ಕುಟುಂಬದವರು ಬಲವಂತವಾಗಿ ದೂರ ಮಾಡಿದ್ದ ಲೆಸ್ಬಿಯನ್ ಜೋಡಿ ನೂರಾ- ಆದಿಲಾಳನ್ನು ಒಂದಾಗಿಸಿದ ಕೇರಳ ಹೈಕೋರ್ಟ್ | Forcibly separated by parents Kerala High Court allows lesbian couple to live together


ಕುಟುಂಬದವರು ಬಲವಂತವಾಗಿ ದೂರ ಮಾಡಿದ್ದ ಲೆಸ್ಬಿಯನ್ ಜೋಡಿ ನೂರಾ- ಆದಿಲಾಳನ್ನು ಒಂದಾಗಿಸಿದ ಕೇರಳ ಹೈಕೋರ್ಟ್

ಆದಿಲಾ ಮತ್ತು ನೂರಾ

Image Credit source: mathrubhumi

ಕೇವಲ ಐದರಿಂದ ಆರು ನಿಮಿಷಗಳ ನ್ಯಾಯಾಲಯದ ವಿಚಾರಣೆಯಲ್ಲಿ, ಆದಿಲಾ ಮತ್ತು ನೂರಾ ಅವರರಲ್ಲಿ ನೀವು ಒಟ್ಟಿಗೆ ವಾಸಿಸಲು ಬಯಸುತ್ತೀರಾ ಎಂದು ನ್ಯಾಯಾಲಯವು ಕೇಳಿದಾಗ ಅವರು ಹೌದು ಎಂದು ಹೇಳಿದರು. ಈಗ ಅವರು ಮತ್ತೆ ಒಂದಾಗಿದ್ದಾರೆ

ಕೇರಳದಲ್ಲಿನ (Kerala) ಲೆಸ್ಬಿಯನ್ ದಂಪತಿ (lesbian couple)ಪ್ರಕರಣವನ್ನು ಮಂಗಳವಾರ ವಿಚಾರಣೆ ನಡೆಸಿದ ಹೈಕೋರ್ಟ್ (Kerala High Court) ಇಬ್ಬರೂ ಒಂದಾಗಲು ಅನುಮತಿ ನೀಡಿದೆ. ಈ ಜೋಡಿಯಲ್ಲಿ ಓರ್ವ ಯುವತಿಯನ್ನು ಆಕೆಯ ಕುಟುಂಬ ಬಲವಂತವಾಗಿ ಕರೆದೊಯ್ದು ಆಕೆಯ ಸಂಗಾತಿಯಿಂದ ದೂರ ಮಾಡಿತ್ತು. ತನ್ನ ಸಂಗಾತಿಯನ್ನು ಕುಟುಂಬ ಅಪರಹಣ ಮಾಡಿದೆ ಎಂದು ಸಾಮಾಜಿಕ ಹೋರಾಟಗಾರ್ತಿಯೂ ಆದ ಆಕೆಯ ಸಂಗಾತಿ ಕೋಯಿಕ್ಕೋಡ್​​ನಲ್ಲಿರುವ ತಾಮರಶ್ಶೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಇದು ಕುಟುಂಬದೊಳಗಿನ ಜಗಳ ಎಂದು ಹೇಳಿ ಪೊಲೀಸರು ಸಹಾಯ ಮಾಡಲು ನಿರಾಕರಿಸಿದ್ದಾರೆ. ಇದಾದ ನಂತರ ಆಕೆ ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ತನ್ನ ಸಂಗಾತಿಯನ್ನು ಭೇಟಿ ಮಾಡಲು ಅನುಮತಿ ಪಡೆದುಕೊಂಡಿದ್ದಾಳೆ. 20ರ ಹರೆಯದ ಆದಿಲಾ ಮತ್ತು ನೂರಾ ಕೆಲವು ವರ್ಷಗಳಿಂದ ಲೆಸ್ಬಿಯನ್ ಜೋಡಿಗಳಾಗಿದ್ದಾರೆ. ಈ ವಿಷಯ ಮೇ 19ರಂದು ಅವರ ಕುಟುಂಬಕ್ಕೆ ಗೊತ್ತಾಗಿದೆ. ಈ ಸಂಬಂಧಕ್ಕೆ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದಾಗ ಆ ಜೋಡಿ ಮನೆಯಿಂದ ಓಡಿ ಹೋಗಿ ಕೋಯಿಕ್ಕೋಡಿನ ವನಜಾ ಕಲೆಕ್ಟಿವ್​​ನಲ್ಲಿ ರಕ್ಷಣೆ ಪಡೆದಿದೆ. ಅದೇ ರಾತ್ರಿ ಇವರಿಬ್ಬರ ಕುಟುಂಬದವರು ಬಂದು ಇಬ್ಬರನ್ನೂ ತಮ್ಮ ತಮ್ಮ ಮನೆಗಳಿಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಈ ಹೊತ್ತಲ್ಲಿ ನೂರಾಳನ್ನು ಕರೆದಕೊಂಡು ಹೋಗಲು ಅವರ ಕುಟುಂಬ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಆದರೆ ಆದಿಲಾಳ ಕುಟುಂಬವು ತಮ್ಮೊಂದಿಗೆ ಬರುವಂತೆ ಮಗಳ ಮನವೊಲಿಸಿದ್ದು,ಈ ಜೋಡಿಯನ್ನು ನಾವು ನೋಡಿಕೊಳ್ಳುತ್ತೇವೆ ಎಂದು ವನಜಾ ಕಲೆಕ್ಟಿವ್​​ಗೆ ಹೇಳಿ ಅಲ್ಲಿಂದ ಇವರಿಬ್ಬರನ್ನೂ ಹೊರಗೆ ಕರೆದುಕೊಂಡು ಬರುವಲ್ಲಿ ಯಶಸ್ವಿ ಆಗಿತ್ತು.

