ಭೂಮಿಯ ಮೇಲಿನ ಸ್ವರ್ಗ. ಭಾರತದ ಕಿರೀಟ ಕಾಶ್ಮೀರ. ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೇನೋ ಆಗ್ತಾ ಇದೆ. ಈ ಕಣಿವೆಯಲ್ಲಿ ಏನೋ ನಡೀತಾ ಇದೆ. ಮತ್ತೊಂದು ಮಹತ್ವದ ವಿದ್ಯಮಾನಕ್ಕೆ  ಕಣಿವೆ ನಾಡು ಸಾಕ್ಷಿಯಾಗಲಿದೆ ಅನ್ನೋ ಸುಳಿವು ಸಿಕ್ತಾ ಇದೆ. ಆದ್ರೆ ಏನಾಗುತ್ತೆ ಅನ್ನೋದೇ ಈಗಿರುವ ಕುತೂಹಲ. ಕಳೆದ ಎರಡು ವರ್ಷಗಳ ಹಿಂದೆ ಯಾರೂ ನಿರೀಕ್ಷಿಸದ ರೀತಿಯ ವಿದ್ಯಮಾನ ಜರುಗಿ ಹೋಗಿತ್ತು. ಇಡೀ ದೇಶದಲ್ಲೇ ಸಂಚಲನ ಕೂಡ ಉಂಟಾಗಿತ್ತು. ಆದ್ರೆ, ಈಗ ಮತ್ತೇನಾಗುತ್ತೆ ಅನ್ನೋದಕ್ಕೆ ಹಲವು ರೀತಿಯ ವ್ಯಾಖ್ಯಾನಗಳು ಕೇಳಿ ಬರ್ತಾ ಇವೆ.

ಯಾರನ್ನು ಬಂಧನಕ್ಕೊಳಪಡಿಸಲಾಗಿತ್ತೋ ಅವರ ಜೊತೆಗೇ ಮೀಟಿಂಗ್
ತೀವ್ರ ಕುತೂಹಲ ಕೆರಳಿಸಿರುವ ನರೇಂದ್ರ ಮೋದಿಯವರ ಮೆಗಾ ಪ್ಲಾನ್

ಎರಡು ವರ್ಷಗಳ ಹಿಂದೆ ಅಂದರೆ 2019ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿತ್ತು. ಅಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಲಾಗಿತ್ತು. ಅಲ್ಲದೇ ರಾಜ್ಯವನ್ನು ವಿಭಜಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿತ್ತು. ಯಾವುದನ್ನು ಮಾಡೋದಕ್ಕೆ ಅಸಾಧ್ಯ ಅಂತಾನೇ ಹೇಳಲಾಗ್ತಾ ಬರಲಾಗಿತ್ತೋ ಅದನ್ನು ಮಾಡಿತ್ತು ಮೋದಿ ಸರ್ಕಾರ. ಅವತ್ತು ಇಡೀ ದೇಶದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಅಷ್ಟೇ ಅಲ್ಲ ಕಾಶ್ಮೀರ ಕಣಿವೆಯಲ್ಲಂತೂ ದೊಡ್ಡ ಕಂಪನವೇ ಆಗಿ ಹೋಗಿತ್ತು. ಅಲ್ಲಿದ್ದ ರಾಜಕೀಯ ಪಕ್ಷಗಳೆಗೆಲ್ಲ ಅಸ್ತಿತ್ವವೇ ಅಲುಗಾಡಿ ಹೋಗಿತ್ತು. ದಶಕಗಳಿಂದ ಕಾಶ್ಮೀರವನ್ನು ಆಳುತ್ತಿದ್ದವರಿಗೆ ಶಾಕ್ ಆಗಿತ್ತು.

ಶೇಖ್ ಅಬ್ದುಲ್ಲಾರ ಪುತ್ರ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಓಮರ್ ಅಬ್ದುಲ್ಲಾ , ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಇವರನ್ನೆಲ್ಲ ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಇವರು ಪ್ರಚೋದನೆ ನೀಡಿ ಕಾಶ್ಮೀರದಲ್ಲಿ ಬಂಡಾಯ ಶುರುವಾಗಬಹುದು ಅಂತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರಿಗು ದಿಗ್ಬಂಧನ ಹೇರಲಾಗಿತ್ತು. ಈಗ ಇದೇ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಮೀಟಿಂಗ್ ನಡೆಸಲು ಡೇಟ್ ಫಿಕ್ಸ್ ಮಾಡಿದ್ದಾರೆ. ಆದರೆ, ಇದರ ಹಿಂದಿನ ಗುಟ್ಟು ಮಾತ್ರ ಬಿಟ್ಟು ಕೊಡುತ್ತಿಲ್ಲ.

