ಗದಗ: ಕುಡಿದ ಅಮಲಿನಲ್ಲಿ ಅಂಬುಲೆನ್ಸ್ ಚಾಲನೆ ಮಾಡಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಹೊರವಲಯದಲ್ಲಿ ವರದಿಯಾಗಿದೆ.

ಘಟನೆಯಲ್ಲಿ ಕಾರು ಚಾಲಕ ಗೋವಿಂದಪ್ಪ ಲಮಾಣಿಗೆ ಗಂಭೀರ ಗಾಯವಾಗಿದೆ. ಶಿರಹಟ್ಟಿ ಕಡೆಗೆ ಹೊರಟಿದ್ದ ಅಂಬುಲೆನ್ಸ್ ವಾಹನ ರಾಂಗ್ ರೂಟ್ ನಲ್ಲಿ ಬಂದು ಕಾರ್ ಗೆ ಡಿಕ್ಕಿಯಾಗಿದೆ. ಪಾನಮತ್ತನಾಗಿ ಅಂಬುಲೆನ್ಸ್ ವಾಹನ ಚಲಾಯಿಸುತ್ತಿದ್ದ ಚಾಲಕ ವಿಶ್ವನಾಥ್ ಬೋರಶೆಟ್ಟಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಜನರು ಹೇಳಿದ್ದಾರೆ. ಇದನ್ನೂ ಓದಿ: ಗದಗದಲ್ಲಿ ಕಾಮುಕ ಡೋಂಗಿ ಬಾಬಾನಿಗೆ ಹಿಗ್ಗಾಮುಗ್ಗ ಥಳಿತ

ಸ್ಥಳೀಯರು, ವಿಶ್ವನಾಥ್ ಬೋರಶೆಟ್ಟಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಬಂದ ಹೈವೇ ಪೊಲೀಸರು ವಿಶ್ವನಾಥ್ ಅವರನ್ನು ವಶಕ್ಕೆ ಪಡೆದು, ಗ್ರಾಮೀಣ ಠಾಣೆಗೆ ಕರೆದೊಯ್ದಿದ್ದಾರೆ. ಗಾಯಾಳು ಕಾರು ಚಾಲಕ ಗೋವಿಂದಪ್ಪ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಅಂಬುಲೆನ್ಸ್ ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಸೇರಿದ್ದು, ಚಾಲಕ ವಿಶ್ವನಾಥ್ ಶಿರಹಟ್ಟಿ ಪಟ್ಟಣದ ನಿವಾಸಿಯಾಗಿದ್ದಾರೆ. ಘಟನೆಗೆ ಕಾರಣರಾದ ಚಾಲಕನ ಮೇಲೆ ಸ್ಥಳೀಯರು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಗದಗ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಕುಡಿದ ಮತ್ತಿನಲ್ಲಿ ಚಾಲನೆ – ಕಾರಿಗೆ ಅಂಬುಲೆನ್ಸ್ ಡಿಕ್ಕಿ appeared first on Public TV.

Source: publictv.in

Source link