ಅಲ್ಲಿಂದ ಎರ್ನಾಕುಳಂನ ಆಲುವಾದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಇವರಿಬ್ಬರನ್ನೂ ಕರೆದುಕೊಂಡು ಹೋಗಿ ಇವರ ಮೇಲೆ ಮಾನಸಿಕ ಒತ್ತಡವನ್ನುಂಟು ಮಾಡಿದ್ದಾರೆ. ನಾವು ರಾತ್ರಿ ಜತೆಯಾದರೆ ಎಂಬ ಭಯದಿಂದ ಅವರು ನಮ್ಮನ್ನು ಮಲಗಲು ಬಿಡಲಿಲ್ಲ ಎಂದು ಆದಿಲಾ ಆರೋಪಿಸಿದ್ದಾರೆ.

ಮೇ 24ರಂದು ನಮಗೆ ಮತ್ತಷ್ಟು ಕಷ್ಟ ಎದುರಾಯಿತು. ಮೇ 23ರಂದು ನೂರಾಳ ಹೆತ್ತವರು ತಾಮರಶ್ಶೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿತು. ಮೇ 24ರಂದು ಆಲುವಾದ ಬಿನಾನಿಪುರಂ ಪೊಲೀಸರು ಈ ದೂರಿನ ಮೇರೆಗೆ ಈ ಯುವಜೋಡಿಗೆ ಸಮನ್ಸ್ ನೀಡಿತು. ಆದಾಗ್ಯೂ ಇವರಿಬ್ಬರೂ ಅಪ್ರಾಪ್ತರಲ್ಲ ಎಂದರಿತ ಬಿನಾನಿಪುರಂ ಸರ್ಕಲ್ ಇನ್ಸ್ ಪೆಕ್ಟರ್ ಪೋಷಕರ ಸುಳ್ಳುದೂರು ಆಧರಿಸಿ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದರು. ಮತ್ತೆ ಈ ಜೋಡಿ ಆದಿಲಾಳ ಸಂಬಂಧಿಕರ ಮನೆಗೆ ಮರಳಿತು.

ಇದಾದ ಕೆಲವೇ ಕ್ಷಣದಲ್ಲಿ ನೂರಾಳ ಅಮ್ಮ, ಅಜ್ಜ ಅಜ್ಮಿ, ಅತ್ತೆ ಆದಿಲಾಳ ಸಂಬಂಧಿಕರ ಮನೆಗೆ ಬಂದು ಬಲವಂತವಾಗಿ ನೂರಾಳನ್ನು ಎಳೆದುಕೊಂಡು ಹೋದರು. ಆ ಸಮಯದಲ್ಲಿ ಸೌದಿ ಅರೇಬಿಯಾದಿಂದ ಕೆಲವು ದಿನಗಳ ಹಿಂದೆಯಷ್ಟೇ ಮರಳಿದ್ದ ಆದಿಲಾಳ ಅಪ್ಪ ಮಗಳನ್ನು ಹಿಡಿದುಕೊಂಡರು. ಈ ಸಂಗತಿಯನ್ನು ಅರಿತ ವನಜ ಕಲೆಕ್ಟಿವ್ ಕೂಡಾ ಆದಿಲಾಳ ಸಂಬಂಧಿಕರ ಮನೆಗೆ ತಲುಪಿತು. ಅಷ್ಟೊತ್ತಿಗೆ ನೂರಾಳನ್ನು ಆಕೆಯ ಕುಟುಂಬ ಕರೆದುಕೊಂಡು ಹೋಗಿಯಾಗಿತ್ತು. ಅಲ್ಲಿಂದ ಆದಿಲಾಳನ್ನು ಕರೆತಂದ ಪೊಲೀಸ್ ಬೇರೊಂದು ಮನೆಯಲ್ಲಿ ಆಕೆಗೆ ಆಶ್ರಯ ನೀಡಿತು.

ನೂರಾಳನ್ನು ಬಲವಂತವಾಗಿ ಕರೆದೊಯ್ದಿದ್ದಕ್ಕೆ ಸಾಕ್ಷಿಯಾಗಿರುವ ಆದಿಲಾ ಅವರ ಸ್ನೇಹಿತೆ ಮತ್ತು ವನಜ ಕಲೆಕ್ಟಿವ್ ಸದಸ್ಯೆ ಧನ್ಯಾ ನೂರಾಳನ್ನು ಆಕೆಯ ಕುಟುಂಬ ದೈಹಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಪಡಿಸುತ್ತಾರೆ ಎಂಬ ಭಯವಿದೆ ಎಂದು ಹೇಳಿದರು. ಒಮ್ಮೆ ಪುರುಷನ ಜತೆ ಲೈಂಗಿಕ ಸಂಬಂಧವೇರ್ಪಟ್ಟರೆ ಇದೆಲ್ಲ ಮರೆತುಬಿಡುತ್ತಾರೆ ಎಂದು ನೂರಾಳ ಅತ್ತೆ ಹೇಳಿದ್ದಾರೆ ಎಂದಿದ್ದಾರೆ ಧನ್ಯಾ.

ಮೇ 27 ರಂದು, ವನಜಾ ಕಲೆಕ್ಟಿವ್ ಮತ್ತು ಆದಿಲಾ ಅವರು ನೂರಾ ಅವರ ಕುಟುಂಬದ ವಿರುದ್ಧ ದೂರು ನೀಡಲು ಕೋಯಿಕ್ಕೋಡ್ ನ ತಾಮರಶ್ಶೇರಿ ಪೊಲೀಸರನ್ನು ಸಂಪರ್ಕಿಸಿದರು. ಆದರೆ ಇದು ಕೌಟುಂಬಿಕ ವಿಷಯ ಎಂದು ಹೇಳಿಕೊಂಡು ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರು. ಈ ಮಧ್ಯೆ ದಂಪತಿಗೆ ಸಹಾಯ ಮಾಡಿದ ಬಿನಾನಿಪುರಂ ಸಿಐಗೆ ನೂರಾ ಕುಟುಂಬದಿಂದ ವಿಡಿಯೊ ಕಳುಹಿಸಿಕೊಡಲಾಗಿದೆ. ಆದಿಲಾಗೆ ತೋರಿಸಲಾದ ಈ ವಿಡಿಯೊದಲ್ಲಿ, ನೂರಾ ತನ್ನ ತಾಯಿಯ ಪಕ್ಕದಲ್ಲಿ ನಿಂತು  “ನನ್ನ ಹೆಸರು ನೂರಾ, ನಾನು ಲೆಸ್ಬಿಯನ್ ಮತ್ತು ನನ್ನ ಸಂಗಾತಿಯ ಹೆಸರು ಆದಿಲಾ. ಅವಳು ಸುರಕ್ಷಿತವಾಗಿರುತ್ತಾಳೆ, ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ ಎಂಬ ಭರವಸೆ ನನಗೆ ಬೇಕು ಎಂದು ಹೇಳುತ್ತಾಳೆ. ಆದರೆ, ನೂರಾ ಇರುವ ಸ್ಥಳ ಯಾವುದೆಂದು ತಿಳಿದು ಬಂದಿಲ್ಲ ಎಂದಿದ್ದಾಳೆ ಆದಿಲಾ.

ಮೇ 29 ರಂದು, ಆದಿಲಾ-ನೂರಾ ಫೋನಲ್ಲಿ ಮಾತನಾಡಿದ್ದಾರೆ. ಅಲ್ಲಿ ಆಕೆಯನ್ನು ಬಲವಂತವಾಗಿ ಮನಸ್ಸು ಬದಲಿಸುವಂತೆ ಮಾಡಲಾಗುತ್ತಿದೆ ಎಂದು ಆದಿಲಾ ಹೇಳಿದ್ದಾರೆ. ಕರೆಯ ಸಮಯದಲ್ಲಿ ನೂರಾ ಅಲಿ ಎಂಬ ಆಪ್ತ ಸಲಹೆಗಾರ ಮತ್ತು ಅವಳ ತಾಯಿ ಬಳಿ ಇದ್ದಳು. “ಅಲಿ ಎಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ನಾನು ಕೇಳಿದಾಗ, ಆಕೆ ನಿಖರವಾದ ವಿವರಗಳನ್ನು ಬಹಿರಂಗಪಡಿಸಲಿಲ್ಲ.ಅತ್ತಲಿಂದ ಅಲಿ”ನಾನು ಅನೇಕ ಸ್ಥಳಗಳಲ್ಲಿ ಕೆಲಸ ಮಾಡುತ್ತೇನೆ” ಎಂದು  ಹೇಳಿದರು. ನೂರಾ ತನ್ನ ತಾಯಿಯೊಂದಿಗೆ ತುಂಬಾ ರೋಷದಿಂದ ಮಾತನಾಡುವುದನ್ನು ನಾನು ಎಂದಿಗೂ ಕೇಳಿಲ್ಲ, ಆದರೆ ಆ ದಿನ ಆಕೆ ಸಿಟ್ಟಿನಿಂದ ಮಾತನಾಡಿದ್ದಳು. ‘ನೀವು ನನ್ನನ್ನು ಮತ್ತಷ್ಟು ಕಿರಿಕಿರಿಗೊಳಿಸಿದರೆ, ನೀವು ಏನು ಮಾಡಿದ್ದೀರಿ ಎಂದು ನಾನು ಅವಳಿಗೆ ಹೇಳುತ್ತೇನೆ ಎಂದು ಅವಳು ಹೇಳಿದ್ದು ನನಗೆ ಕೇಳಿಸಿದೆ. ಅವಳಿಗೆ ನನ್ನಲ್ಲಿ ಹೇಳಲು ಇನ್ನೂ ತುಂಬಾ ಇತ್ತು ಆದರೆ ಫೋನ್ ಲೌಡ್ ಸ್ಪೀಕರ್‌ನಲ್ಲಿತ್ತು. ನಾನು ನೂರಾಳೊಂದಿಗೆ ಮತ್ತೆ ಮಾತನಾಡಬೇಕಾದರೆ, ನಾನು ಹಲವಾರು ಸ್ಥಳಗಳಿಂದ ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಲಹೆಗಾರರು ನನಗೆ ಹೇಳಿದರು,”ಎಂದು ಆದಿಲಾ ಮೇ 29 ರಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ

ಪರಿವರ್ತನೆ ಚಿಕಿತ್ಸೆಯು ವ್ಯಕ್ತಿಯ ಲೈಂಗಿಕ ದೃಷ್ಟಿಕೋನ ಅಥವಾ ಲಿಂಗವನ್ನು ‘ಬದಲಾಯಿಸುವ’ ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಈ ಪದ್ಧತಿಯನ್ನು ಮದ್ರಾಸ್ ಹೈಕೋರ್ಟ್ ನಿಷೇಧಿಸಿದೆ.

ಮೇ 29 ರಂದು, ವನಜಾ ಕಲೆಕ್ಟಿವ್ ಮತ್ತು ಆದಿಲಾ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ನಂತರ ನೂರಾ ಕೇರಳ ಹೈಕೋರ್ಟ್‌ಗೆ ಬಂದಿದ್ದಾರೆ. ದಂಪತಿಗೆ ಸಹಾಯ ಮಾಡುತ್ತಿರುವ ವನಜಾ ಕಲೆಕ್ಟಿವ್‌ನ ಕಾರ್ಯಕರ್ತೆ ಧನ್ಯಾ ಅವರ ಪ್ರಕಾರ, ದಂಪತಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಅವಕಾಶ ನೀಡಲಿಲ್ಲ. “ಕೇವಲ ಐದರಿಂದ ಆರು ನಿಮಿಷಗಳ ನ್ಯಾಯಾಲಯದ ವಿಚಾರಣೆಯಲ್ಲಿ, ಆದಿಲಾ ಮತ್ತು ನೂರಾ ಅವರರಲ್ಲಿ ನೀವು ಒಟ್ಟಿಗೆ ವಾಸಿಸಲು ಬಯಸುತ್ತೀರಾ ಎಂದು ನ್ಯಾಯಾಲಯವು ಕೇಳಿದಾಗ ಅವರು ಹೌದು ಎಂದು ಹೇಳಿದರು. ಈಗ ಅವರು ಮತ್ತೆ ಒಂದಾಗಿದ್ದಾರೆ” ಎಂದು ಧನ್ಯಾ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *