ಕಾರವಾರದಲ್ಲಿ ಯಾಚ್​ ಚಾಂಪಿಯನ್‌ಶಿಪ್‌ಗೆಂದು ಕಸರತ್ತು; ಕ್ರೀಡಾಪಟುಗಳ ಸಾಹ ಹೇಗಿದೆ?


ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಉತ್ತರ ಕನ್ನಡ ಜಿಲ್ಲೆ. ಇದೀಗ ಕ್ರೀಡಾಪಟುಗಳ ಅಭ್ಯಾಸ ತಾಣವಾಗಿಯೂ ಪರಿವರ್ತನೆಗೊಳ್ತಿದೆ. ಏಷಿಯನ್ ಚಾಂಪಿಯನ್‌ಶಿಪ್‌ನಲ್ಲಿ ಯಾಚ್ ಸ್ಪರ್ಧಾ ವಿಭಾಗದಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳು ಇದೀಗ ಕಾರವಾರದ ಬೀಚ್‌ನಲ್ಲಿ ಅಭ್ಯಾಸದಲ್ಲಿ ಮಗ್ನರಾಗಿದ್ದಾರೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಒಂದೆಡೆ ಅರಬ್ಬೀ ಸಮುದ್ರದಲ್ಲಿ ಕಡಲ ಹಕ್ಕಿಗಳ ಕಲರವ. ಇನ್ನೊಂದೆಡೆ ಈ ಹಕ್ಕಿಗಳ ಮುಂದೆ ನಾವೇನು ಕಮ್ಮಿಯಿಲ್ಲ ಎಂದು ನೀರಿನ ಮೇಲೆ ಯಾಚ್ ಸಾಗಿಸುತ್ತಾ ಸಾಹಸ ಪ್ರದರ್ಶನ ಮಾಡುತ್ತಿರುವ ಕ್ರೀಡಾಪಟುಗಳು. ಮತ್ತೊಂದೆಡೆ ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿರುವ ಕೋಚ್‌ಗಳು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ದೇವಭಾಗ್ ಬೀಚ್‌ನಲ್ಲಿ.

ಹೌದು..ವಿಶಾಲ ಕಡಲತೀರಗಳು, ಜಲಪಾತ, ದಟ್ಟಾರಣ್ಯ ಪ್ರದೇಶ ಐತಿಹಾಸಿಕ ದೇವಸ್ಥಾನಗಳು, ಸುಂದರವಾದ ಐಲ್ಯಾಂಡ್‌ಗಳು ಸೇರಿದಂತೆ ಹಲವು ವೈವಿಧ್ಯಮಯ ಸ್ಥಳಗಳನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಆದ್ರೆ, ಇದೀಗ ಈ ಪ್ರವಾಸಿ ತಾಣ ಸಾಹಸಮಯ ಕ್ರೀಡೆಗಳಿಗೂ ಫೇವರೆಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಯಾಚ್ ಕಾಂಪಿಟೇಷನ್‌ನಲ್ಲಿ ಭಾಗವಹಿಸಲು ತರಬೇತಿ ನಡೆಯುತ್ತಿದೆ. ಇದೇ ತಿಂಗಳಾಂತ್ಯದಲ್ಲಿ ಅಬುದಾಬಿಯಲ್ಲಿ ನಡೆಯುವ ಏಷಿಯನ್ ಚಾಂಪಿಯನ್ ಶಿಪ್​ನಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯಲ್ಲಿ ಮಗ್ನರಾಗಿದ್ದಾರೆ.

ಅಂದಹಾಗೆ, ಭೋರ್ಗರೆಯುವ ಸಮುದ್ರದ ಅಲೆಗಳ ಮೇಲೆ ಗಾಳಿಯನ್ನೇ ಆಧಾರವನ್ನಾಗಿಸಿಕೊಂಡು ಕ್ರೀಡಾಪಟುಗಳು ಮಾಡುವ ಸಾಹಸ ಯಾವುದೇ ಅದ್ಭುತಕ್ಕೇನೂ ಕಮ್ಮಿಯಿಲ್ಲ. ಯಾಚ್ ದೋಣಿ ಮೂಲಕ ಕಡಲ ಅಲೆಗಳನ್ನು ಎದುರಿಸಿಕೊಂಡು ಯುವಕರು ಸಾಗುವ ಪರಿ ನೋಡುಗರಲ್ಲಿ ರೋಮಾಂಚನ ಮೂಡಿಸುತ್ತದೆ. ದೇವಭಾಗ್ ಕಡಲತೀರ ತರಬೇತಿಗೆ ಉತ್ತಮ‌ ತಾಣವಾಗಿದ್ದು, ಸ್ಪರ್ಧಾಳುಗಳಿಗೆ ಉತ್ತಮ ಅನುಭವ ನೀಡ್ತಿದೆ.‌ ಇನ್ನು ಅಬುದಾಬಿಯಲ್ಲಿ ನಡೆಯುವ ಏಷಿಯನ್ ಚಾಂಪಿಯನ್ಸ್ ಕ್ರೀಡಾಕೂಟದಲ್ಲಿ ದೇಶದ 26 ಶಿಬಿರಾರ್ಥಿಗಳು ಉತ್ತಮವಾಗಿ ತರಬೇತಿ ಪಡೆಯುತ್ತಿದ್ದಾರೆ ಎಂದಿದ್ದಾರೆ ತರಬೇತುದಾರರು.

ಒಟ್ಟಿನಲ್ಲಿ ಇದೇ ತಿಂಗಳಾಂತ್ಯದಲ್ಲಿ ನಡೆಯುವ ಏಷಿಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಈ ಕ್ರೀಡಾಪಟುಗಳಿಗೆ ಶುಭಾ ಕೋರುತ್ತಾ, ಉತ್ತರ ಕನ್ನಡ ಜಿಲ್ಲೆ ಕ್ರೀಡೆಯ ಹಬ್ ಕೂಡಾ ಆಗಲಿ ಅನ್ನೋದು ನಮ್ಮ ಆಶಯ.

ವಿಶೇಷ ಬರಹ: ಸಂದೀಪ್ ಸಾಗರ್ ನ್ಯೂಸ್ ಫಸ್ಟ್ ಕಾರವಾರ

News First Live Kannada


Leave a Reply

Your email address will not be published.