ಕೊರೊನಾ ಎರಡನೇ ಅಲೆ ದೇಶಾದ್ಯಂತ ಅಬ್ಬರಿಸಿದಾಗಿಂದಲೂ ಕೊರೊನಾದಿಂದ ಬಳಲ್ತಿರೋ ಜನರಿಗೆ ಸಹಾಯ ಮಾಡಲು ಸ್ವಯಂ ಪ್ರೇರಿತವಾಗಿ ಸ್ಯಾಂಡಲ್​ವುಡ್​​ ನಟ ಅರ್ಜುನ್​ ಗೌಡ ಕೊರೊನಾ ವಾರಿಯರ್​ ಆಗಿದ್ದಾರೆ. ಜನರ ಸಹಾಯಕ್ಕೆ ನಿಂತಿರುವ ಅರ್ಜುನ್​, ಆ್ಯಂಬುಲೆನ್ಸ್​ ಡ್ರೈವರ್​ ಆಗಿ ಆಸ್ಪತ್ರೆಗಳಿಗೆ ಸೋಂಕಿತರನ್ನ ಕರೆದುಕೊಂಡು ಹೋಗುವುದರ ಜೊತೆಗೆ, ಮೃತ ದೇಹಗಳ ಅಂತ್ಯ ಸಂಸ್ಕಾರವನ್ನೂ ನಡೆಸಿದ್ದಾರೆ. ಇದೀಗ ಕೊರೊನಾದಿಂದ ಮೃತಪಟ್ಟವರ ಅಸ್ಥಿಯನ್ನ ನಟ ಅರ್ಜನ್​ ಗೌಡ, ಕಾಶಿಗೆ ತೆರಳಿ ಗಂಗೆಯಲ್ಲಿ ವಿಸರ್ಜಿಸಿದ್ದಾರೆ.

ಹೌದು.. ಸುಮಾರು 100 ಮಂದಿ ಕೊರೊನಾ ಸೋಂಕಿತರ ದೇಹವನ್ನು ಸಂಸ್ಕಾರ ಮಾಡಿದ್ದ ನಟ ಅರ್ಜುನ್ ಗೌಡ, ಸದ್ಯ ಅದೇ ಮೃತ ದೇಹಗಳ ಬೂದಿಯನ್ನೂ ತೆಗೆದುಕೊಂಡು ಕಾಶಿಯ ಗಂಗೆಯಲ್ಲಿ ಬಿಟ್ಟಿದ್ದಾರೆ. ಅದೆಷ್ಟೋ ಮನೆಯವರು ಕೊರೊನಾದಿಂದ ಮೃತರಾದ ತಂದೆ-ತಾಯಿಯರ ದೇಹದ ಬಳಿಯೂ ಬರದಿದ್ದಾಗ, ಖುದ್ದು ಅರ್ಜುನ್​ ಗೌಡ ಮೃತ ದೇಹವನ್ನ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅದೇ ರೀತಿ ಆ ಮೃತ ದೇಹಗಳ ಅಸ್ಥಿಯನ್ನ ಗಂಗೆಯಲ್ಲಿ ವಿಸರ್ಜನೆ ಮಾಡಿದ್ದಾರೆ.

ಅರ್ಜುನ್​ ಈ ಸೇವೆಗೆ ಪ್ರಾಜೆಕ್ಟ್​ ಸ್ಮೈಲ್​​ ಟ್ರಸ್ಟ್​ ಅಂತ ಹೆಸರಿಟ್ಟಿದ್ದು, ರೋಗಿಗಳನ್ನ ಆಸ್ಪತ್ರೆಗೆ ಸಾಗಿಸೋದು ಹಾಗೂ ಮೃತ ದೇಹಗಳ ಅಂತ್ಯ ಸಂಸ್ಕಾರದ ನೆರವಿನ ಜೊತೆಗೆ ಆಕ್ಸಿಜನ್​ ಪೂರೈಸುವಲ್ಲೂ ಅರ್ಜುನ್​ ಸಹಾಯ ಮಾಡೋದಾಗಿ ಹೇಳಿಕೊಂಡಿದ್ದಾರೆ. ಅರ್ಜುನ್​ ಗೌಡ ಸೇವೆಗೆ ಮೆಚ್ಚಿರುವ ಭಾರತೀಯ ಸೈನ್ಯ, ಕಳೆದ ತಿಂಗಳು ಖುದ್ದು ಅವರಿಗೆ ಕರೆ ಮಾಡಿ ವರ್ಷದ ಒಂದರಿಂದ ಮೂರು ತಿಂಗಳು ಸೇನೆಗೆ ಸೇರಿಕೊಂಡು ಜನರ ಸೇವೆ ಮಾಡುವಂತೆ ಸೂಚಿಸಿದ್ದಾರೆ. ಅರ್ಜುನ್​ ಗೌಡ ಕನ್ನಡದ ಯುವರತ್ನ, ಒಡೆಯ, ರುಸ್ತುಂ ಹಾಗೂ ಆ ದೃಶ್ಯ ಚಿತ್ರಗಳಲ್ಲಿ ನಟಿಸಿದ್ದಾರೆ.

The post ಕಾಶಿಗೆ ತೆರಳಿ, ಕೊರೊನಾ ಮೃತರ ಅಸ್ಥಿಯನ್ನ ಗಂಗೆಯಲ್ಲಿ ವಿಸರ್ಜಿಸಿದ ನಟ ಅರ್ಜುನ್ ಗೌಡ appeared first on News First Kannada.

Source: newsfirstlive.com

Source link