ಕಿಡ್ನಿ ದಂಧೆ ಮಹಾಜಾಲ ಬಯಲು.. ಕರ್ನಾಟಕ ಪೊಲೀಸ್​ ಕಾರ್ಯಕ್ಕೆ ಗುಜರಾತ್ ಪೊಲೀಸರ ಶಬ್ಬಾಸ್​ಗಿರಿ 

ಕಿಡ್ನಿ ದಂಧೆ ಮಹಾಜಾಲ ಬಯಲು.. ಕರ್ನಾಟಕ ಪೊಲೀಸ್​ ಕಾರ್ಯಕ್ಕೆ ಗುಜರಾತ್ ಪೊಲೀಸರ ಶಬ್ಬಾಸ್​ಗಿರಿ 

ಆತ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್. ಆತ ನಮ್ಮವರಿಗೆ ಮಾತ್ರವಲ್ಲ ಬೇರೆ ರಾಜ್ಯಕ್ಕೂ ಬೇಕಾಗಿದ್ದ ಖತರ್ನಾಕ್ ಕ್ರಿಮಿ. ಆ ಕ್ರಿಮಿಯ ಹುಟ್ಟಡಗಿಸದೆ ಇದ್ದಿದ್ದರೇ ದೇಶಕ್ಕೆ ಮಾರಕ ಆಗ್ತಾಯಿದ್ದ ಅನ್ನೋ ಮಾತು ಈಗ ಕೇಳಿ ಬರ್ತಿದೆ. ಹಾಗಾದ್ರೆ ಆತ ಯಾರು? ಆತ ಯಾವ ಕೇಸಲ್ಲಿ ದೇಶಕ್ಕೆ ಮಾರಕ ಆಗ್ತಾಯಿದ್ದ? ಆತನನ್ನ ಬಂಧಿಸಿದ್ದು ಯಾರು ಗೊತ್ತಾ? ಅದೆಲ್ಲದರ ಡೀಟೇಲ್ಸ್ ಇಲ್ಲಿದೆ.

ಜನ ಕಷ್ಟ ಅಂತಾ ಬಂದ್ರೆ, ಅಥವಾ ಯಾವುದಾದ್ರು ಒಂದು ಸನ್ನಿವೇಶದಲ್ಲಿ ನನ್ನ ಕಿಡ್ನಿ ಮಾರಿ ಆದ್ರೂ ನಿನ್ನ ಕಷ್ಟ ತೀರಿಸ್ತಿನಿ, ಅಥವಾ ಕಿಡ್ನಿ ಯಾರಾದ್ರು ತಗೋತರಾ ಕೇಳಿ ಹೇಳು, ನನ್ನ ಕಿಡ್ನಿ ಮಾರಿ ದುಡ್ಡು ಮಾಡ್ಕೋತಿನಿ ಅಂತ ಡೈಲಾಗ್ ಹೊಡೀತಾರೆ. ಯಾಕಂದ್ರೆ ದೇಶದಲ್ಲೇ ಅಲ್ಲಾ ಕಿಡ್ನಿಗಾಗಿ ವಿಶ್ವದಲ್ಲೇ ಡಿಮ್ಯಾಂಡ್ ಜಾಸ್ತಿ ಇದೆ. ನಂಬ್ತಿರೋ ಬಿಡ್ತಿರೋ ಕಿಡ್ನಿ ಕೋಟಿ ಕೋಟಿ ಬೆಲೆಗೆ ಮಾರಾಟವಾಗುತ್ತೆ. ಅದಕ್ಕೆ ತಕ್ಕಂತೆ ಕಿಡ್ನಿ ಬೇಕು ಅಂತಾ ಅದೆಷ್ಟೋ ಜನ ರಿಜಿಸ್ಟರ್ ಮಾಡಿಕೊಂಡಿದ್ದರೆ, ಕಿಡ್ನಿ ಕೊಡ್ತಿವಿ ಅಂತಾ ಅದೆಷ್ಟೋ ಮಂದಿ ಇವತ್ತು ಅಧಿಕೃತವಾಗಿ ರಿಜಿಸ್ಟರ್ ಮಾಡಿಕೊಂಡಿರುತ್ತಾರೆ. ಇದರ ನಡುವೆ ಕಿಡ್ನಿ ಮಾರಾಟ ದಂಧೆ ಕೂಡ ನಡೀತಿದೆ. ಎಗ್ಗಿಲ್ಲದೆ ಅನೇಕ ಕಡೆ ತೆರೆ ಮರೆಯಲ್ಲಿ ಕಿಡ್ನಿ ಮಾರಟ ಆಗುತ್ತಿದೆ.

