
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕಾಶ್ಮೀರ ಕಣಿವೆಯಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ಪರಿಶೀಲಿಸಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉಪಸ್ಥಿತರಿರಲಿದ್ದಾರೆ.
ಶ್ರೀನಗರ: ಕಳೆದ ಒಂದು ತಿಂಗಳಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಹಿಂದೂಗಳ ಮೇಲೆ ಉದ್ದೇಶಿತ ಹತ್ಯೆಗಳು (Target Killings) ನಡೆಯುತ್ತಿದ್ದು, ಇದಾದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ಪರಿಶೀಲಿಸಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉಪಸ್ಥಿತರಿರಲಿದ್ದಾರೆ. ಕಾಶ್ಮೀರ ಕಣಿವೆಯಲ್ಲಿನ ಟಾರ್ಗೆಟ್ ಹತ್ಯೆಯು ಈ ಸಭೆಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿರುತ್ತದೆ. ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆಯೂ ಈ ಸಭೆಯಲ್ಲಿ ಪರಿಶೀಲಿಸಲಾಗುವುದು. ಈ ವರ್ಷದ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 14 ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದ್ದು, ಇದರಲ್ಲಿ 27 ಭಯೋತ್ಪಾದಕರ ಹತ್ಯೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರಾಜಸ್ಥಾನದ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಗುರುವಾರ ಹತ್ಯೆ ಮಾಡಿದ ನಂತರ, ಅಮಿತ್ ಶಾ ಅವರು ಎನ್ಎಸ್ಎ ಅಜಿತ್ ದೋವಲ್, ಆರ್ ಆ್ಯಂಡ್ ಎಡಬ್ಲ್ಯೂ ಮುಖ್ಯಸ್ಥ ಸಮಂತ್ ಗೋಯೆಲ್, ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಅರವಿಂದ್ ಕುಮಾರ್ ಮತ್ತು ಗೃಹ ಸಚಿವಾಲಯದ ಇತರ ಉನ್ನತ ಅಧಿಕಾರಿಗಳೊಂದಿಗೆ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯ ಬಗ್ಗೆ ಸಭೆ ನಡೆಸಿದರು.
15 ದಿನಗಳ ಅವಧಿಯಲ್ಲಿ ಕಾಶ್ಮೀರದ ಭದ್ರತೆಯ ವಿಷಯವಾಗಿ ಗೃಹ ಸಚಿವ ಅಮಿತ್ ಶಾ ಅವರ ಎರಡನೇ ಪ್ರಮುಖ ಸಭೆ ಇದಾಗಿದೆ. ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಅಮರನಾಥ ಯಾತ್ರೆಯ ಭದ್ರತಾ ವ್ಯವಸ್ಥೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಒಟ್ಟಾರೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಅವರು ಎರಡು ವಾರಗಳ ಹಿಂದೆಯಷ್ಟೇ ಸಭೆ ನಡೆಸಿದ್ದರು.