ಯುವ ಕ್ರಿಕೆಟಿಗ ಪೃಥ್ವಿ ಶಾ..! ಕಳೆದ ವರ್ಷ ಆಸ್ಟ್ರೇಲಿಯಾ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಪೃಥ್ವಿ, ಇಂಗ್ಲೆಂಡ್​​ ಟೆಸ್ಟ್​​​ ಸರಣಿಗೆ ಆಯ್ಕೆಯಾಗಲಿಲ್ಲ. ಬಳಿಕ ದೇಸಿ ಕ್ರಿಕೆಟ್​ಗೆ ಮರಳಿ ವಿಜಯ್​ ಹಜಾರೆ ಟೂರ್ನಿಯಲ್ಲಿ ಅದ್ಭುತ​​ ಬ್ಯಾಟಿಂಗ್​ನಿಂದ, ರನ್​ ಪರ್ವತ ನಿರ್ಮಿಸಿದ. ಜೊತೆಗೆ ಕ್ಯಾಪ್ಟನ್​​ ಆಗಿಯೂ ಚಾಂಪಿಯನ್ ​ಆದ. ಸದ್ಯ ರದ್ದಾಗಿರುವ 14ನೇ ಆವೃತ್ತಿಯ IPL​​ನಲ್ಲೂ, ಬೊಂಬಾಬ್​ ಬ್ಯಾಟಿಂಗ್ ಪ್ರದರ್ಶಿಸಿದ. ಇಷ್ಟಾದರೂ ಪೃಥ್ವಿಯನ್ನು ಮುಂದಿನ​​​ ಸರಣಿಗಳಿಗೆ ಪರಿಗಣಿಸದಿರೋದು, ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕ ವಯಸ್ಸಿನಲ್ಲೇ ಟೀಮ್​ ಇಂಡಿಯಾಕ್ಕೆ ಕಾಲಿಟ್ಟು ವಿಕಸನ ಹೊಂದಿದ್ದ ಬಲಗೈ ಬ್ಯಾಟ್ಸ್​​ಮನ್​, 2018ರಲ್ಲಿ ತನ್ನ ನಾಯಕತ್ವದಲ್ಲಿ ಅಂಡರ್-19 ವಿಶ್ವಕಪ್ ಗೆದ್ದ. ಅದಾದ ಬಳಿಕ ಪೃಥ್ವಿ ಶಾರನ್ನು ಟೀಮ್​ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯ್ತು. ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಶತಕವನ್ನೂ ಸಿಡಿಸಿ, ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡ. ಆದರೆ ಕೆಲವೇ ತಿಂಗಳಲ್ಲಿ ಅನಗತ್ಯ ಕಾರಣಕ್ಕೆ ಮಾಡಿಕೊಂಡ ಎಡವಟ್ಟಿನಿಂದ, 8 ತಿಂಗಳ ಕಾಲ ಶಿಕ್ಷೆಗೆ ಒಳಗಾದ. ಶಿಕ್ಷೆಯ ಕರಾಳ ದಿನಗಳನ್ನು ಮೆಲುಕು ಹಾಕಿರುವ ಪೃಥ್ವಿ ಶಾ, ಜೀವನದಲ್ಲಿ ದೊಡ್ಡ ಪಾಠ ಕಲಿತೆ ಎಂದಿದ್ದಾರೆ.

ಕಾಫ್​​​​​ ಸಿರಪ್​​ ಸೇವಿಸಿ ಅಮಾನತಾಗಿದ್ದ ಪೃಥ್ವಿ ಶಾ..!
2019ರ ಮಾರ್ಚ್‌ 16.. ಪೃಥ್ವಿ ಶಾಗೆ ಅತ್ಯಂತ ಕರಾಳ ದಿನ. ಆತನ ಭವಿಷ್ಯಕ್ಕೆ ಕೊಳ್ಳಿಯಿಟ್ಟ ಈ ದಿನ, ಪೃಥ್ವಿಗೆ ಬ್ಲಾಕ್ ​ಮಾರ್ಕ್​ ಆಗಿಬಿಟ್ಟಿದೆ. ಯೆಸ್​.! ಆತ ಕಾಫ್​​​​​ ಸಿರಪ್​​ ಸೇವಿಸಿರುವ ಆರೋಪ ಸಾಬೀತಾದ ದಿನವದು. ಹೀಗಾಗಿ ಆತನಿಗೆ ಮಾರ್ಚ್​​ 16ರಿಂದ ನವೆಂಬರ್‌ 15ರವರೆಗೆ ಅಮಾನತು ಶಿಕ್ಷೆ ವಿಧಿಸಿ, ಬಿಸಿಸಿಐ ಆದೇಶ ಹೊರಡಿಸಿತ್ತು. ಅಂದಿನಿಂದ ಇಂದಿನವರೆಗೂ ಆ ಕೆಟ್ಟ ದಿನಗಳನ್ನ ನೆನೆದಾಗಲೆಲ್ಲಾ ಜೀವನದಲ್ಲಿ ಒಂದೊಳ್ಳೆ ಪಾಠ ಕಲಿತೆ ಎನ್ನುತ್ತಾರೆ ಪೃಥ್ವಿ..!

