ಚಿಕ್ಕಮಗಳೂರು: ಒಂದೇ ಗ್ರಾಮದ 75 ಜನಕ್ಕೆ ಕೊರೊನಾ ಪಾಸಿಟಿವ್ ಬಂದ ಪರಿಣಾಮ ಇಡೀ ಹಳ್ಳಿಯನ್ನೇ ಸೀಲ್‍ಡೌನ್ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಕಳಸಾಪುರ ಸಮೀಪದ ಕೊಳ್ಳಿಕೊಪ್ಪ ಗ್ರಾಮದಲ್ಲಿ ಹಕ್ಕಿಪಿಕ್ಕಿ ಜನಾಂಗದವರೇ ಹೆಚ್ಚಿದ್ದಾರೆ. ಎಲ್ಲರೂ ತಲೆಕೂದಲು, ಏರ್ಪಿನ್ ಸೇರಿದಂತೆ ಹಳ್ಳಿಹಳ್ಳಿ ಸುತ್ತಿ ವಿವಿಧ ರೀತಿಯ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದರು. ಆದರೆ, ಅವರಿಗೆ ಹೆಮ್ಮಾರಿ ಕೊರೊನಾದ ಸೋಂಕು ಎಲ್ಲಿಂದ ಬಂತೋ ಏನೋ ಇಡೀ ಊರಿಗೆ ಊರೇ ಸೋಂಕಿನಿಂದ ಕೂಡಿದೆ. ವಿಷಯ ತಿಳಿದ ಕೂಡಲೇ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತಹಶೀಲ್ದಾರ್ ಕಾಂತರಾಜು, ಎಸಿ ನಾಗರಾಜು, ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಸೋಂಕಿನ ತೀವ್ರತೆಯ ಬಗ್ಗೆ ಮಾಹಿತಿ ನೀಡಿ ಯಾರೂ ಮನೆಯಿಂದ ಆಚೆ ಬರದಂತೆ ಸೂಚಿಸಿದ್ದಾರೆ. ನಿಮಗೆ 15 ದಿನಕ್ಕೆ ಆಗುವಷ್ಟು ರೇಷನ್ ವ್ಯವಸ್ಥೆಯನ್ನ ತಾಲ್ಲೂಕಿನ ಆಡಳಿತವೇ ಮಾಡಲಿದೆ. ನೀವು ಯಾರೂ ಕೆಲಸಕ್ಕೆ ಹೋಗುವ ಅಗತ್ಯವಿಲ್ಲ. ಮನೆಯಿಂದ ಹೊರಬಾರದಂತೆ ಸೂಚಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸ್ಥಳಕ್ಕೆ ಭೇಟಿ ನೀಡಿ ಯಾರೂ ಆತಂಕ ಪಡದಂತೆ ಧೈರ್ಯ ತುಂಬಿದ್ದಾರೆ. ಪಾಸಿಟಿವ್ ಬಂದಿರೋ 75 ಜನರ 47 ಕುಟುಂಬಗಳಿಗೂ ರೇಷನ್ ಕಿಟ್ ನೀಡಿದ್ದಾರೆ. ಗ್ರಾಮದಲ್ಲಿ ಸೋಂಕಿತರನ್ನ ಹೊರತುಪಡಿಸಿ ಉಳಿದವರು ಪ್ರತಿಯೊಬ್ಬರು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದಾರೆ. ಯಾರಾದರೂ ಪರೀಕ್ಷೆಗೆ ಹಿಂದೇಟು ಹಾಕಿದರೆ ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಸಿಟಿವ್ ಬಂದ ಕುಟುಂಬಗಳಿಗೆ ರೇಷನ್ ವ್ಯವಸ್ಥೆ ಮಾಡಿದ್ದು ಯಾರಾದರೂ ಮನೆಯಿಂದ ಹೊರಬಂದರೆ ಅವರ ವಿರುದ್ಧವೂ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಅಧಿಕಾರಿಗಳು ಇಡೀ ಗ್ರಾಮದ ತುಂಬ ಮೈಕ್‍ನಲ್ಲಿ ಅನೌನ್ಸ್ ಮಾಡಿ ಸೋಂಕಿನ ತೀವ್ರತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ತಾಲೂಕಿನಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಯತೇಚ್ಛವಾಗಿದೆ. ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿದ್ಯಾ ಎಂಬ ಅನುಮಾನ ಬಲವಾಗಿದೆ. ಯಾಕಂದ್ರೆ, ಕಳೆದೊಂದು ವಾರದಲ್ಲೇ ತಾಲೂಕಿನ ನಾಲ್ಕೈದು ಹಳ್ಳಿಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

The post ಕಾಫಿನಾಡಲ್ಲಿ ಸ್ಪೋಟ -ಒಂದೇ ಗ್ರಾಮದ 75 ಜನರಿಗೆ ಸೋಂಕು appeared first on Public TV.

Source: publictv.in

Source link