ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಬರೋಬ್ಬರಿ ಒಂದೂವರೆ ವರ್ಷವಾಗಿದೆ. ವಿರಾಟ್ ಮಾತ್ರವಲ್ಲ, ವರ್ಲ್ಡ್​ ಕ್ರಿಕೆಟ್​​ನ ಫ್ಯಾಬ್​ ಫೋರ್​ ಪ್ಲೇಯರ್ಸ್​ ಕೂಡ, ಕೊಹ್ಲಿ ಹಾದಿಯಲ್ಲೇ ಈ ಹಿಂದೆ ಸಾಗಿದ್ರು. ದೇಶ-ವಿದೇಶಗಳಲ್ಲಿ ಯಾವುದೇ ಪಿಚ್​-ಕಂಡೀಷನ್ಸ್​​​​ನಲ್ಲಾದರೂ ಶತಕ ಗಳಿಸುತ್ತಿದ್ದ ಈ ಮಾಡ್ರನ್​ ಡೇ ಗ್ರೇಟ್ಸ್​, ಶತಕಕ್ಕಾಗಿ ಪರದಾಡಿದ್ರು ಅಂದ್ರೆ ನೀವು ನಂಬಲೇಬೇಕು. ಹಾಗಂತ ಈ ಅಂಕಿ-ಅಂಶಗಳೇ ಹೇಳ್ತಿವೆ.

ವಿರಾಟ್​ ಕೊಹ್ಲಿ, ಮಾಡ್ರನ್​ ಡೇ ಕ್ರಿಕೆಟ್​ನ ಸೂಪರ್​ಸ್ಟಾರ್ ಬ್ಯಾಟ್ಸ್​ಮನ್​. ವಿಶ್ವ ಕ್ರಿಕೆಟ್​​ನ ಫೈಯರ್​ಬ್ರಾಂಡ್​ ಕ್ರಿಕೆಟರ್​​. ದಶಕದ ಏಕದಿನ ಕ್ರಿಕೆಟರ್​ ಆಗಿ ಹೊರಹೊಮ್ಮಿರುವ ಕಿಂಗ್ ಕೊಹ್ಲಿ​, ಕ್ರಿಕೆಟ್ ಲೋಕದ ಸಾಮ್ರಾಟನಾಗಿ ಹಲವು ದಾಖಲೆಗಳನ್ನ ಬ್ರೇಕ್ ಮಾಡ್ತಾ ಸಾಗ್ತಿದ್ದಾರೆ. ಪ್ರತಿ ಸರಣಿಯಲ್ಲೂ, ಪ್ರತಿ ರನ್ನಿಗೂ ದಾಖಲೆ ಬರೆಯುವ​ ರನ್​ಮಷಿನ್​, ಅದ್ಯಾಕೋ ಒಂದೂವರೆ ವರ್ಷದಿಂದ ಶತಕ ಸಿಡಿಸದೆ, ಸೈಲೆಂಟ್​ ಆಗಿದ್ದಾರೆ.

ಕ್ರಿಕೆಟ್ನ ದಿಗ್ಗಜ ಸಚಿನ್​ ತೆಂಡೂಲ್ಕರ್​ರ ಶತಕಗಳ ದಾಖಲೆಗಳನ್ನ ಕೊಹ್ಲಿ, ಬ್ರೇಕ್​​ ಮಾಡ್ತಾರೆ ಅಂತಾನೇ ಹೇಳಲಾಗಿತ್ತು. ಆದರೆ ಕೊಹ್ಲಿ ಶತಕಗಳ ಬರ ಎದುರಿಸುತ್ತಿರೋದು, ಸಚಿನ್​ ದಾಖಲೆಗಳನ್ನ ಮುರಿಯೋಕೆ ಸಾಧ್ಯನಾ ಅನ್ನುವ ಪ್ರಶ್ನೆ ಹುಟ್ಟುಹಾಕಿದೆ. ಇನ್ನು ವಿರಾಟ್​ ಕೊಹ್ಲಿ ಕೊನೆಯದಾಗಿ ಶತಕ ಸಿಡಿಸಿದ್ದು, 2019ರ ನವೆಂಬರ್​​ನಲ್ಲಿ. ಅಂದಿನಿಂದ ಇಲ್ಲಿಯವರೆಗೂ ಒಂದೇ ಒಂದು ಶತಕಕ್ಕಾಗಿ ಕೊಹ್ಲಿ, ಪರದಾಡ್ತಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​​ನಲ್ಲಾದ್ರು ಕೊಹ್ಲಿ ಅಭಿಮಾನಿಗಳ ಆಸೆ ನೆರೆವೇರಿಸುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಯನ್ನ ಮತ್ತೆ ಹುಸಿಗೊಳಿಸಿದ್ರು.

