ಬೆಂಗಳೂರು: ವೃದ್ದ ದಂಪತಿ ಪ್ರೀತಿಯ ಶ್ವಾನವನ್ನ ಮಕ್ಕಳಿಗಿಂತ ಮುದ್ದಾಗಿ ನೋಡ್ಕೊಳ್ತಿದ್ರು. ಮಕ್ಕಳು ಬೇರೆಡೆ ವಾಸವಿದ್ರು, ಮಕ್ಕಳು ಜೊತೆಲಿರದ ನೋವನ್ನ ಪ್ರೀತಿಯ ಶ್ವಾನ ಮರೆಸಿತ್ತು. ಆದ್ರೆ ಮನೆ ಮುಂದಿನ ಕಾರಿಗೆ ಶ್ವಾನ ಮೂತ್ರ ವಿರ್ಸಜನೆ ಮಾಡಿದ್ದಕ್ಕೆ, ಕಾರಿನ ಮಾಲೀಕ ವಯೋವೃದ್ದನ ಹಲ್ಲು ಮುರಿದು ವಿಕೃತಿ ಮೆರೆದಿದ್ದಾನೆ.
ವಯೋವೃದ್ದನಿಗೆ ಕಲ್ಲಿನಿಂದ ಎಸೆದು ಹಲ್ಲೆ
ಹಲ್ಲೆಗೆ ಒಳಗಾಗಿರೋ ವೃದ್ಧನ ಹೆಸರು ಗೇರಿ ರೋಜಾರಿಯಾ. ಬಾಣಸವಾಡಿಯ ಚಿನ್ನಪ್ಪ ಲೇಔಟ್ನ ನಿವಾಸಿ. 71 ವರ್ಷದ ವೃದ್ಧ ಗೇರಿ ರೋಜಾರಿಯಾ ದಂಪತಿಯ ಮಕ್ಕಳು ಬೇರೆಡೆ ವಾಸವಿದ್ರು. ಮಕ್ಕಳು ಜೊತೆಲಿರದ ನೋವನ್ನ ಮರೆಯಲಿಕ್ಕೆ ಮನೆಯಲ್ಲಿ ಗೋಲ್ಡನ್ ರಿಟ್ರೈವರ್ ಶ್ವಾನವನ್ನ ಸಾಕಿದ್ರು. ಹೀಗಿರೋ ವೇಳೆ ಕಳೆದ ಭಾನುವಾರ ರಾತ್ರಿ ಗೇರಿ ರೋಜಾರಿಯಾರ ಶ್ವಾನ ಎದುರು ಮನೆಯ ಚಾರ್ಲ್ಸ್ ಎಂಬುವವರ ಐಷಾರಾಮಿ ಕಾರಿನ ಮೇಲೆ ಮೂತ್ರ ವಿರ್ಸಜನೆ ಮಾಡಿತ್ತು.
ಇದಕ್ಕೆ ಕುಪಿತಗೊಂಡ ಕಾರು ಮಾಲೀಕ ಚಾರ್ಲ್ ತನ್ನ ಮನೆಯ ಎರಡನೇ ಪ್ಲೋರ್ ಬಾಲ್ಕನಿಯಲ್ಲಿ ನಿಂತು ವೃದ್ಧ ದಂಪತಿಗೆ ಬೈಯ್ಯಲಿಕ್ಕೆ ಶುರು ಮಾಡಿದ್ದಾನೆ. ಕಡೆಗೆ ಮಾತಿಗೆ ಮಾತು ಬೆಳೆದು ಮನೆಯ ಬಾಲ್ಕನಿಯಿಂದಲೇ ವೃದ್ಧನ ಮೇಲೆ ಕಲ್ಲು ಎಸೆದಿದ್ದಾನೆ. ಕಲ್ಲೆಟಿನ ರಭಸಕ್ಕೆ ಸ್ಥಳದಲ್ಲಿ ವಯೋವೃದ್ದ ರೋಜಾರಿಯಾ ರ ಎರಡು ಹಲ್ಲು ಮುರಿದಿವೆ.
ಈ ದೃಶ್ಯಗಳು ಸಿಸಿಟಿ ಟಿವಿಯಲ್ಲಿ ದಾಖಲಾಗಿದ್ದು, ಸದ್ಯ ಘಟನೆಯ ನಂತರ ಹಲ್ಲೆ ಮಾಡಿರೋ ಚಾರ್ಲ್ಸ್ ಎಂಬುವವರ ವಿರುದ್ದ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತ ಪೊಲೀಸರು ಎಫ್.ಐ.ಆರ್ ರಿಜಿಸ್ಟರ್ ಮಾಡ್ತಿದ್ದಂತೆ ಆರೋಪಿ ಚಾರ್ಲ್ಸ್ ಕಾರಿನ ಸಮೇತ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಅದೇನೆ ಇರ್ಲಿ ಶ್ವಾನ ಕಾರಿನ ಟೈಯರ್ ಮೇಲೆ ಮೂತ್ರ ಮಾಡ್ತು ಅನ್ನೊ ಕ್ಷುಲ್ಲಕ ಕಾರಣಕ್ಕೆ ಹಿರಿಜೀವ ಅನ್ನೊದು ಮರೆತು ಕಲ್ಲೆಸೆದು ಹಲ್ಲೆ ನಡೆಸಿರೋದು ಆರೋಪಿಯ ವಿಕೃತ ಮನಸ್ಥಿತಿಯನ್ನ ತೋರಿಸ್ತಿದೆ.