 ಅವನೊಬ್ಬನನ್ನ ಬಂಧಿಸದೇ ಇದ್ದಿದ್ರೆ ದೇಶಕ್ಕೇ ಮಾರಕವಾಗ್ತಿದ್ದ
ಯೆಸ್. ಈ ಮಾತು ಎಲ್ಲ ಕಡೆ ಈಗ ಕೇಳಿ ಬರುತ್ತಿದೆ. ಅವನೊಬ್ಬನನ್ನ ಬಂಧಿಸಬೇಕು ಅಂತಾ ದೇಶಾದ್ಯಂತ ಹಲವು ಕಡೆ, ಹಲವು ರಾಜ್ಯದ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆತನನ್ನ ಶತಾಯ ಗತಾಯ ಬಂಧಿಸಲೇಬೇಕು ಅಂತಾ ಅಂದುಕೊಳ್ಳುತ್ತಿದ್ದರು. ಅಲ್ಲದೇ ಇನ್ನಿಲದ ಹರಸಾಹವನ್ನ ಪಡುತ್ತಾ, ಹಲವು ಮಾಹಿತಿಗಳನ್ನ ಕಲೆ ಹಾಕುತ್ತಾ ಹುಡುಕಾಟವನ್ನ ನಡೆಸುತ್ತಿದ್ದರು. ಆದ್ರೆ ಎಲ್ಲಿಯೂ ಕೂಡ ಆತ ಸಿಕ್ಕಿ ಹಾಕಿಕೊಂಡಿರಲಿಲ್ಲ. ಆಗಲೇ ನೋಡಿ ಒಂದು ರೀತಿಯಲ್ಲಿ ಹಲವು ರಾಜ್ಯದ ಪೊಲೀಸರಲ್ಲಿ ಆತಂಕ ಶುರು ಆಗಿದ್ದು, ಅದರಲ್ಲಿ ಆತ ಏನಾದ್ರು ಬಂಧನವಾಗದೇ ಇದ್ದರೆ ಕೆಲ ರಾಜ್ಯಗಳಿಗೆ ಮಾತ್ರ ಸೀಮಿತವಾಗದೇ ಇಡೀ ದೇಶಕ್ಕೆ ಮಾರಕ ಆಗಬಹುದು ಅಂತಾ ಹೇಳಿಕೊಂಡಿದ್ದರಂತೆ. ಅಂಥ ಖತರ್ನಾಕ್ ಕ್ರಿಮಿ ಈಗ ಅರೆಸ್ಟ್​ ಆಗಿದ್ದಾನೆ. ಅದು ಬೇರೆಲ್ಲೂ ಅಲ್ಲಾ ಬೆಂಗಳೂರಿನಲ್ಲಿ ಆತನ ಬಂಧನ ಆಗಿದೆ.

ಬೆಂಗಳೂರಿನ ಬೇಗೂರು ಪೊಲೀಸರಿಂದ ಖದೀಮನ ಬಂಧನ
ಈತನ ಹೆಸರು ಡ್ನೂಡಿಮ್ ಓಬಿನ್ನಾ ಕಿಂಗ್ ಲೈ.. ಮೂಲತಃ ನೈಜೀರಿಯಾದವನು. ಈತನನ್ನ ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದು ಬೆಂಗಳೂರಿನ ಬೇಗೂರು ಪೊಲೀಸರು. ಈತನ ಬಂಧನದಿಂದ ದೇಶದಲ್ಲಿನ ಒಂದು ದೊಡ್ಡ ಜಾಲದ ಕೊಂಡಿ ಸಿಕ್ಕಿದಂತಾಗಿದೆ. ಅದೇ ಕಾರಣಕ್ಕಾಗಿ ಬೇಗೂರು ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.

