ಬೆಂಗಳೂರು: ಕನ್ನಡತಿಯೊಬ್ಬರು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ. ಡಾಕ್ಟರೇಟ್ ಸೇರಿದಂತೆ ದೇಶವಿದೇಶಗಳಿಂದ ಬೆಂಗಳೂರು ಮೂಲದ ಈ ಯುವ ಉದ್ಯಮಿಗೆ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಅವರೇ ಡಾ. ಸ್ನೇಹಾ ರಾಕೇಶ್.

ಆಕಾರ್ ಮ್ಯಾಕ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಸ್ನೇಹಾ ರಾಕೇಶ್ ಅವರು 2020 ರ ಫಾರ್ಚೂನ್ ಇಂಡಿಯಾ ಮ್ಯಾಗಜೀನ್​ನ ಉದ್ಯಮ ವಲಯದಲ್ಲಿ ಉತ್ತಮ ಸಾಧನೆ‌ ಮಾಡಿದ 6 ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.  ಅಷ್ಟೇ ಅಲ್ಲದೆ ಯೂರೋಪ್ ಪಾರ್ಲಿಮೆಂಟ್ ನಲ್ಲಿ ತಮ್ಮ ವಿಚಾರಗಳನ್ನ ಮಂಡಿಸಿದ ಮೊದಲ ಭಾರತೀಯ ಪ್ರಜೆ ಎಂಬ ಹೆಗ್ಗಳಿಕೆಗೂ ಸ್ನೇಹಾ ರಾಕೇಶ್ ಪಾತ್ರರಾಗಿದ್ದಾರೆ.

ಸ್ನೇಹಾ ರಾಕೇಶ್ ಮೂಲತಃ ಹಾಸನದ ಚೆನ್ನರಾಯಪಟ್ಟಣದವರು.. ಅದೇ ತಾಲೂಕಿನ ಹುಲ್ಲೇನಹಳ್ಳಿ ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಸ್ನೇಹಾ.. ಸರ್ಕಾರಿ ಹಾಸ್ಟೆಲ್ ನಲ್ಲಿದ್ದುಕೊಂಡು ಡಿಪ್ಲೊಮಾ ಮುಗಿಸಿ ಬೆಂಗಳೂರಿಗೆ ಬಂದು ಉದ್ಯೋಗದ ಜೊತೆಜೊತೆಗೆ ಎಜುಕೇಷನ್ ಲೋನ್ ಪಡೆದು ಶ್ರಮವಹಿಸಿ ಇಂಜಿನಿಯರಿಂಗ್ ಪದವಿ ಹಾಗೂ ರಾಮಯ್ಯ ಕಾಲೇಜಿನಲ್ಲಿ ಎಂಎಸ್ ಸಿ ಪೂರ್ಣಗೊಳಿಸಿದ್ರು. ವಿದ್ಯಾಭ್ಯಾಸದ ಜೊತೆಗೆ ಆನ್ ಲೈನ್ ನಲ್ಲಿ ಫ್ರೀಲ್ಯಾನ್ಸರ್ ಆಗಿಯೂ ಪ್ರಾಜೆಕ್ಟ್ ಗಳನ್ನು ತೆಗೆದುಕೊಂಡು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.

ಅದೃಷ್ಟ ಪರೀಕ್ಷೆಗಿಳಿದ ಸ್ನೇಹಾ ತುಳಿದದ್ದು ಮುಳ್ಳಿನ ಹಾದಿ

ಅನುಭವ ಮತ್ತು ಜ್ಞಾನದ ನಂಬಿಕೆ ಮೇಲೆ 2012 ರಲ್ಲಿ ಸ್ನೇಹಿತರಿಂದ 12 ಲಕ್ಷ ಸಾಲ ಪಡೆದು ನಗರದ ಚಾಮರಾಜಪೇಟೆಯಲ್ಲಿ ಆಕಾರ್ ಮಾಕ್ಸ್ ಕಂಪನಿ ಆರಂಭಿಸಿದ್ರು.ಆರಂಭದಲ್ಲಿ ಆರ್ಥಿಕ ಸಮಸ್ಯೆ ಎದುರಾದ್ರೂ, ಸಾಲದ ಬಡ್ಡಿ ತೀರಿಸಲು ಹೆಣಗಾಡುವಂತಾದ್ರೂ ಕೈಗೆ ಸಿಕ್ಕ ಪ್ರಾಜೆಕ್ಟ್​ಗಳನ್ನ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಮುಳ್ಳಿನ ಹಾದಿಯನ್ನು ಹೂವಾಗಿಸಿಕೊಂಡ್ರು. ಇದಾದ ನಂತರ ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗ್ತಾ ಹೋಯ್ತು..

ಹತ್ತಾರು ಸಾಧನೆಗಳನ್ನ ಮಾಡಿರುವ ಸ್ನೇಹಾ ಈ ಹಿಂದೆ ನಿರುದ್ಯೋಗಿಗಳಿಗೆ ಮತ್ತು ಪದವಿ ಮುಗಿಸಿದವರಿಗೆ ಉದ್ಯೋಗ ಆಧಾರಿತ ಕೋರ್ಸ್ ಕಲಿಸುವ ಸಮಗ್ರಾಭಿವೃದ್ಧಿ ಟ್ರಸ್ಟ್ ಪ್ರಾರಂಭಿಸಿದ್ದರು. ಈ ಟ್ರಸ್ಟ್ ಮೂಲಕ ಸ್ನೇಹಾ ಸರಿಸುಮಾರು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.