ಕೆಮ್ಮಿನ ಸಿರಪ್​​​​​ನಲ್ಲಿ ಮದ್ದು​ ಇದ್ದದ್ದು ಗೊತ್ತಿರಲಿಲ್ವಾ ಪೃಥ್ವಿಗೆ..?
ಉಸಿರಾಟದ ತೊಂದರೆ ಮತ್ತು ಕೆಮ್ಮು ಇದ್ದ ಕಾರಣ ಚಿಕಿತ್ಸೆ ಪಡೆದಿದ್ದ ಪೃಥ್ವಿ, ಬಳಿಸಿದ ಸಿರಪ್​​​​​ನಲ್ಲಿ ನಿಷೇಧಿತ ಅಂಶ ಇರೋದು ಗೊತ್ತಿರಲಿಲ್ಲವಂತೆ. ಇದನ್ನು ಆರೋಪ ಸಾಬೀತಾದ ಬಳಿಕ ಪೃಥ್ವಿಯೇ ಹೇಳಿರೋದು. ಸಿರಪ್​ ಪಡೆದ ಮೂರನೇ ದಿನಕ್ಕೆ, ಡೋಪ್​ ಪರೀಕ್ಷೆ ನಡೆಸಲಾಗಿತ್ತು. 2019ರ ಫೆಬ್ರವರಿಯಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ, ಪೃಥ್ವಿಯ ಮೂತ್ರದ ಮಾದರಿಯನ್ನು ಉದ್ದೀಪನ ಮದ್ದು ಘಟಕ ಸಂಗ್ರಹಿಸಿತ್ತು. ಎಲ್ಲ ರೀತಿಯ ಪರೀಕ್ಷೆಗಳ ನಂತರ, ಪೃಥ್ವಿಯ ಮೂತ್ರದ ಪರೀಕ್ಷೆಯಲ್ಲಿ, ನಿಷೇಧಿತ ಮದ್ದಿನ ಅಂಶ ಟೆರ್ಬುಟಲೈನ್ ಇರುವುದು ಪತ್ತೆಯಾಗಿತ್ತು. ಆದ್ದರಿಂದ ಅವರನ್ನು 2019ರ ಮಾರ್ಚ್‌ 16ರಿಂದ ನವೆಂಬರ್‌ 15ರವರೆಗೆ ಅಮಾನತು ಮಾಡಲಾಯ್ತು.

ಇದರಲ್ಲಿ ನನ್ನದೇನು ಪಾತ್ರವಿಲ್ಲ ಎಂದಿದ್ದ ಪೃಥ್ವಿ..!
ಕೆಮ್ಮಿಗಾಗಿ ಸಿರಪ್​​ ತೆಗೆದುಕೊಂಡಿದ್ದನ್ನ ಪೃಥ್ವಿ ಒಪ್ಪಿಕೊಂಡರೂ, ಈ ಘಟನೆಯಲ್ಲಿ ನನ್ನ ಪಾತ್ರವೇನು ಇಲ್ಲ ಎಂದಿದ್ದಾರೆ. ಅದಕ್ಕೆ ನನ್ನ ತಂದೆಯವರೇ ಭಾಗಶಃ ಕಾರಣವೆಂದು ಹೇಳಿದ್ದಾರೆ. ನಾವು ಇಂದೋರ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡುತ್ತಿದ್ದೆವು. ಆ ಸಮಯದಲ್ಲಿ ನನಗೆ ಶೀತ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಸಿರಪ್ ತೆಗೆದುಕೊಳ್ಳುವಂತೆ, ನನ್ನ ತಂದೆ ಸಲಹೆ ನೀಡಿದ್ರು. ಆದ್ರೆ ವೈದ್ಯರನ್ನ ಸಂಪರ್ಕಿಸದೇ ಸಿರಪ್​ ಸೇವಿಸಿದ್ದೇ ನಾನು ಮಾಡಿದ ದೊಡ್ಡ ತಪ್ಪು ಎಂದಿದ್ದಾರೆ. ಆದರೆ ಸೆಪ್ಟೆಂಬರ್‌ ತಿಂಗಳಲ್ಲಿ ಅಭ್ಯಾಸ ಆರಂಭಿಸಲು ಬಿಸಿಸಿಐ ಅವಕಾಶ ನೀಡ್ತು.

ಜೀವನದಲ್ಲಿ ದೊಡ್ಡ ಪಾಠ ಕಲಿತೆ ಎಂದ ಮುಂಬೈಕರ್​​..!
ವಿವಾದದ ನಂತರ ಇಮೇಜ್​​ ಡ್ಯಾಮೇಜ್​ ಅನ್ನೋ ಬಗ್ಗೆಯೇ ಹೆಚ್ಚು ಯೋಚಿಸಿದೆ. ಅದು ನನಗೆ ನಿಜವಾಗಿಯೂ ಕಷ್ಟದ ಹಂತವಾಗಿತ್ತು. ಜನರು ನನ್ನ ಬಗ್ಗೆ ಏನನ್ನು ಯೋಚಿಸ್ತಾರೆ ಅನ್ನೋದು ಕೂಡ ಕಾಡುತ್ತಿತ್ತು. ಹೀಗಾಗಿ ಈ ಎಲ್ಲದರಿಂದ ದೂರವಿರಲು ನಾನು, ಲಂಡನ್‌ಗೆ ಹೋದೆ. ಅಲ್ಲಿಯೂ ನಾನು ನನ್ನ ಕೋಣೆಯಿಂದ ಹೆಚ್ಚು ಹೊರಗೆ ಹೋಗಲಿಲ್ಲ. ಇದರಿಂದ ನನ್ನ ಜೀವನದಲ್ಲಿ ದೊಡ್ಡ ಪಾಠ ಕಲಿತೆ. ಕೇವಲ ಕೆಮ್ಮಿಗಾಗಿ ಸಿರಪ್‌ ಸೇವಿಸಿದ್ದೆ. ಅದರಲ್ಲಿ ನಿಷೇಧಿತ ಮದ್ದಿನ ಅಂಶವಿದೆ ಎಂಬುದು ಗೊತ್ತಿರಲಿಲ್ಲ. ಈಗ ಸಣ್ಣ ಪುಟ್ಟ ಔಷಧಕ್ಕೂ ಬಿಸಿಸಿಐ ವೈದ್ಯರನ್ನು ಸಂಪರ್ಕಿಸುತ್ತೇನೆ. ಯಾಕಂದ್ರೆ ನಾನು ನರಕದ ದಿನಗಳಿಗೆ ಮತ್ತೆ ಹೋಗಬೇಕೆಂಬ ಆಸೆಯಿಲ್ಲ ಎಂದಿದ್ದಾರೆ.

ಕಷ್ಟದ ದಿನಗಳನ್ನು ಎದುರಿಸಿದ್ದರ ಕುರಿತು ಹೇಳಿಕೊಂಡಿರುವ ಪೃಥ್ವಿ ಶಾ, ಕ್ರಿಕೆಟಿಗರು ವೈದ್ಯಕೀಯ ಔಷಧ ಬಳಸುವಾಗ ವೈದ್ಯರನ್ನು ಸಂಪರ್ಕಿಸೋದು ಮರೆಯಬೇಡಿ. ಏಕೆಂದರೆ ನನ್ನಷ್ಟು ನರಕದ ದಿನಗಳನ್ನು ಯಾರೂ ಅನುಭವಿಸಬಾರದು ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

The post ‘ ಕಾಫ್ ಸಿರಪ್ ‘ ಪ್ರಕರಣ- ನನ್ನ ತಂದೆಯಿಂದಲೇ ನನಗೆ ಶಿಕ್ಷೆ..! appeared first on News First Kannada.

Source: newsfirstlive.com

Source link