ಚಿಕ್ಕಮಗಳೂರು: ಕಾಡಾನೆ ಓಡಿಸಲು ಹೋದ ಫಾರೆಸ್ಟ್ ಗಾರ್ಡ್ ಕಾಡಾನೆ ದಾಳಿಯಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಆಲ್ದೂರು ಸಮೀಪದ ಚಿತ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.

ಪುಟ್ಟರಾಜು(38) ಮೃತರಾಗಿದ್ದಾರೆ. ಚಿತ್ತುವಳ್ಳಿಯಲ್ಲಿ ಆನೆ ಹಾವಳಿ ಹೊಸತೇನಲ್ಲ. ಇಂದು ಕೂಡ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದ ಕಾಡಾನೆ ಬೆಳೆಗಳನ್ನ ಹಾಳು ಮಾಡುತ್ತಿತ್ತು. ವಿಷಯ ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದರು. ಆನೆ ಓಡಿಸಲು ಪುಟ್ಟರಾಜು ಸೇರಿದಂತೆ ಅರಣ್ಯ ಇಲಾಖೆ ತಂಡ ಚಿತ್ತುವಳ್ಳಿಗೆ ತೆರಳಿತ್ತು.

ಆನೆ ಕಾರ್ಯಚರಣೆಯಲ್ಲಿ ತೊಡಗಿದ್ದ ಅಧಿಕಾರಿಗಳ ಮೇಲೆ ಕಾಡಾನೆ ದಾಳಿಗೆ ಮುಂದಾಗಿದೆ. ಅಲ್ಲಿಂದ ಓಡಿ ಹೋಗುವಾಗ ಪುಟ್ಟರಾಜು ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಆನೆಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗುವಾಗ ಕೆಳಗೆ ಬಿದ್ದ ಪುಟ್ಟರಾಜು ಮತ್ತೆ ಮೇಲೆದ್ದು ಓಡಲು ಸಾಧ್ಯವಾಗಿಲ್ಲ. ಆಗ ಹಿಂದಿನಿಂದ ಬಂದ ಕಾಡಾನೆ ಪುಟ್ಟರಾಜು ಮೇಲೆ ಕಾಲಿಟ್ಟು ಹೋಗಿದೆ.

ಆನೆ ದಾಳಿಯಿಂದ ತೀವ್ರ ಅಸ್ವಸ್ಥರಾಗಿದ್ದ ಪುಟ್ಟರಾಜುರನ್ನ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಆಸ್ಪತ್ರೆ ಬಾಗಿಲಿಗೆ ತೆರಳುತ್ತಿದ್ದಂತೆ ಫಾರೆಸ್ಟ್ ಗಾರ್ಡ್ ಪುಟ್ಟರಾಜು ಸಾವಿಗೀಡಾಗಿದ್ದಾರೆ. ಕಳೆದ 08 ವರ್ಷಗಳಿಂದ ಪುಟ್ಟರಾಜು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು. ಮೃತ ಪುಟ್ಟರಾಜುಗೆ ಇಬ್ಬರು ಮಕ್ಕಳಿದ್ದಾರೆ. ಸಿಬ್ಬಂದಿಗೆ ಸಾವಿಗೆ ಅರಣ್ಯ ಇಲಾಖೆ ಕೂಡ ಕಂಬನಿ ಮಿಡಿದಿದೆ.

The post ಕಾಡಾನೆ ದಾಳಿಗೆ ಫಾರೆಸ್ಟ್ ಗಾರ್ಡ್ ಸಾವು appeared first on Public TV.

Source: publictv.in

Source link