ವಿರಾಟ್​ ಕೊಹ್ಲಿ ರನ್​​ಗಳಿಕೆಯಲ್ಲಿ ವೈಫಲ್ಯ ಕಾಣ್ತಿರೋದು, ತಂಡದ ಹಿನ್ನಡೆಗೂ ಕಾರಣವಾಗ್ತಿದೆ. ಕೊಹ್ಲಿ ಯಾವಾಗ ತನ್ನ ಹಳೆ ಫಾರ್ಮ್​​ಗೆ ಮರಳ್ತಾರೆ ಅನ್ನೋದು, ತೀವ್ರ ಕುತೂಹಲ ಕೆರಳಿಸಿದೆ. ವಿಶ್ವ ಕ್ರಿಕೆಟ್​​ನಲ್ಲಿ ವಿರಾಟ್​ ಕೊಹ್ಲಿ ಮಾತ್ರವಲ್ಲ. ಈ ಹಿಂದೆ ಫ್ಯಾಬ್​ ಫೋರ್​ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದ ಕೇನ್ ವಿಲಿಯಮ್ಸನ್, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್ ಕೂಡ, ಒಂದೇ ಒಂದು ಶತಕಕ್ಕಾಗಿ ಪರದಾಡಿದ್ರು.

ಸ್ಮಿತ್​​, ರೂಟ್​​, ವಿಲಿಯಮ್ಸನ್​ ಶತಕಕ್ಕಾಗಿ ತೆಗೆದುಕೊಂಡಿದ್ರು ಒಂದು ವರ್ಷ
ಕಿಂಗ್ ಕೊಹ್ಲಿ ಮಾತ್ರವಲ್ಲ, ಆಸ್ಟ್ರೇಲಿಯಾದ ಸ್ಟೀವ್​​ ಸ್ಮಿತ್​​, ಇಂಗ್ಲೆಂಡ್​ನ ಜೋ ರೂಟ್​​ ಮತ್ತು ನ್ಯೂಜಿಲೆಂಡ್​​ನ ಕೇನ್​ ವಿಲಿಯಮ್ಸನ್​​ ಕೂಡ ವೈಫಲ್ಯ ಅನುಭವಿಸಿದ್ರು. ಆಲ್​​ಟೈಮ್​ ಗ್ರೇಟ್ ಕ್ರಿಕೆಟರ್ಸ್ ಆಗಿರುವ ಇವರು ಕೂಡ, ಸೆಂಚುರಿ ಸಿಡಿಸೋಕೆ ತೆಗೆದುಕೊಂಡಿದ್ದು ಒಂದೊಂದು ವರ್ಷ. ಇಂತಹ ವರ್ಲ್ಡ್​ ಕ್ಲಾಸ್​ ಪ್ಲೇಯರ್ಸ್ ಎಷ್ಟು ಇನ್ನಿಂಗ್ಸ್​​ಗಳಿಂದ​​ ಶತಕ ಬರ ಎದುರಿಸಿದ್ರು ಅನ್ನೋದನ್ನ ನೋಡೋಣ.

ಕೊಹ್ಲಿಯ ಕೊನೆಯ ಶತಕಕ್ಕೆ ಒಂದೂವರೆ ವರ್ಷ
ಮೂರು ಫಾರ್ಮೆಟ್​​ ಸೇರಿ 40ಕ್ಕೂ ಅಧಿಕ ಇನ್ನಿಂಗ್ಸ್​​ ಆಡಿರುವ ಕೊಹ್ಲಿ, ಶತಕ ಸಿಡಿಸಿ ಒಂದೂವರೆ ವರ್ಷವಾಗಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ, ಅದ್ಯಾಕೋ ಹೇಳಿಕೊಳ್ಳುವ ಪ್ರದರ್ಶನವನ್ನೇ ನೀಡ್ತಿಲ್ಲ. ಈ ಮೊದಲು ಸರಾಸರಿ ಪ್ರತಿ 6.5 ಇನಿಂಗ್ಸ್‌ಗೆ ಒಂದರಂತೆ ಶತಕ ಸಿಡಿಸುತ್ತಿದ್ದ ವಿರಾಟ್​​​ ಆಟ, ತಣ್ಣಗಾಗಿರೋದು ಅಭಿಮಾನಿಗಳಿಗೇ ತೀವ್ರ ನಿರಾಸೆಯಾಗಿದೆ. ಕೊಹ್ಲಿ 2019ರ ನವೆಂಬರ್​​ 22ರ ನಂತರ, ಈವರೆಗೂ ಒಂದೇ ಒಂದು ಶತಕ ಸಿಡಿಸಿಲ್ಲ. ಮೂರು ಫಾರ್ಮೆಟ್​​ಗಳಲ್ಲಿ 46 ಇನ್ನಿಂಗ್ಸ್​​ಗಳನ್ನ ಆಡಿರುವ ಕೊಹ್ಲಿ, 1,703ರನ್​ ಕಲೆಹಾಕಿದ್ದಾರೆ. 17 ಅರ್ಧಶತಕಗಳ ಸಿಡಿಸಿರುವ ವಿರಾಟ್, ಒಂದೂ ಶತಕ ಸಿಡಿಸಿಲ್ಲ.