ಹಾಲಿ ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗೌರ್ನರ್ ಆಡಳಿತ
ಕಣಿವೆ ರಾಜ್ಯದಲ್ಲಿ ಕೇಂದ್ರ ಸರ್ಕಾರದ್ದೇ ಹಿಡಿತ ಆಡಳಿತ
ಮುಂದೆ ಮತ್ತೇನು ಮಾಡ್ತಾರೆ ಪಿಎಂ ನರೇಂದ್ರ ಮೋದಿ?

ಜಮ್ಮು-ಕಾಶ್ಮೀರ ಮತ್ತು ಲಡಾಕ್ ನಲ್ಲಿ ಲೆಫ್ಟಿನೆಂಟ್ ಗೌರ್ನರ್ ಆಡಳಿತ ಇದೆ. ಕೇಂದ್ರದ ನಿಯಂತ್ರಣದಲ್ಲೇ ಕಣಿವೆ ರಾಜ್ಯ ಮುನ್ನಡೆಯುತ್ತಿದೆ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರೋದ್ರಿಂದ ಎಲ್ಲಾ ಕಡೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಾಗಿದೆ. ಕಾಶ್ಮೀರವನ್ನು ಯಾವಾಗ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಯ್ತೋ ಸದಾ ಕಿರಿ ಕಿರಿ ಮಾಡುವ ಪಾಕಿಸ್ತಾನಕ್ಕೆ ಮೋದಿ ಸರಿಯಾಗಿಯೇ ಉತ್ತರ ಕೊಡುವ ಪ್ಲಾನ್ ಮಾಡಿದ್ರು. ಕಣಿವೆಯಲ್ಲಿ ಇನ್ನಷ್ಟು ರಕ್ಷಣಾ ಕೋಟೆಯನ್ನು ಬಲಪಡಿಸಲಾಯಿತು. ಕಣಿವೆಯಲ್ಲಿ ಏನೇ ನಡೆದರೂ ಅದರ ಮೇಲೆ ದೆಹಲಿಯ ನಿಯಂತ್ರಣ ಇರ್ತಾ ಇತ್ತು. ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದೇ ಇರೋದ್ರಿಂದ ದೆಹಲಿಯೇ ಎಲ್ಲವನ್ನೂ ನಿಭಾಯಿಸ್ತಾ ಇತ್ತು. ಅವತ್ತು ವಿಶೇಷ ಸ್ಥಾನ ಮಾನ ರದ್ದುಪಡಿಸಿ ಕೇಂದ್ರಾಡಳಿತ ತಂದ ಮೇಲೆ ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ರು.

ಆದ್ರೆ ಅವರ ಕೂಗು, ವಿರೋಧ ಯಾರಿಗೂ ತಲುಪಲಿಲ್ಲ. ಕಾಶ್ಮೀರದಲ್ಲಿ ಮೋದಿ ಬದಲಾವಣೆ ತರಲು ಹೊರಟಿದ್ದಾರೆ ಅನ್ನೋದೇ ಬಹುತೇಕರ ಅಭಿಪ್ರಾಯವಾಗಿತ್ತು. ಹೀಗಾಗಿ ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡ ನಿರ್ಣಯದ ಬಗ್ಗೆ ದೇಶದ ಬೇರೆ ಕಡೆ ಎಲ್ಲೂ ಒತ್ತಡ ಇರಲಿಲ್ಲ. ಆದರೆ ಈಗ ಜೂನ್ 24ರಂದು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಾಶ್ಮೀರ ಪ್ರಾದೇಶಿಕ ಸರ್ವಪಕ್ಷ ಸಭೆ ಕರೆಯಲಾಗಿದೆ. ಇದರಿಂದ ಕೇಂದ್ರ ಸರ್ಕಾರದ ಮುಂದಿನ ನಡೆ ಬಗ್ಗೆ ಮತ್ತೆ ಕುತೂಹಲ ಮೂಡಿದೆ.

ಮೋದಿ ಕರೆದಿರುವ ಸರ್ವಪಕ್ಷ ಸಭೆಯ ಉದ್ದೇಶವೇನು?
ಸಭೆಯಲ್ಲಿ ಮೋದಿ ಮಂಡಿಸಲಿರುವ ನಿರ್ಣಯ ಯಾವುದು?
ಮುಂದೆ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಬದಲಾವಣೆ ಆಗುತ್ತಾ?

