
ರಕ್ಷಿತ್ ಶೆಟ್ಟಿ
ಹಿಟ್ ಸಿನಿಮಾಗೆ ಸೀಕ್ವೆಲ್ ತಂದರೆ ಜನರು ಹೆಚ್ಚೆಚ್ಚು ನೋಡೋಕೆ ಇಷ್ಟಪಡುತ್ತಾರೆ. ಹೀಗಾಗಿ, ಚಿತ್ರಕ್ಕೆ ದೊಡ್ಡ ಪ್ರಚಾರ ಸಿಗಲಿದೆ. ಈ ಕಾರಣಕ್ಕೆ ‘ಕಿರಿಕ್ ಪಾರ್ಟಿ’ ಸೀಕ್ವೆಲ್ ಬಗ್ಗೆ ರಕ್ಷಿತ್ ಶೆಟ್ಟಿ ಯೋಚನೆ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ (Rakshit Shetty) ವೃತ್ತಿ ಜೀವನಕ್ಕೆ ಒಂದು ದೊಡ್ಡ ಯಶಸ್ಸು ತಂದುಕೊಟ್ಟ ಖ್ಯಾತಿ ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ (Kirik Party Movie) ಇದೆ. ಅದಕ್ಕೂ ಮೊದಲು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಅಂತಹ ಚಿತ್ರಗಳಲ್ಲಿ ಅವರು ನಟಿಸಿದ್ದರೂ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿರಲಿಲ್ಲ. ಯಾವಾಗ ‘ಕಿರಿಕ್ ಪಾರ್ಟಿ’ ಹಿಟ್ ಆಯಿತೋ ಅಲ್ಲಿಂದ ರಕ್ಷಿತ್ ಶೆಟ್ಟಿ ಅದೃಷ್ಟ ಬದಲಾಯಿತು. ನಾನಾ ರೀತಿಯ ಆಫರ್ಗಳು ಅವರನ್ನು ಹುಡುಕಿಬಂದವು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಬಾರಿ ಅವರು ಯಾವ ತಂಡದ ಜತೆಗೆ ಪ್ರೇಕ್ಷಕರ ಎದುರು ಬರಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.
‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದರು. ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗಡೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆರೆಕಂಡ ಬಳಿಕ ರಶ್ಮಿಕಾ ಯಾವ ಹಂತಕ್ಕೆ ಬೆಳೆದರು ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಸಂಯುಕ್ತಾ ಕೂಡ ಯಶಸ್ಸು ಕಂಡರು. ರಿಷಬ್ ಶೆಟ್ಟಿ ಅವರು ನಿರ್ದೇಶಕನಾಗಿ ಖ್ಯಾತಿ ಹೆಚ್ಚಿಸಿಕೊಂಡರು. ಈಗ ರಕ್ಷಿತ್ ಹಾಗೂ ರಿಷಬ್ ಇಬ್ಬರೂ ಜತೆಯಾಗಿ ‘ಕಿರಿಕ್ ಪಾರ್ಟಿ 2’ ತರಲು ಪ್ಲ್ಯಾನ್ ರೂಪಿಸಿದ್ದಾರೆ.
ಹಿಟ್ ಸಿನಿಮಾಗೆ ಸೀಕ್ವೆಲ್ ತಂದರೆ ಜನರು ಹೆಚ್ಚೆಚ್ಚು ನೋಡೋಕೆ ಇಷ್ಟಪಡುತ್ತಾರೆ. ಹೀಗಾಗಿ, ಚಿತ್ರಕ್ಕೆ ದೊಡ್ಡ ಪ್ರಚಾರ ಸಿಗಲಿದೆ. ಈ ಕಾರಣಕ್ಕೆ ‘ಕಿರಿಕ್ ಪಾರ್ಟಿ’ ಸೀಕ್ವೆಲ್ ಬಗ್ಗೆ ರಕ್ಷಿತ್ ಶೆಟ್ಟಿ ಯೋಚನೆ ಮಾಡಿದ್ದಾರೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಲಿದ್ದಾರೆ. ಪಾತ್ರವರ್ಗದಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನೋದು ಸದ್ಯದ ಕುತೂಹಲ.