ಕರ್ನಾಟಕ ಪೊಲೀಸರಿಗೆ ಗುಜರಾತ್ ಪೊಲೀಸ್​ ಶಹಬ್ಬಾಸ್​ಗಿರಿ
ಕರ್ನಾಟಕ ಪೊಲೀಸ್ ಅಂದ್ರೆ ಹಾಗೇ. ಯಾವುದಾದ್ರೂ ಒಂದು ಪ್ರಕರಣದ ಹಿಂದೆ ಬಿದ್ದರೆ ಅದನ್ನ ಪತ್ತೆ ಹಚ್ಚಿ, ಪ್ರಕರಣವನ್ನ ಬೇಧಿಸೋವರೆಗೂ ಬಿಡೋದಿಲ್ಲಾ. ಅದೇ ಕಾರಣಕ್ಕಾಗಿ ಇವತ್ತು ದೇಶದ ಅನೇಕ ರಾಜ್ಯಗಳು ಕರ್ನಾಟಕ ಪೊಲೀಸರು ಅಂದ್ರೆ ಹೆಚ್ಚು ಹೆಮ್ಮೆ ಪಡುತ್ತಾರೆ. ಅಲ್ಲದೇ ದೇಶದಲ್ಲಿ ಕರ್ನಾಟಕ ಪೊಲೀಸರು ಅಂತಾ ಬಂದಾಗ ಒಂದೊಳ್ಳೆ ಗೌರವ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಈಗ ಅದರ ಸಾಲಿಗೆ ಬೇಗೂರು ಪೊಲೀಸರು ಪತ್ತೆ ಹಚ್ಚಿದ ಕೇಸ್ ಕೂಡ ಸೇರಿಕೊಂಡಿದೆ. ಅಲ್ಲದೇ ಗುಜರಾತ್ ಪೊಲೀಸರು ಕರ್ನಾಟಕ ಪೊಲೀಸರಿಗೆ ಶಹಬ್ಬಾಸ್ ಗಿರಿಯನ್ನ ಕೊಟ್ಟಿದ್ದಾರೆ.

ವರ್ಷದಿಂದ ಹುಡುಕಾಟ ನಡೆಸುತ್ತಿದ್ದ ಗುಜರಾತ್ ಪೊಲೀಸರು
ಗುಜರಾತ್ ಪೊಲೀಸರು ಕಳೆದ ಒಂದು ವರ್ಷದಿಂದ ಈ ಗ್ಯಾಂಗ್ ಹಿಂದೆ ಬಿದ್ದಿತ್ತು. ಗುಜರಾತ್ನಲ್ಲಿ ಅನೇಕ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದ ಕಾರಣಕ್ಕಾಗಿ ಗುಜರಾತ್ ಪೊಲೀಸರು ತನಿಖೆ ನಡೆಸುತ್ತಿದ್ದರು. ಎಷ್ಟೇ ಪ್ರಯತ್ನ ಪಟ್ಟರು ಕೂಡ ಈ ಗ್ಯಾಂಗ್​ನ ಕಿಂಚಿತ್ತು ಸುಳಿವು ಸಿಕ್ಕಿರಲಿಲ್ಲ. ಇದೇ ಕಾರಣಕ್ಕಾಗಿ ಈಗ ಗುಜರಾತ್ ಪೊಲೀಸರು ಕರ್ನಾಟಕ ಪೊಲೀಸರಿಗೆ ಶಹಬ್ಬಾಸ್​ಗಿರಿ ಕೊಟ್ಟಿರೋದು.

ಅಷ್ಟಕ್ಕು ಇವರು ಮಾಡುತ್ತಿದ್ದ ಆ ಕೆಲಸವೇನು?
ಈ ವಿಚಾರವನ್ನ ಕೇಳಿದ್ರೆ ನಿಮಗೂ ಒಂದು ಕ್ಷಣ ಶಾಕ್ ಆಗಬಹುದು. ಅದು ಅಂತಿಂಥ ಕ್ರೈಂ ಅಲ್ಲ. ಬದಲಾಗಿ ಪೊಲೀಸ್ ಇಲಾಖೆಯೇ ಬೆಚ್ಚಿ ಬೀಳುವಂತ ಅಪರಾಧ ಅದು. ಅದೇ ಕಿಡ್ನಿ ಮಾರಾಟ ದಂಧೆ. ಹಾಗಾಂತ ಇವರು ಕಿಡ್ನಿ ಮಾರಾಟ ಮಾಡೋದಾಗಲಿ, ಕೊಡಿಸೋದಾಗಲಿ ಮಾಡುತ್ತಿರಲಿಲ್ಲ. ಬದಲಾಗಿ ಕಿಡ್ನಿ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದರು. ಲಕ್ಷ ಲಕ್ಷ -ಕೋಟಿ ಕೋಟಿ ಹಣ ಪಡೆದುಕೊಂಡು ವಂಚನೆ ಮಾಡುತ್ತಿದ್ದರು.

