ತಿರುವನಂತರಪುರಂ: ತೌಕ್ತೆ ಚಂಡಮಾರುತದಿಂದಾಗಿ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಲವೆಡೆ ಕರಾವಳಿ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ.

ತೌಕ್ತೆ ಚಂಡಮಾರುತದ ರೌದ್ರಾವತಾರದಿಂದ ಕೇರಳದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕರಾವಳಿ ಭಾಗದ ಪ್ರದೇಶಗಳಲ್ಲಿ ತೀವ್ರ ಕಡಲ್ಕೊರೆತದಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಕಾಸರಗೋಡಿನಲ್ಲಿ ಸಮುದ್ರ ಪ್ರದೇಶದ ಸಮೀಪವಿದ್ದ ಎರಡು ಅಂತಸ್ತಿನ ಮನೆ ಕುಸಿದುಬಿದ್ದಿರುವುದಾಗಿ ತಿಳಿದು ಬಂದಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಪ್ರದೇಶದಲ್ಲಿ ವಾಸವಾಗಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕೇರಳದ ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ತೀವ್ರ ವಾಯುಭಾರ ಕುಸಿತದಿಂದ ಹವಾಮಾನ ವೈಪರೀತ್ಯವಾಗಲಿದೆ. ಇದರಿಂದ ತೌಕ್ತೆ ಚಂಡಮಾರುತ ಶನಿವಾರ ಬೆಳಗ್ಗಿನಿಂದಲೇ ಆರಂಭವಾಗಲಿದ್ದು, ಶನಿವಾರ ರಾತ್ರಿಯ ಬಳಿಕ ತೀವ್ರವಾಗಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತೌಕ್ತೆ ಚಂಡಮಾರುತ ಅರಬ್ಬಿ ಸಮುದ್ರದ ಈಶಾನ್ಯ ಪ್ರದೇಶ, ಲಕ್ಷದ್ವೀಪ, ಮಾಲ್ಡೀವ್ಸ್ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಅಲ್ಲದೇ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ತೀವ್ರ ಸ್ವರೂಪದ ಗಾಳಿ, ಮಳೆಯಾಗಲಿದೆ ಎಂದು ತಿಳಿಸಿದೆ.

The post ಕಾಸರಗೋಡಿನಲ್ಲಿ ‘ತೌಕ್ತೆ ಚಂಡಮಾರುತ’ ರೌದ್ರವತಾರಕ್ಕೆ ಮನೆ ಕುಸಿತ, ಜನರಲ್ಲಿ ಆತಂಕ appeared first on Public TV.

Source: publictv.in

Source link