ಕೇನ್​ ವಿಲಿಯಮ್ಸನ್​​ಗೂ ತಪ್ಪಲಿಲ್ಲ ಶತಕದ ಬರ
ಕೇನ್​ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಆಪತ್ಭಾಂದವ. ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಕಿರೀಟವನ್ನ ಮುಡಿಗೇರಿಸಿಕೊಂಡ ವಿಲಿಯಮ್ಸನ್​, ಸದ್ಯದ ಟೆಸ್ಟ್​ ಕ್ರಿಕೆಟ್​​​ನ ಅಧಿಪತಿ. 2012ರ ಜೂನ್​​ 30ರಿಂದ 2012ರ ನವೆಂಬರ್​​​ 19ರವರೆಗೆ ಮೊದಲ ಬಾರಿಗೆ ಶತಕ ಇಲ್ಲದೆ ಬ್ಯಾಟ್​ ಬೀಸಿದ್ರು. ಈ ಅವಧಿಯಲ್ಲಿ 23 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿದ್ರು. ಜೊತೆಗೆ 2ನೇ ಹಂತದಲ್ಲೂ ಶತಕಕ್ಕಾಗಿ ಪರದಾಡಿದ್ರು. 2015ರ ಡಿಸೆಂಬರ್​ 31 – 2016ರ ಆಗಸ್ಟ್​​ 3ರ ನಡುವೆ, ಒಂದೂ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ.

ಜೋ ರೂಟ್​​​ಗೂ ತಪ್ಪಿತ್ತು ಶತಕದ ‘ರೂಟ್​’​​
ಇಂಗ್ಲೆಂಡ್​ ಟೆಸ್ಟ್​ ತಂಡದ ಕ್ಯಾಪ್ಟನ್​ ಜೋ ರೂಟ್​ ಕೂಡ, ಚಾಂಪಿಯನ್​ ಆಟಗಾರ. ದೇಶ-ವಿದೇಶಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ರೂಟ್​, ಶತಕ ಸಿಡಿಸೋಕೆ ಲಾಂಗ್​ ಗ್ಯಾಪ್​ ತೆಗೆದುಕೊಂಡಿದ್ರು. ರೂಟ್​​ ಬ್ಯಾಟ್​ನಿಂದಲೂ 28 ಇನ್ನಿಂಗ್ಸ್​ಗಳಲ್ಲಿ, ಒಂದೂ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. 2013ರ ಆಗಸ್ಟ್​ 1ರಿಂದ 2014ರ ಮಾರ್ಚ್​​ 2 ನಡುವೆ 28 ಇನ್ನಿಂಗ್ಸ್​​ಗಳಲ್ಲಿ ಶತಕ ಬಾರಿಸಿರಲಿಲ್ಲ.

ಸ್ಟೀವ್​ ಸ್ಮಿತ್​​ ಶತಕಕ್ಕಾಗಿ ಪರದಾಡಿದ್ರು..!
ಕೊಹ್ಲಿ 46 ಇನ್ನಿಂಗ್ಸ್​ಗಳಿಂದ ಶತಕಕ್ಕಾಗಿ ಪರಿತಪಿಸುತ್ತಿದ್ರೆ, ಆಸಿಸ್​ನ ಸ್ಟೀವ್​ ಸ್ಮಿತ್​ ಶತಕಕ್ಕಾಗಿ ಗ್ಯಾಪ್​ ತೆಗೆದುಕೊಂಡಿದ್ದು 59 ಇನ್ನಿಂಗ್ಸ್​. ಸದ್ಯ ಆಸ್ಟ್ರೇಲಿಯಾದ ಆಧಾರ ಸ್ಥಂಭವಾಗಿರುವ ಸ್ಮಿತ್​, ಮ್ಯಾಚ್​ ವಿನ್ನರ್ ಕೂಡ ಹೌದು. ಆದರೆ 2010ರ ಫೆಬ್ರವರಿ 5ರಿಂದ 2013ರ ಆಗಸ್ಟ್​ 9ರವರೆಗೇ ಯಾವುದೇ ಅಂತಾರಾಷ್ಟ್ರೀಯ ಶತಕ ಸಿಡಿಸಿರಲಿಲ್ಲ.

ಶತಕಗಳ ಬರ ಎದುರಿಸುತ್ತಿದ್ದ ಆಟಗಾರರು, ಇದೀಗ ಹಳೆ ಫಾರ್ಮ್​ಗೆ ಮರಳಿದ್ದಾರೆ. ಆದ್ರೆ ಕೊಹ್ಲಿ ಮಾತ್ರ ಶತಕಕ್ಕಾಗಿ ಇನ್ನೂ ಪರದಾಡ್ತಿದ್ದಾರೆ. ಮುಂದಿನ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಾದ್ರೂ ಕೊಹ್ಲಿಯ ಶತಕದ ಬರ ನೀಗಲಿ ಅನ್ನೋದು, ಅಭಿಮಾನಿಗಳ ಆಶಯ.

The post ಕಿಂಗ್ ಕೊಹ್ಲಿಯಂತೆ ಈ ತ್ರಿಮೂರ್ತಿಗಳಿಗೂ ತಪ್ಪಲಿಲ್ಲ ಶತಕದ ಬರ appeared first on News First Kannada.

Source: newsfirstlive.com

Source link