ಆನ್​ಲೈನ್ ಜಾಹಿರಾತು ನೀಡಿ ಸಂಪರ್ಕ ಮಾಡುತ್ತಿದ್ದರು
ಆನ್​ಲೈನ್ ಮೂಲಕ ವಂಚನೆ ಪ್ರಕರಣಗಳು ನಡೆಯುತ್ತಲೇ ಇದೆ. ಇದನ್ನೆ ಬಂಡವಾಳ ಮಾಡಿಕೊಂಡ ನೈಜಿರಿಯನ್ ಗ್ಯಾಂಗ್ ಮೊದಲಿಗೆ ಜಾಹಿರಾತು ನೀಡಿದ್ದರು. ಯಾರಾದ್ರೂ ಕಿಡ್ನಿ ದಾನ ಮಾಡೋರು ಇದ್ದರೆ ಅಂಥವರು ಈ ನಂಬರ್​ಗೆ ಸಂಪರ್ಕ ಮಾಡಿ. ಕಿಡ್ನಿ ಡೋನರ್​ಗೆ ₹4 ಕೋಟಿ ಕೊಡಲಾಗುತ್ತೆ ಅಂತಾ ಆ್ಯಡ್​​ನಲ್ಲಿ ಹೇಳಿದ್ದರು. ಇದನ್ನ ನೋಡಿದ ಎಂಥವರದ್ರು ಒಂದು ಕ್ಷಣ ಆಲೋಚನೆ ಮಾಡೇ ಮಾಡುತ್ತಾರೆ. ಇರೋ ಎರಡು ಕಿಡ್ನಿಯಲ್ಲಿ ಒಂದು ಕಿಡ್ನಿ ಕೊಟ್ಟಿದ್ದೇ ಆದ್ರೆ ನಾಲ್ಕು ಕೋಟಿ ಬರುತ್ತೆ. ಈಗಿರೋ ಪರಿಸ್ಥಿತಿಯಲ್ಲಿ ನಾಲ್ಕು ಕೋಟಿ ಬಂದಿದ್ದೇ ಆದ್ರೆ ಜೀವನ ಸೆಟಲ್ ಆಗಿಬಿಡುತ್ತೆ ಅನ್ನೋ ಆಲೋಚನೆಯಲ್ಲಿ ಜಾಹಿರಾತಿನಲ್ಲಿರೋ ಕಾಂಟ್ಯಾಕ್ಟ್ ನಂಬರ್​ಗೆ ಕರೆ ಮಾಡುತ್ತಾರೆ.

ಅಸಲಿ ಆಟ ಶುರು ಆಗೋದೆ ಇಲ್ಲಿಂದ ನೋಡಿ. ನೀವು ಕಿಡ್ನಿ ದಾನವನ್ನ ಮಾಡಬಹುದು, ಹಾಗೆ ಮಾಡಿದ್ರೆ ನಿಮಗೆ 4 ಕೋಟಿ ಹಣ ಸಿಗುತ್ತೇ ಅಂತಾ ಹೇಳಿ ನಂಬಿಸ್ತಾರೆ. ಹೀಗೆ ನಂಬಿಸಿ ನಂತರ ಅವರಿಂದ ಪ್ರೋಸೆಸ್ ಚಾರ್ಜ್, ಮೆಡಿಕಲ್ ಚಾರ್ಜ್ ಅಂತಾ ಹೇಳಿ ಲಕ್ಷ ಲಕ್ಷ ಹಣವನ್ನ ಪಡೆದುಕೊಳ್ಳುತ್ತಾರೆ. ಹೀಗೆ ಹಣವನ್ನ ಪಡೆದ ಮೇಲೆ ಮೊಬೈಲ್ ಫೋನ್ ಸ್ವೀಚ್ ಆಫ್ ಮಾಡಿಬಿಡುತ್ತಾರೆ. ಆಮೇಲೆ ಗೊತ್ತಾಗೋದು ನೋಡಿ ನಾವು ಮೋಸ ಹೋಗಿದ್ದೀವಿ ಅನ್ನೋದು.

