ನಟ ಕಿಚ್ಚ ಸುದೀಪ್​ ಕಳೆದ ಎರಡು ವಾರಗಳಿಂದ ಬಿಗ್​ಬಾಸ್​ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯೋದಾಗಿ ಹೇಳಿರೋದನ್ನ ಕಿಚ್ಚ ಅಭಿಮಾನಿಗಳಿಗೆ ಟ್ವೀಟ್​ ಮೂಲಕ ತಿಳಿಸಿದ್ದರು. ಜೊತೆಗೆ ಎಲ್ಲವೂ ಸರಿಯಾಗಿದೆ, ವಿಶ್ರಾಂತಿ ಒಂದೇ ಅಗತ್ಯ ಅನ್ನೋ ಮಾತನ್ನ ಸುದೀಪ್​ ತಿಳಿಸಿದ್ದರು. ಇದೀಗ ತಾವು ಈ ವಾರಾಂತ್ಯದ ಬಿಗ್​ಬಾಸ್​ ವೇದಿಕೆಯಲ್ಲಿ ಕಾಣಿಸಿಕೊಳ್ಳೋದಾಗಿ ಟ್ವೀಟ್​ ಮಾಡಿ ಸಂತಸ ಮೂಡಿಸಿದ್ದಾರೆ.

ಹೌದು.. ಈ ಬಗ್ಗೆ ಟ್ವೀಟ್​ ಮಾಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​, ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿ ಹರಸಿದ, ಪ್ರಾರ್ಥಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನಾನು ಬಹಳ ಚೇತರಿಸಿಕೊಂಡಿದ್ದೇನೆ ಜೊತೆಗೆ ಈ ವಾರಾಂತ್ಯದ ಬಿಗ್​ಬಾಸ್​ ಸಂಚಿಕೆಯಲ್ಲಿ ನಿಮ್ಮ ಮುಂದೆ ಬರಲು ಕಾತರದಿಂದ ಎದುರು ನೋಡುತ್ತಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಡಾ. ವೆಂಕಟೇಶ್​ ಹಾಗೂ ಡಾ.ವಿನಯ್​​ ಅವರಿಗೆ ನನ್ನ ಧನ್ಯವಾದಗಳು. ನನ್ನ ಆರೋಗ್ಯ ಸರಿ ಹೋಗುವುದಕ್ಕಾಗಿ ಅದೆಷ್ಟೂ ದೇವಸ್ಥಾನಗಳಲ್ಲಿ ಸಲ್ಲಿಸಿದ ಪೂಜೆಗಳ ವಿಡಿಯೋಗಳನ್ನ ನೋಡಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ. ಈ ಪ್ರೀತಿಗೆ ಐ ಲವ್​ ಯೂ ಆಲ್​ ಅಷ್ಟೇ ಹೇಳಬಲ್ಲೆ’ ಅಂತ ಪ್ರೀತಿಯಿಂದ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಂದ್ಹಾಗೇ ಕಳೆದ ವಾರ ಕಿಚ್ಚ ಸುದೀಪ್​ ನಗರದ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಶುಕ್ರವಾರ ಡಿಸ್ಚಾರ್ಜ್​ ಆಗಿದ್ದಾರೆ ಅನ್ನೋ ಮಾಹಿತಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ. ಕರ್ನಾಟಕ ಮಾತ್ರವಲ್ಲದೇ ಜಪಾನ್​ ಅಭಿಮಾನಿಗಳು ಕೂಡ ಕಿಚ್ಚನ ಆರೋಗ್ಯದ ಬಗ್ಗೆ ವಿಚಾರಿಸಿದ್ದರು ಹಾಗೇ ಪೂಜೆ ಮಾಡಿಸಿದ್ದರು. ಇದೀಗ ತಮ್ಮ ಆರೋಗ್ಯ ಚೇತರಿಕೆಯ ಬಗ್ಗೆ ಅವರೇ ಮಾಹಿತಿ ನೀಡಿರೋದು ಕಿಚ್ಚನ ಅಭಿಮಾನಿಗಳಿಗೆ ಹಬ್ಬದಂತಾಗಿದೆ.

The post ಕಿಚ್ಚನ ಆರೋಗ್ಯದಲ್ಲಿ ಚೇತರಿಕೆ; ಈ ವಾರಾಂತ್ಯ ಬಿಗ್​ಬಾಸ್​ ವೇದಿಕೆಗೆ ವಾಪಾಸ್ ಸಾಧ್ಯತೆ appeared first on News First Kannada.

Source: newsfirstlive.com

Source link