ಚಿತ್ರದುರ್ಗ: ಕಾಂಗ್ರೆಸ್ ಮಾತು ಕೇಳಿದರೆ ಜೀವ ಹೋಗುತ್ತವೆ, ಬಿಜೆಪಿ ಮಾತು ಕೇಳಿ ಲಸಿಕೆ ಪಡೆದರೆ ಜೀವ ಉಳಿಯುತ್ತವೆ ಎಂದು ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಜಿಲ್ಲಾಡಳಿತ ಹಾಗೂ ವೇದಾಂತ ಮೈನಿಂಗ್ ಕಂಪನಿ ವತಿಯಿಂದ ನಿರ್ಮಾಣ ಮಾಡಿರುವ ಜರ್ಮನ್ ಟೆಂಟ್ ಮಾದರಿಯ 100 ಆಕ್ಸಿಜನ್ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ ಉದ್ಘಾಟನೆ ನೆರವೇರಿಸಿ, ಬಳಿಕ ಮಾತನಾಡಿದ ಅವರು, ಒಂದು ಸಮುದಾಯಕ್ಕೆ ಕೊರೊನಾ ಲಸಿಕೆ ಮೀಸಲು ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದರು. ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೇ ನಿಮ್ಮ ಬುದ್ಧಿಯನ್ನು ಒಳ್ಳೆತನಕ್ಕೆ ಮಾತ್ರ ಬಳಸಿ. ಕೋವಿಡ್ ಲಸಿಕೆ ವಿಚಾರದಲ್ಲಿ ಜಾತಿ, ರಾಜಕಾರಣ ಮಾಡೋದು ಸರಿಯಲ್ಲ. ನಮ್ಮ ಸರ್ಕಾರವು ಯಾವುದೇ ಬೇಧವಿಲ್ಲದೆ ಎಲ್ಲ ಜಾತಿ, ಧರ್ಮದ ಜನರಿಗೂ ಲಸಿಕೆ ನೀಡುತ್ತಿದೆ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡೋದು ಸರಿಯಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಕೊರೊನಾ ಡೇಂಜರ್ ನಲ್ಲಿ ಕರ್ನಾಟಕದ 25 ತಾಲೂಕುಗಳು

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಸೋಲಿನ ಹತಾಶೆಯುಂಟಾಗಿದೆ. ಹೀಗಾಗಿ ಕೋವಿಡ್ ಸಂದರ್ಭ ಬಳಸಿಕೊಂಡು, ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತಿದ್ದಾರೆ. ಆದರೆ ಈ ಕೋವಿಡ್ ಸಂದಿಗ್ಧತೆ ವೇಳೆ ಜನರ ಜೀವದ ಜೊತೆ ಚೆಲ್ಲಾಟ ಆಡುವುದು, ರಾಜಕಾರಣ ಮಾಡುವುದು ಬೇಡವೆಂದು ಮನವಿ ಮಾಡಿದರು.

ಸಚಿವ ಸಿ.ಪಿ.ಯೋಗೀಶ್ವರ್ ಗೂ ಕುಟುಕಿದ ಶ್ರೀರಾಮುಲು, ನಮ್ಮ ಸಿಎಂ ಬಿ.ಎಸ್.ಯಡಿಯೂರಪ್ಪನವರು ಶಕ್ತಿ ಮೀರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸಿದೆ. ಆದರೆ ಯಾರೋ ಸಣ್ಣವರು ದೆಹಲಿಗೆ ಹೋಗಿ ರಾಜಕಾರಣ ಮಾಡೋದು ಸರಿಯಲ್ಲ ಎಂದರು. ಅಲ್ಲದೆ ಲಾಕ್‍ಡೌನ್ ನಿಂದಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆ ಆಗಿದೆ. ಹೀಗಾಗಿ ಹಂತ ಹಂತವಾಗಿ ಲಾಕ್‍ಡೌನ್ ಸಡಲಿಕೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಇದಕ್ಕೂ ಮುನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನೂತನ ಆಸ್ಪತ್ರೆಗೆ ಚಾಲನೆ ನೀಡಿದರು. ಸಚಿವ ಶ್ರೀರಾಮುಲು, ಜಿಲ್ಲೆಯ ಶಾಸಕರು ಹಾಗೂ ವೇದಾಂತ ಕಂಪನಿಯ ವ್ಯವಸ್ಥಾಪಕರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಶುಭಕೋರಿದರು.

ಈ ಆಸ್ಪತ್ರೆಯಲ್ಲಿ 20 ಐಸಿಯು ಬೆಡ್, 80 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದ ಸೇವೆ ಆರಂಭಿಸಲಿರುವ ಈ ಕೋವಿಡ್ ಆಸ್ಪತ್ರೆಗೆ ಜಿಲ್ಲಾಡಳಿತದಿಂದ ವೈದ್ಯಕೀಯ ಸಿಬ್ಬಂದಿ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮಾ, ಚಂದ್ರಪ್ಪ, ಸಂಸದರಾದ ಜಿ.ಎಂ.ಸಿದ್ದೇಶ್ವರ್ ಹಾಗೂ ಎ.ನಾರಾಯಣಸ್ವಾಮಿ ಸೇರಿದಂತೆ ಜಿಲ್ಲಾಧಿಕಾರಿ ಕವಿತಾ, ಎಸ್‍ಪಿ ರಾಧಿಕಾ ಭಾಗಿಯಾಗಿದ್ದರು.

The post ಕಾಂಗ್ರೆಸ್ ಮಾತು ಕೇಳಿದರೆ ಜೀವ ಹೋಗುತ್ತವೆ, ಬಿಜೆಪಿ ಮಾತು ಕೇಳಿದರೆ ಜೀವ ಉಳಿಯುತ್ತವೆ: ಶ್ರೀರಾಮುಲು appeared first on Public TV.

Source: publictv.in

Source link