ಕೇವಲ ಕಿಡ್ನಿ ಡೋನರ್​​ಗಳಿಂದ ಮಾತ್ರವಲ್ಲ, ಕಿಡ್ನಿ ಬೇಕಿರೋರಿಗೂ ಈ ಗ್ಯಾಂಗ್ ವಂಚನೆ ಮಾಡುತ್ತಿದ್ದರಂತೆ. ನಮಗೆ ಕಿಡ್ನಿ ಬೇಕು ಅಂತಾ ಜಾಹಿರಾತು ನೋಡಿ ಫೋನ್ ಮಾಡಿದವರಿಗೆ ನಮ್ಮ ಬಳಿ ಕಿಡ್ನಿ ಡೋನರ್ ಇದ್ದಾರೆ, ಅವರಿಗೆ ಮೊದಲು ಅಡ್ವಾನ್ಸ್ ಹಣ ಅಂತಾ ಕೊಟ್ಟಿದ್ದೇ ಆದ್ರೆ ನಿಮಗೆ ಕಿಡ್ನಿ ಸಿಗುತ್ತೇ, ನೀವು ಕಾನೂನು ರೀತಿಯಾಗಿ ಹೋದರೆ ಬಹಳ ದಿನಗಳು ಕಾಯಬೇಕು ಅಂತಾ ನಂಬಿಸಿ ಅವರಿಂದಲೂ ಲಕ್ಷ ಲಕ್ಷ ಹಣವನ್ನ ಪಡೆದುಕೊಂಡು ಅವರಿಗೂ ಮೋಸ ಮಾಡಿದ್ಧಾರೆ.

ಹೀಗೆ ದೇಶದಲ್ಲಿ ಇವತ್ತು ಲೆಕ್ಕಕ್ಕಿಲ್ಲದಷ್ಟು ಮಂದಿಗೆ ಈ ಗ್ಯಾಂಗ್ ವಂಚನೆ ಮಾಡಿದೆ ಅನ್ನೋದು ತನಿಖೆ ವೇಳೆ ತಿಳಿದು ಬಂದಿದೆ. ಹೀಗೊಂದು ದೊಡ್ಡ ಜಾಲವಿದೆ ಅನ್ನೋ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಯಾವಾಗ ಈ ಮಾಹಿತಿ ಸಿಗುತ್ತೋ ಪೊಲೀಸರು ಈ ಜಾಲದ ಹಿಂದೆ ಬಿದ್ದಾಗಲೇ ನೋಡಿ ಈತ ತಗ್ಲಾಕ್ಕೊಂಡಿದ್ದು.

ರಾಜಧಾನಿಯಲ್ಲಿ ಕಿಡ್ನಿಯ ಜಾಲ ಭೇದಿಸಿದ ಪೊಲೀಸರು
ಹೌದು. ಇದು ಒಂದು ರೀತಿಯಲ್ಲಿ ನಿಟ್ಟುಸಿರು ಬಿಡೋ ಸಂಗತಿ ಅಂದ್ರೆ ತಪ್ಪಾಗೋದಿಲ್ಲ. ಯಾಕಂದ್ರೆ ಬೆಂಗಳೂರು ಪೊಲೀಸರು ಅದ್ರಲ್ಲು ಬೇಗೂರು ಪೊಲೀಸರು ಬೇಧಿಸಿರೋ ಪ್ರಕರಣ ಅಂತಿಂಥದ್ದಲ್ಲ. ದೇಶದಲ್ಲೇ ಕಿಡ್ನಿಯ ಹೆಸರಲ್ಲಿ ನಡೆಸುತ್ತಿದ್ದ ದೊಡ್ಡ ವಂಚನೆಯ ಜಾಲವನ್ನ ಭೇದಿಸಿದ್ದಾರೆ. ಕಳೆದ ಒಂದು ವರ್ಷದಿಂದ ಈ ಜಾಲ ಬೆಂಗಳೂರಿಲ್ಲಿ ಇದ್ದುಕೊಂಡು ಆಪರೇಟ್ ಮಾಡುತ್ತಿತ್ತು ಅನ್ನೋದು ತಿಳಿದುಬಂದಿತ್ತು. ಹೀಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಈತನನ್ನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ಧಾರೆ. ಇನ್ನು ಈತನನ್ನ ಬಂಧಿಸಿದ ಬಳಿಕ ಈತನ ಬಳಿಯಿದ್ದ ಲ್ಯಾಪ್​ಟಾಪ್ ಹಾಗು ಮೊಬೈಲ್ ಸೇರಿದಂತೆ ಕೆಲವೊಂದು ವಸ್ತುಗಳನ್ನ ಜಪ್ತಿ ಮಾಡಿ, ತನಿಖೆಯನ್ನ ಮುಂದುವರೆಸಿದ್ದರು.