ಹತ್ತಾರು ಸಾಮಾಜಿಕ ಸೇವೆಗಳನ್ನೂ ಮಾಡಿರುವ ಸ್ನೇಹಾ ಈ ಹಿಂದೆ ಕೇರಳ ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಔಷಧಿಗಳು, ಸ್ಯಾನಿಟರಿ ಪ್ಯಾಡ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ತಮ್ಮ ಕಾಳಜಿ ಮೆರೆದಿದ್ದಾರೆ. ಜೊತೆಗೆ ಹತ್ತಾರು ಜಾಗಗಳಿಗೆ ಭೇಟಿ‌ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಭವಿಷ್ಯ ಸುಭದ್ರಗೊಳಿಸಿಕೊಳ್ಳಲು ನೆರವಾಗುವಂಥ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಉದ್ಯಮದಲ್ಲಿ ತಮ್ಮ ಕೌಶಲ್ಯತೆ ಮೆರೆದಿರುವ ಸ್ನೇಹಾ ಅವರು ದೇಶದ ಯಶಸ್ವಿ ಮಹಿಳಾ ಉದ್ಯಮಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರ ಯಶಸ್ಸುಗಳ ಪಟ್ಟಿ ಎಂಥವರನ್ನೂ ಉತ್ತೇಜಿಸುವಂಥದ್ದು. ಸ್ನೇಹಾ ಅವರು ಸದ್ಯ 4 ಸಂಸ್ಥೆಗಳಿಗೆ ವ್ಯವಸ್ಥಾಪಕ ನಿರ್ದೇಶಕರು. ಇವರ ಸಂಸ್ಥೆಗಳಲ್ಲಿ ನೂರಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಕನಸು ಕಟ್ಟಿಕೊಂಡಿದ್ದ ಸ್ನೇಹಾ ಅದನ್ನ ನನಸು ಮಾಡಿಕೊಂಡಿದ್ದಾರೆ. ಸ್ನೇಹಾ ಅವರ ಸಾಧನೆ ಕಂಡು‌ ವಿದೇಶಗಳೂ ಸಹ ಬೆರಗುಗೊಂಡಿವೆ. ಅವರಿಗೆ ಹತ್ತಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ..

ಸ್ನೇಹಾ ಅವರನ್ನ ಅರಸಿಬಂದ ಪ್ರಶಸ್ತಿಗಳಿವು..

  1. ಮಹಾತ್ಮಾ ಗಾಂಧಿ ಲೀಡರ್ ಶಿಪ್ ಅವಾರ್ಡ್
  2. ಬ್ಯಾಂಕಾಕ್ ಹಿಂದ್ ರತನ್ ಅವಾರ್ಡ್ನ್ಯೂ
  3. ದೆಹಲಿ ವುಮೆನ್ ಅಚೀವರ್ ಆಫ್ ದಿ ಇಯರ್-2018
  4. ಕಾಯಕ ರತನ್ ಪ್ರಶಸ್ತಿ
  5. ರಾಷ್ಟ್ರೀಯ ಯುವ ಪುರಸ್ಕಾರ
  6. ಪ್ರತಿಷ್ಟಿತ ಡಾಕ್ಟರೇಟ್(22 ಸೆಪ್ಟೆಂಬರ್ 2018)
  7. ನ್ಯಾಚುರಲ್ ರಿಸೋರ್ಸ್ ಆಫ್ ಇಂಡಿಯಾ ಚಂಡೀಗಡ
  8. ಇಯು ಇಂಡಿಯಾ 40
  9. ಲಂಡನ್ ಬ್ರಿಟಿಷ್ ಪಾರ್ಲಿಮೆಂಟ್ ನ ಹೌಸ್ ಆಫ್ ಕಾಮನ್ಸ್ ನಲ್ಲಿನೀಡಲಾಗುವ ಗ್ಲೋಬಲ್‌ ಅಚೀವರ್ ಹೀಗೆ ಹತ್ತಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಇನ್ನು ಆಕರ್ ಮ್ಯಾಕ್ಸ್ ಕಂಪನಿ ವೆಬ್ ರಿಸರ್ಚ್, ಆ್ಯಪ್ ಡೆವಲೆಂಪ್ ಮೆಂಟ್, ಸಮಸಾಫ್ಟ್ ವೇರ್ ಡೆವಲಪ್ಮೆಂಟ್, ಪ್ರಾಜೆಕ್ಟ್ ಔಟ್ ಸೋರ್ಸ್, ಇನ್ಫರ್ಮೇಷನ್ ಟೆಕ್ನಾಲಜಿ, ಡಿಜಿಟಲ್ ಮಾರ್ಕೆಟಿಂಗ್, ಸರ್ವೀಸಸ್ ಇತ್ಯಾದಿ ಸೇವೆಗಳನ್ನು ನೀಡುತ್ತಿದೆ.

The post ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕನ್ನಡತಿ appeared first on News First Kannada.

Source: newsfirstlive.com

Source link