ಕಾಶ್ಮೀರ ಕಣಿವೆಯ ಚರ್ಚೆ ಮತ್ತೆ ಮುನ್ನೆಲೆಗೆ ಬರೋದಕ್ಕೆ ಕಾರಣ ಪ್ರಧಾನಿ ಮೋದಿಯವರು ಕರೆದಿರುವ ಸಭೆ. ಎರಡು ವರ್ಷಗಳ ಬಳಿಕ ಮೋದಿ ಯಾಕೆ ಕಾಶ್ಮೀರದ ರಾಜಕೀಯ ನಾಯಕರ ಸಭೆ ಕರೆದಿದ್ದಾರೆ ಅನ್ನೋದೇ ಈಗ ದೆಹಲಿಯಲ್ಲಿ ಚರ್ಚೆಯಾಗ್ತಾ ಇರುವ ವಿಚಾರ. ಅಷ್ಟೇ ಅಲ್ಲ, ಕಾಶ್ಮೀರದ ರಾಜಕೀಯ ಪಕ್ಷಗಳಲ್ಲೂ ಇದೀಗ ಚಟುವಟಿಕೆ ಗರಿಗೆದರಿ ಬಿಟ್ಟಿದೆ. ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಇಲ್ಲಿನ ಪ್ರಾದೇಶಿಕ ಪಕ್ಷಗಳ ನಾಯಕರು ಈಗಾಗಲೇ ಸಭೆಯನ್ನು ಕೂಡ ನಡೆಸಿದ್ದಾರೆ. ಸಭೆ ಯಾಕೆ ಕರೆದಿದ್ದಾರೆ ಅಂತಾನೆ ಗೊತ್ತಿಲ್ಲದಿರುವಾಗ ಯಾವ ರೀತಿ ವಿಚಾರಗಳನ್ನು ಮಂಡಿಸೋದು ಅನ್ನೋದ್ರ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಮತ್ತೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನ ಮಾನ ಸಿಗುತ್ತಾ? ಲಡಾಕ್ ಒಂದೇ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರೆಯುತ್ತಾ? ಮತ್ತೆ ಕಾಶ್ಮೀರದಲ್ಲಿ ಚುನಾವಣೆ ನಡೆಸಲು ತಯಾರಿ ನಡೆದಿದ್ಯಾ? ಹೀಗಾಗಿಯೇ ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಕರೆ ಹೋಗಿದ್ಯಾ? ಹೀಗೆ ಒಂದಾದ ಮೇಲೊಂದು ದು ಪ್ರಶ್ನೆಗಳು ಉದ್ಭವವಾಗುತ್ತಿವೆ. ಆದರೆ ಪ್ರಧಾನಿ ಮೋದಿ ಮತ್ತು ಅವರು ಅದೇನು ಪ್ಲಾನ್ ಮಾಡಿದ್ದಾರೆ ಕಾಶ್ಮೀರದ ನಾಯಕರಿಗೆ ಗೊತ್ತಿಲ್ಲ. ಅವರಾರು ಅಂದ್ರೆ ಅವರೇ ಅಜಿತ್ ಧೋವಲ್.

ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಸೂತ್ರಧಾರರಾ?
ಮೋದಿ -ದೋವಲ್ ನಡುವೆ ಈಗಾಗಲೇ ಏನು ಚರ್ಚೆ ನಡೆದಿದೆ?

ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ . ಬಹಳಷ್ಟು ಸಂಕೀರ್ಣ ಸಂದರ್ಭಗಳಲ್ಲಿ ಪಕ್ಕಾ ಪ್ಲಾನ್ ಮಾಡೋರೇ ಈ ದೋವಲ್. ರಕ್ಷಣೆಯ ವಿಷಯದಲ್ಲಿ, ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ದೋವಲ್ ಈಗ ದೆಹಲಿ ಪಡಸಾಲೆಯಲ್ಲಿ ಮಿಂಚುತ್ತಿರುವವರು. ಈಗ ನಡೆಯುತ್ತಿರುವ ವಿದ್ಯಮಾನಗಳ ಹಿಂದಿನ ಸೂತ್ರಧಾರರೇ ದೋವಲ್ ಅಂತ ಹೇಳಲಾಗ್ತಾ ಇದೆ. ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಈಗಾಗಲೇ ಚರ್ಚೆ ನಡೆದಿದೆ. ಕಾಶ್ಮೀರದ ಸದ್ಯದ ಪರಿಸ್ಥಿತಿಯ ಬಗ್ಗೆ ಇಬ್ಬರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಅದಾದ ನಂತರವೇ ಸರ್ವಪಕ್ಷ ಸಭೆ ನಿಗದಿ ಆಗಿದೆ ಅಂತ ಹೇಳಲಾಗ್ತಾ ಇದೆ. ಆದರೆ, ಸಭೆಯಲ್ಲಿ ಮೋದಿ ಪ್ರಸ್ತಾಪಿಸುವ ವಿಚಾರದ ಬಗ್ಗೆಯೇ ಈಗ ಕದನ ಕುತೂಹಲ.

ಸರ್ವಪಕ್ಷ ನಿಯೋಗಕ್ಕೆ ಅನುಭವಿ ಫಾರೂಕ್ ಅಬ್ದುಲ್ಲಾ ಸಾರಥ್ಯ
ಮುಂದಿನ ಬೆಳವಣಿಗೆಯ ಬಗ್ಗೆ ಕುತೂಹಲದಿಂದ ಇರುವ ಜನತೆ

ಮೋದಿ ಸರ್ವಪಕ್ಷ ಸಭೆ ಕರೆದಾಗಲೇ ಕಣಿವೆ ರಾಜ್ಯದಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಪ್ರಮುಖರು ಸಭೆ ನಡೆಸಿದ್ದಾರೆ. ಹಿರಿತನ ಮತ್ತು ಅನುಭವದಲ್ಲಿ ದೊಡ್ಡವರಾಗಿರುವ ಫಾರೂಕ್ ಅಬ್ದುಲ್ಲಾ ಅವರಿಗೇ ನಿಯೋಗದ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ದೆಹಲಿ ಮತ್ತು ಶ್ರೀನಗರದ ನಡುವಿನ ರಾಜಕೀಯವನ್ನು ಎಳೆ ಎಳೆಯಾಗಿ ಬಲ್ಲವರು ಫಾರೂಕ್ ಅಬ್ದುಲ್ಲಾ. ಹೀಗಾಗಿ ಅವರೇ ಮೋದಿಯವರ ಸಭೆಯಲ್ಲಿ ಪ್ರಾದೇಶಿಕ ಪಕ್ಷಗಳನ್ನು ಪ್ರತಿನಿಧಿಸಬೇಕು ಅಂತ ಕೇಳಿಕೊಳ್ಳಲಾಗಿದೆ. ಬಹುಷಃ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನ ಮಾನ ದೊರೆಯಬಹುದು ಅಂತ ಹೇಳಲಾಗ್ತಾ ಇದೆ. ಆದ್ರೆ ಮೋದಿ-ಅಮಿತ್ ಷಾ-ಅಜಿತ್ ದೋವಲ್ ಏನು ಪ್ಲಾನ್ ಮಾಡಿದ್ದಾರೆ ಈಗಲೇ ಸ್ಪಷ್ಟವಾಗಿ ಹೇಳೋದು ಕಷ್ಟ.

ದೇಶದ ಪ್ರಮುಖ ರಾಜಕೀಯ ವಿಶ್ಲೇಷಕರ ಚಿತ್ತ ಈಗ ಜೂನ್ 24ರ ಕಾಶ್ಮೀರದ ಸಭೆಯ ಮೇಲೆ ನೆಟ್ಟಿದೆ. ಕಾಶ್ಮೀರ ಸರ್ವಪಕ್ಷ ಸಭೆಯ ಬಗ್ಗೆ ಕದನ ಕುತೂಹಲವೂ ಮೂಡಿದೆ. ಕೇಂದ್ರ ಸರ್ಕಾರದ ಮುಂದಿನ ನಡೆಯ ಬಗ್ಗೆಯೂ ಬೇರೆ ಬೇರೆ ರೀತಿಯ ವಿಶ್ಲೇಷಣೆಗಳು ಕೇಳಿ ಬರ್ತಿವೆ. ಮುಂದೇನಾಗುತ್ತೆ ಕಾದು ನೋಡಬೇಕು.

The post ಕಾಶ್ಮೀರದಲ್ಲಿ ಮತ್ತೆ ಬದಲಾವಣೆಯಾಗುತ್ತಾ? ಮೋದಿ ಕರೆದಿರುವ ಸರ್ವಪಕ್ಷ ಸಭೆಯ ಉದ್ದೇಶವೇನು? appeared first on News First Kannada.

Source: newsfirstlive.com

Source link