ಲ್ಯಾಪ್​ಟಾಪ್ ಚೆಕ್ ಮಾಡಿದ್ದ ಪೊಲೀಸರಿಗೆ ಶಾಕ್
ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು. ಆಗ ಆತನ ಬಳಿ ವಶಪಡಿಸಿಕೊಂಡಿದ್ದ ಲ್ಯಾಪ್​​ಟಾಪ್ ಚೆಕ್ ಮಾಡಲು ಮುಂದಾಗಿದ್ದರು. ಆತನ ಬಳಿಯಿಂದಲೇ ಪಾಸ್​ವರ್ಡ್​ ಹಾಕಿಸಿ ಲ್ಯಾಪ್ ಟಾಪ್ ಆನ್ ಮಾಡಿ ಅದರಲ್ಲಿದ್ದ ಕೆಲವೊಂದು ಮಾಹಿತಿಗಳನ್ನ ನೋಡಿ ಒಂದು ಕ್ಷಣ ಪೊಲೀಸರೇ ದಂಗಾಗಿದ್ದರು. ಯಾಕಂದ್ರೆ ಪೊಲೀಸರು ಲ್ಯಾಪ್​ಟಾಪ್​​ನಲ್ಲಿ ಕೆಲ ಸಾಕ್ಷಿಗಳು ಸಿಗುತ್ತೆ ಅಂದುಕೊಂಡಿದ್ದರು. ಆರೋಪಿಯ ಮೇಲ್​ಗಳನ್ನ ಪೊಲೀಸರು ಚೆಕ್ ಮಾಡಿದ್ದರು. ಆಗ ಅಲ್ಲಿ ನೂರಲ್ಲ ಇನ್ನೂರಲ್ಲ ಬರೋಬ್ಬರಿ ಸಾವಿರಕ್ಕು ಹೆಚ್ಚು ಮೇಲ್ ಗಳಿದ್ದವು. ಅದನ್ನ ಓಪನ್ ಮಾಡಿದಾಗ ಅದೆಲ್ಲವು ಕಿಡ್ನಿ ವಿಚಾರವಾಗಿ ಬಂದಿದ್ದ ಮೇಲ್​ಗಳು ಅನ್ನೋದು ಗೊತ್ತಾಗಿತ್ತು. ಅಲ್ಲದೇ ಅಷ್ಟೂ ಮೇಲ್​ಗಳನ್ನ ಯಾರೆಲ್ಲಾ ಕಳುಹಿಸಿದ್ದರೋ ಅವರಿಗೆಲ್ಲಾ ಈತ ಒಂದೊಂದು ನಂಬರ್​ಗಳನ್ನ ಕೊಟ್ಟಿದ್ದನಂತೆ. ಅಲ್ಲದೇ ಯಾವಾಗ ಕಾಲ್ ಮಾಡಬೇಕು ಅಂತಾ ಸೂಚಿಸಿದ್ದನಂತೆ. ಅವರು ಕರೆ ಮಾಡೋ ಸಮಯಕ್ಕೆ ಮಾತ್ರ ಸಿಮ್ ಆಕ್ಟೀವ್ ಆಗ್ತಾಯಿತ್ತು. ಅವರ ಜೊತೆ ಮಾತಾಡಿದ ಮೇಲೆ ಮತ್ತೆ ನಾವೇ ಕರೆ ಮಾಡ್ತಿವಿ ಅಂತಾ ಹೇಳಿ ಕಾಲ್ ಕಟ್ ಮಾಡಿ, ಸಿಮ್ ಕಾರ್ಡ್ ಅನ್ನ ಮೊಬೈಲ್ನಿಂದ ತೆಗೆದುಬಿಡುತ್ತಿದ್ದರಂತೆ. ಇದು ಇವರ ಮಾಸ್ಟರ್ ಪ್ಲಾನ್ ಆಗಿತ್ತು. ಯಾವಾಗ ಪೊಲೀಸರು ಲ್ಯಾಪ್ ಟಾಪ್ ಓಪನ್ ಮಾಡಿ ಜಾಲಾಡಿದ್ದರೋ ಆಗಲೇ ಈ ವಿಚಾರ ಬೆಳಕಿಗೆ ಬಂದಿದ್ದು.

