ಬೆಳಗಾವಿ: ಸಾಂಗತ್ಯವಿಲ್ಲದ ದಾಂಪತ್ಯ ಉಸಿರಿಲ್ಲದೆ ದೇಹವಿದ್ದಂತೆ ಎಂಬ ನಾಣ್ಣುಡಿಯೊಂದಿದೆ. ಸತಿ ಪತಿ ಉತ್ತಮ ಸ್ನೇಹಿತರಾದಾಗ ಮಾತ್ರ ದಾಂಪತ್ಯ ಜೀವನ ಎಂಬುದು ಸ್ವರ್ಗವಾಗುತ್ತದೆ. ಅದೇ ರೀತಿ ನಗರದಲ್ಲಿ ವ್ಯಕ್ತಿಯೋರ್ವರು ಅಗಲಿದ ನೆಚ್ಚಿನ ಹೆಂಡತಿಗೆ ಮೂರ್ತಿ ಪ್ರತಿಷ್ಠಾಪಿಸಿ ದಾಂಪತ್ಯ ಜೀವನಕ್ಕೆ ಸುಂದರವಾದ ಅರ್ಥ ಕಲ್ಪಿಸಿದ್ದಾರೆ.
ಹೌದು, ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾ ಚೌಗಲೆ ಎಂಬುವವರು ಈ ವಿಶಿಷ್ಟವಾದ ಮತ್ತು ಅಪರೂಪವಾದ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ. ದೀಪಾವಳಿ ಹಬ್ಬದ ಶುಭ ಸಮಾರಂಭದಲ್ಲಿ ಮರಗಾಯಿ ನಗರದಲ್ಲಿ ಅಗಲಿದ ತಮ್ಮ ಪತ್ನಿಯ ಮೂರ್ತಿ ಪ್ರತಿಷ್ಠಾಪಿಸಿ ನಮನ ಸಲ್ಲಿಸಿದ್ದಾರೆ.
ಪತಿ ಚಿಂತೆಯಲ್ಲಿ ಸಾವಿಗೀಡಾದ ಪತ್ನಿ
ಪತಿ ಶಿವಾ ಚೌಗಲೆಗೆ ಕೋವಿಡ್ ಸೋಂಕು ತಗುಲಿದ್ದರಿಂದ ಆತಂಕಕ್ಕೊಳಗಾಗಿದ್ದ ಮಾಜಿ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದ ಮೈನಾಬಾಯಿ ಚೌಗಲೆ ಇತ್ತೀಚಿಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದರು. ಪತಿಯ ಆರೋಗ್ಯದ ಚಿಂತೆಯಲ್ಲಿಯೇ ಪತ್ನಿ ಸಾವನ್ನಪ್ಪಿದ್ದರಿಂದ ಶಿವಾ ಚೌಗಲೆ ತೀವ್ರ ಆಘಾತಕ್ಕೆ ಒಳಗಾಗಿದ್ದರು.
ಪ್ರತಿದಿನ ಮಡದಿಯ ನೆನೆಪು ಸದಾ ಕಾಡುತ್ತಿದ್ದರಿಂದ ಮೂರ್ತಿ ಸ್ಥಾಪನೆ ಬಗ್ಗೆ ಜ್ಯೋತಿಷಿಗಳ ಜೊತೆ ಚರ್ಚಿಸಿದ ಚೌಗಲೆ, ದೀಪಾವಳಿ ಸಂದರ್ಭದಲ್ಲಿ ಮೂರ್ತಿ ಸ್ಥಾಪನೆ ಮಾಡುವುದರ ಕುರಿತು ನಿರ್ಧಾರ ಕೈಗೊಂಡಿದ್ದರು. ಆ ಪ್ರಕಾರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮನೆಯಲ್ಲಿ ಮೈನಾಬಾಯಿ ಮೂರ್ತಿ ಸ್ಥಾಪನೆಯನ್ನು ಅದ್ದೂರಿಯಾಗಿ ನೆವೇರಿಸಲಾಗಿದೆ.
ಇದನ್ನೂ ಓದಿ:ಅಪ್ಪು ಅಂದ್ರೆ ಆದರ್ಶ: ಒಂದೇ ಗ್ರಾಮದ 60ಕ್ಕೂ ಹೆಚ್ಚು ಅಭಿಮಾನಿಗಳಿಂದ ನೇತ್ರದಾನಕ್ಕೆ ನಿರ್ಧಾರ
ಮೂರ್ತಿ ನಿರ್ಮಾಣಕ್ಕೆ 45 ದಿನ ಹಿಡಿದಿದ್ದು ಮನೆಯ ಮುಂದೆ ಪೆಂಡಾಲ್ ಹಾಕಿ, ಬಂಧು, ಬಳಗಕ್ಕೆ ಊಟದ ವ್ಯವಸ್ಥೆ ಮಾಡಿ ಮೆರವಣಿಗೆ ಮೂಲಕ ಸಂಭ್ರಮದಿಂದ ಸ್ಥಾಪನೆ ಮಾಡಿದ್ದಾರೆ. ಮೂರ್ತಿಯ ಜೊತೆಗೆ ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿ ಎಲ್ಲಾ ವಸ್ತುಗಳು ಇಡಲು ಪ್ರತ್ಯೇಕವಾದ ವಾರ್ಡ್ ರೂಮ್ ಕೂಡ ಮಾಡಲಾಗಿದೆ.
ಪತಿ-ಪತ್ನಿ ಮಹಾನಗರ ಪಾಲಿಕೆಯಲ್ಲಿ ಸದಸ್ಯರಾಗಿ ಸೇವೆ
ವಿಶೇಷವೆಂಬಂತೆ ಈ ಜೋಡಿ ಪಾಲಿಕೆಯಲ್ಲಿ ಒಂದೇ ಅವಧಿಗೆ ಸದಸ್ಯರಾಗಿ ಆಯ್ಕೆ ಆಗಿದ್ದರು. ಒಂದು ಅವಧಿಗೆ ಮೈನಾಬಾಯಿ ಕಾರ್ಪೊರೇಟರ್ ಆಗಿ ಕೂಡ ಆಯ್ಕೆಯಾಗಿದ್ದರು. ಈ ವೇಳೆ ವಾರ್ಡ್ ನಲ್ಲಿ ಬರೋಬ್ಬರಿ 8 ಕೋಟಿ ರೂಪಾಯಿ ಕೆಲಸ ಮಾಡಿದ್ದ ಮೈನಾಬಾಯಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ವಾರ್ಡ್ನಲ್ಲಿ ಮೈನಾಬಾಯಿ ಮಾಡಬೇಕೆಂದುಕೊಂಡಿದ್ದ ಕೆಲಸಗಳನ್ನು ಈಡೇರಿಸಲು ಪತಿ ಸಂಕಲ್ಪ ತೊಟ್ಟಿದ್ದು ಪತ್ನಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪನೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ.