ಕುಡಿತ ಬಿಡಿಸಲು ಮುಂದಾದ ಹೆಂಡತಿಯ ಕತ್ತು ಹಿಸುಕಿ ಕೊಂದ ಪಾಪಿ ಗಂಡ


ಮೈಸೂರು: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಮಹಾಶಯ, ಕುಡಿತ ಬಿಡಿಸಲು ಯತ್ನಿಸಿದ ಹೆಂಡತಿಯನ್ನೆ ಕೊಲೆ ಮಾಡಿರುವ ಘಟನೆ ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಧ್ಯಾ(25) ಮೃತ ದುರ್ದೈವಿ. ಆರೋಪಿ ಪತಿ ಕಿರಣ್ 4 ವರ್ಷಗಳ ಹಿಂದೆ ಸಂಧ್ಯಾ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗು ಕೂಡ ಇತ್ತು. ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ ಕುಡಿತದ ಚಟಕ್ಕೆ ದಾಸನಾಗಿ ದಿನ ನಿತ್ಯ ಹೆಂಡತಿಯ ಜೊತೆ ಜಗಳಕ್ಕಿಳಿಯುತ್ತಿದ್ದನಂತೆ. ಪತಿಯನ್ನು ಕುಡಿತದ ಚಟದಿಂದ ಪಾರು ಮಾಡಲು ಮೃತ ಪತ್ನಿ ಗಂಡನನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರಂತೆ.

ಪುನರ್ವಸತಿ ಕೇಂದ್ರದಿಂದ ಹೊರ ಬಂದಿದ್ದ ಆರೋಪಿ ಕಿರಣ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ಮತ್ತೆ ಕುಡಿಯಲು ಶುರುವಿಟ್ಟು ಕೊಂಡಿದ್ದನಂತೆ. ಇದೇ ವಿಚಾರವಾಗಿ ನಿನ್ನೆ ತಡರಾತ್ರಿ ಜಗಳ ನಡೆದಾಗ ಕತ್ತು ಹಿಸುಕಿ ಹೆಂಡತಿಯನ್ನು ಕೊಂದಿದ್ದಾನೆ. ಸದ್ಯ ಘಟನೆ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

News First Live Kannada


Leave a Reply

Your email address will not be published.