ಕಾನ್ಪುರದಲ್ಲಿ ಮತ್ತೆ 30 ಮಂದಿಗೆ ಝಿಕಾ ವೈರಸ್ ಸೋಂಕು; ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆ | Zika Virus case rises in Kanpur 66 people found positive for Zika Virus


ಕಾನ್ಪುರದಲ್ಲಿ ಮತ್ತೆ 30 ಮಂದಿಗೆ ಝಿಕಾ ವೈರಸ್ ಸೋಂಕು; ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆ

ಝಿಕಾ ವೈರಸ್

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದು (ನವೆಂಬರ್ 4) ಮತ್ತೆ 30 ಜನರಿಗೆ ಝಿಕಾ ವೈರಸ್​ ಪತ್ತೆ ಆಗಿದೆ. ಅದರಂತೆ ಜಿಲ್ಲೆಯಲ್ಲಿ ಝಿಕಾ ವೈರಸ್​ ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆ ಆಗಿದೆ. ನಿನ್ನೆಯಷ್ಟೇ (ನವೆಂಬರ್ 3) ಇಲ್ಲಿ ವಾಯುಪಡೆಯ ಆರು ಸಿಬ್ಬಂದಿಯೂ ಸೇರಿದಂತೆ ಜಿಲ್ಲೆಯ 25 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಜಿ.ವಿಶಾಖ್ ಹೇಳಿಕೆ ನೀಡಿದ್ದರು.

ರೋಗ ಹರಡುವುದನ್ನು ತಡೆಯಲು ಮತ್ತು ಮೂಲವನ್ನು ಪತ್ತೆಹಚ್ಚಲು ಆರೋಗ್ಯ ತಂಡಗಳನ್ನು ರಚಿಸಲಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಗರ್ಭಿಣಿಯರು ಮತ್ತು ಜ್ವರ ಪೀಡಿತರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಜಿ. ವಿಶಾಖ್ ಹೇಳಿದ್ದರು.

ಮನೆಮನೆಯಿಂದ ಮಾದರಿ ಸಂಗ್ರಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಝಿಕಾ ವೈರಸ್ ಸೋಂಕಿನ ಬಗ್ಗೆ ಯಾರೂ ಗಾಬರಿಯಾಗಬಾರದು ಎಂದು ಮನವಿ ಮಾಡಿರುವ ಅವರು, ವಾಯುಪಡೆ ಕೇಂದ್ರದ ಸುತ್ತಮುತ್ತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಝಿಕಾ ವೈರಸ್ ಸೋಂಕು ಸೊಳ್ಳೆಗಳಿಂದ ಹರಡುತ್ತದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಅ.23ರಂದು ಮೊದಲ ಬಾರಿಗೆ ವಾಯುಪಡೆ ಅಧಿಕಾರಿಯೊಬ್ಬರಲ್ಲಿ ಝೀಕಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ಕೇಂದ್ರ ಆರೋಗ್ಯ ಇಲಾಖೆಯು ಉನ್ನತ ಮಟ್ಟದ ತಂಡವನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿತ್ತು.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆಫ್ರಿಕನ್ ದೇಶಗಳಲ್ಲಿ ಮೊದಲ ಏಕಾಏಕಿ ದಾಖಲಾದ ಝಿಕಾ ವೈರಸ್, ಗರ್ಭಧಾರಣೆಯ ಸಂಬಂಧಿತ ತೊಡಕುಗಳು ಮತ್ತು ವಯಸ್ಕರು ಮತ್ತು ಮಕ್ಕಳಲ್ಲಿ ನರವೈಜ್ಞಾನಿಕ ತೊಡಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಝಿಕಾ ವೈರಸ್ ಕಾಯಿಲೆಯ ಕಾವು ಕಾಲಾವಧಿ (ರೋಗಲಕ್ಷಣಗಳಿಗೆ ಒಡ್ಡಿಕೊಳ್ಳುವ ಸಮಯ) 3 ರಿಂದ 14 ದಿನಗಳು ಎಂದು ಅಂದಾಜಿಸಲಾಗಿದೆ.

ಝಿಕಾ ವೈರಸ್ ಸೋಂಕಿತ ಜನರಲ್ಲಿ ಹೆಚ್ಚಿನವರು ರೋಗಲಕ್ಷಣಗಳನ್ನು ಹೆಚ್ಚಾಗಿ ಕಂಡು ಬರಲ್ಲ ಎಂದು WHO ಹೇಳುತ್ತದೆ. ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ಸೇರಿದಂತೆ ರೋಗಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೆ ಇರುತ್ತದೆ ಎಂದು ಅದು ಹೇಳುತ್ತದೆ. ಝಿಕಾ ವೈರಸ್‌ಗೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲ .ಆದರೆ WHO ಪ್ರಕಾರ ಅದರ ತಡೆಗಟ್ಟುವ ಕ್ರಮಗಳು ಹಗಲಿನಲ್ಲಿ ಮತ್ತು ಸಂಜೆಯ ಆರಂಭದಲ್ಲಿ ಸೊಳ್ಳೆ ಕಡಿತದಿಂದ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಆಗ ಮಾತ್ರ ಝಿಕಾ ವೈರಸ್ ಬರದಂತೆ ತಡೆಯಲು ಸಾಧ್ಯ. ಕಳೆದ ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲೂ ಓರ್ವ ವ್ಯಕ್ತಿಯಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿತ್ತು. ಈಗ ಉತ್ತರ ಪ್ರದೇಶದ ಕಾನ್ಪುರದಲ್ಲಿ ಝಿಕಾ ವೈರಸ್ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ: ಕಾನ್ಪುರದಲ್ಲಿ ವಾಯುಪಡೆಯ 6 ಸಿಬ್ಬಂದಿ ಸೇರಿ 25ಕ್ಕೂ ಹೆಚ್ಚು ಜನರಿಗೆ ಝಿಕಾ ವೈರಸ್ ಸೋಂಕು

ಇದನ್ನೂ ಓದಿ: ಕಾನ್ಪುರದ ವ್ಯಕ್ತಿಯೊಬ್ಬರಲ್ಲಿ ಝಿಕಾ ವೈರಸ್ ಪತ್ತೆ; ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಂಡಗಳ ಭೇಟಿ

TV9 Kannada


Leave a Reply

Your email address will not be published. Required fields are marked *