ಆಂಧ್ರದಲ್ಲಿ ತಲೆ ಮರೆಸಿಕೊಂಡಿರೋ ಕಿಂಗ್ ಪಿನ್
ಇನ್ನು ಈತನನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತ ಸಹಚರ ಅನ್ನೋದು ಗೊತ್ತಾಗಿದ್ದು, ಈ ಜಾಲದ ಪ್ರಮುಖ ಕಿಂಗ್ ಪಿನ್ ಬೇರೆಯವನಿದ್ದಾನೆ ಅನ್ನೋದು ತಿಳಿದುಬಂದಿದೆ. ಆದ್ದರಿಂದ ಆತನಿಗಾಗಿ  ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಆತ ಪಕ್ಕದ ಆಂಧ್ರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆತನೇ ಗುಜರಾತ್ನಲ್ಲಿ ಓರ್ವರಿಗೆ ಕಿಡ್ನಿ ಸೇಲ್ ಮಾಡ್ತಿನಿ ಅಂತಾ ಹೇಳಿ ಸುಮಾರು 12 ಲಕ್ಷ ಪಡೆದುಕೊಂಡು ಮೋಸ ಮಾಡಿದ್ದಾನೆ ಅನ್ನೋ ಅಂಶ ಕೂಡ ಲ್ಯಾಪ್ ಟಾಪ್ನಲ್ಲಿದ್ದ ಕೆಲವೊಂದು ದಾಖಲೆಗಳಿಂದಾಗಿ ಪೊಲೀಸರಿಗೆ ತಿಳಿದು ಬಂದಿದೆ.

ಒಟ್ಟಿನಲ್ಲಿ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ತನಿಖೆ ವೇಳೆ ಆರೋಪಿಗಳು ಕೇವಲ ಕಿಡ್ನಿ ಹೆಸರಲ್ಲಿ ವಂಚನೆ ಮಾಡೋದಷ್ಟೆ ಅಲ್ಲದೆ, ಡ್ರಗ್ಸ್ ದಂಧೆಯನ್ನು ಕೂಡ ನಡೆಸುತ್ತಿದ್ದರು ಅನ್ನೋ ಮಾಹಿತಿ ಲಭ್ಯ ಆಗಿದೆ. ಸದ್ಯ ಓರ್ವವನನ್ನ ಬಂಧಿಸಿರೋ ಪೊಲೀಸರು ಕಿಂಗ್​ಪಿನ್​ಗಾಗಿ ಬಲೆ ಬೀಸಿದ್ದಾರೆ. ಆತನನ್ನ ಆದಷ್ಟು ಬೇಗ ಸೆರೆ ಹಿಡಿಯೋ ವಿಶ್ವಾಸದಲ್ಲಿದ್ದಾರೆ ಪೊಲೀಸರು. ಆತನ ಬಂಧನವಾದಮೇಲೆ ಇನ್ನಷ್ಟು ಮಾಹಿತಿಯಂತು ಸಿಗೋದು ಪಕ್ಕಾ.

 

The post ಕಿಡ್ನಿ ದಂಧೆ ಮಹಾಜಾಲ ಬಯಲು.. ಕರ್ನಾಟಕ ಪೊಲೀಸ್​ ಕಾರ್ಯಕ್ಕೆ ಗುಜರಾತ್ ಪೊಲೀಸರ ಶಬ್ಬಾಸ್​ಗಿರಿ  appeared first on News First Kannada.

Source: newsfirstlive.com

Source link