರವು ಉದ್ದೇಶಪೂರ್ವಕವಾಗಿ ಪಾದಯಾತ್ರೆ ತಡೆಯಲು ಪ್ರಯತ್ನ ಮಾಡುತ್ತಿದೆ ಎಂಬ ಅಂಶವನ್ನೇ ಪ್ರಧಾನವಾಗಿ ಮಂಡಿಸಬೇಕೆಂಬುದು ಡಿ.ಕೆ.ಶಿವಕುಮಾರ್ ಅವರ ಅಭಿಪ್ರಾಯವಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಒಂದು ವೇಳೆ ಪಾದಯಾತ್ರೆ ನಿಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದರೆ ಗೌರವ ನೀಡುತ್ತೇವೆ. ಬಳಿಕ ಸಾಮೂಹಿಕ ಪಾದಯಾತ್ರೆಯ ಬದಲು ಬೆರಳೆಣಿಕೆಯಷ್ಟು ಜನರು ಪಾದಯಾತ್ರೆ ನಡೆಸುವ ಬಗ್ಗೆ ಯೋಚಿಸಬಹುದು ಎಂಬ ಅಭಿಪ್ರಾಯವೂ ಕಾಂಗ್ರೆಸ್ ವಲಯದಲ್ಲಿ ಕೆಳಿ ಬಂದಿದೆ.

ಪಾದಯಾತ್ರೆ ತಡೆಯುತ್ತೇವೆಂದು ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಲು ಸರ್ಕಾರ ನಿರ್ಧಾರ
ಬೆಂಗಳೂರು:
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ಆಕ್ಷೇಪ ಹಿನ್ನೆಲೆ ಪಾದಯಾತ್ರೆ ತಡೆಯುತ್ತೇವೆಂದು ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದೆ. ಪಾದಯಾತ್ರೆ ನಡೆಸದಂತೆ ಈವರೆಗೆ ನೀಡಿದ ನೋಟಿಸ್​ಗಳು, ಸೂಚನೆಗಳು, ಮೌಖಿಕ ಮನವಿ, ದಾಖಲಿಸಿರುವ FIR ಸೇರಿ ಎಲ್ಲ ವಿವರ ಒಳಗೊಂಡ ಅಫಿಡವಿಟ್​ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಸಚಿವರು, ಅಧಿಕಾರಿಗಳ ಜತೆ ಚರ್ಚೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ಆಕ್ಷೇಪ ಹಿನ್ನೆಲೆ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ದೂರವಾಣಿ ಮೂಲಕ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ‌, ಸಚಿವರಾದ ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಆರ್‌.ಅಶೋಕ್, ಡಾ.ಸುಧಾಕರ್, ಸಿಎಸ್ ರವಿಕುಮಾರ್, ಡಿಜಿ & ಐಜಿಪಿ ಸೂದ್, ಎಜಿ ನಾವದಗಿ ಜತೆ ಸಿಎಂ ಚರ್ಚೆ ಮಾಡಿದ್ದಾರೆ. ಸರ್ಕಾರದ ಮುಂದಿನ ನಿಲುವಿನ ಬಗ್ಗೆ ಬೊಮ್ಮಾಯಿ ಚರ್ಚಿಸಿದ್ದು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ವಯ ಕ್ರಮದ ಬಗ್ಗೆ ಮಾತುಕತೆ ನಡೆಸಲಾಗಿದೆ. ಕ್ರಮಕೈಗೊಳ್ಳುವ ವಿಚಾರವಾಗಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *