ಕರ್ನಾಟಕ ಹೈಕೋರ್ಟ್
ಬೆಂಗಳೂರು: ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ವಿವಾದ ತಂದೊಡ್ಡಿತ್ತು. ಹೀಗಾಗಿ ಸರ್ಕಾರದ (State Government) ಕ್ರಮ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಹೈಕೋರ್ಟ್ಗೆ (High court) ಪಿಐಎಲ್ ಸಲ್ಲಿಸಿದ್ದು, ಕನ್ನಡ ಕಲಿಕೆ ಕಡ್ಡಾಯ ಪ್ರಶ್ನಿಸಿದ್ದ ಪಿಐಎಲ್ (IPL) ವಿಚಾರಣೆ ಇಂದು ನಡೆದಿದೆ. ಕನ್ನಡ ಕಲಿಯಬಯಸದ ವಿದ್ಯಾರ್ಥಿಗಳಿಗೆ ಕಡ್ಡಾಯ ಬೇಡ. ಹೈಕೋರ್ಟ್ನ ಈ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ. ಅಲ್ಲದೇ ವಿಶ್ವವಿದ್ಯಾಲಯಗಳಿಗೆ (University) ಸರ್ಕಾರ ಆದೇಶದ ಮಾಹಿತಿ ನೀಡಬೇಕಿತ್ತು. ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶಿಸಲು ಅರ್ಜಿದಾರರು ಮನವಿ ಕೂಡ ಮಾಡಿದ್ದರು. ಹೀಗಾಗಿ ಪಿಐಎಲ್ ಕುರಿತಾಗಿ ಎಲ್ಲರ ವಾದ ಆಲಿಸಲಾಗುವುದು. ಈ ಬಗ್ಗೆ ಇನ್ನಷ್ಟು ವಿಚಾರಣೆಯ ಅಗತ್ಯತೆ ಇದ್ದು, ವಿಚಾರಣೆ ಜನವರಿ 31 ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ಹೇಳಿಕೆ ನೀಡಿದ್ದಾರೆ.
ಕನ್ನಡ ಕಲಿಕೆ ಕಡ್ಡಾಯ ನೀತಿಯನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದ ಹೈಕೋರ್ಟ್
ಈ ಹಿಂದೆ ಕೂಡ ಸಿಜೆ ರಿತುರಾಜ್ ಅವಸ್ತಿ ಹಾಗೂ ನ್ಯಾ. ಸಚಿನ್ ಶಂಕರ್ ಮಗದುಮ್ ರವರ ಪೀಠ ಸರ್ಕಾರದ ಕ್ರಮಕ್ಕೆ ಅಸಮಾಧಾನ ಹೊರ ಹಾಕಿ ಇಂತಹ ಆದೇಶಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವುದು ಸೂಕ್ತವಲ್ಲ. ಕನ್ನಡ ಕಲಿಕೆ ಕಡ್ಡಾಯ ನೀತಿಯನ್ನು ಮರುಪರಿಶೀಲಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸಲಹೆ ನೀಡಿತ್ತು. ಸರ್ಕಾರದ ಕ್ರಮ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ ಶಾಸ್ತ್ರೀಯವಾದ ಕನ್ನಡ ಕಲಿಯುವಂತೆ ಆದೇಶದಲ್ಲಿ ಸೂಚಿಸಲಾಗಿಲ್ಲ ಎಂದು ವಾದ ಮಂಡನೆ ಮಾಡಿದ್ದರು. ಆದರೆ ಸರ್ಕಾರದ ವಾದವನ್ನು ಹೈಕೋರ್ಟ್ ಒಪ್ಪಲಿಲ್ಲ. ಬದಲಿಗೆ ಸರ್ಕಾರದ ಆದೇಶ ಮರುಪರಿಶೀಲಿಸುವಂತೆ ಸಲಹೆ ನೀಡಿತ್ತು.
ಸದ್ಯ ಇಂದು ಮತ್ತೆ ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ. ಇದರಿಂದ ಎಷ್ಟು ವಿದ್ಯಾರ್ಥಿಗಳು ಹೊರಹೋಗಿದ್ದಾರೆ ಗೊತ್ತೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ.
ಅರ್ಜಿದಾರರ ವಾದ
ಹಲವು ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಕನ್ನಡ ಕಲಿತಿರುವುದಿಲ್ಲ. ಆದರೆ ಪದವಿ ಸೇರಿದ ಕೂಡಲೇ ಕನ್ನಡ ಕಲಿಯಬೇಕೆಂದು ಕಡ್ಡಾಯಗೊಳಿಸುವುದು ಸರಿಯಲ್ಲ. ನಮ್ಮ ರಾಜ್ಯವಲ್ಲದೇ, ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರದ ಕ್ರಮದಿಂದ ಈ ಎಲ್ಲಾ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಆಯ್ಕೆ ಆಧರಿತ ಶಿಕ್ಷಣ ಕ್ಕೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು ಕನ್ನಡ ಕಲಿಕೆ ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಗಿಲ್ಲ. ಹೀಗಿರುವಾಗ ಸರ್ಕಾರದ ಆದೇಶ ಏಕಪಕ್ಷೀಯವಾಗಿದೆ. ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಹಾಗೂ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ ಕನ್ನಡ ಕಲಿಕೆ ಕಡ್ಡಾಯ ಆದೇಶ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ವಾದಿಸಲಾಗಿದೆ.