ಚಾಮರಾಜನಗರ: ಕುಡಿದ ಮತ್ತಿನಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯರೊಂದಿಗೆ ಗಲಾಟೆ ಮಾಡಿಕೊಂಡ ಕುಡುಕನೊಬ್ಬ ಬೆತ್ತಲಾಗಿ ಅಸಭ್ಯವಾಗಿ ವರ್ತಿಸಿದ್ದಾನೆ. ವಿಡಿಯೋ ಮಾಡಿದ್ದವರ ಮೇಲೆ ಆತನ ಮಕ್ಕಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನ‌ ಒಂದು ಕಣ್ಣನ್ನು ಕಳೆದುಕೊಳ್ಳುವಂತೆ‌ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಕುಡಿದು ಮಹಿಳೆಯರೊಂದಿಗೆ ಗಲಾಟೆ ಮಾಡಿದ ವ್ಯಕ್ತಿಯ ಹೆಸರು ತಾಂಡವಮೂರ್ತಿ. ಈತ ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮದ ನಿವಾಸಿ. ನಿನ್ನೆ ಕಂಠಪೂರ್ತಿ ಕುಡಿದು ತಾಂಡವಮೂರ್ತಿ ನರೇಗಾ ಕೆಲಸ ಮಾಡಿಸುತ್ತಿದ್ದ ಕಾಂತರಾಜು ಜೊತೆ ಕ್ಷುಲ್ಲಕ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾನೆ. ಜೊತೆಗೆ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದ ಕೆಲ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ ಬೆತ್ತಲಾಗಿ, ಕೈ ಚಪ್ಪಲಿ ಹಿಡಿದು ಹೊಡೆಯಲು ಮುಂದಾಗಿದ್ದಾನೆ. ತಕ್ಷಣ ತಾಂಡವಮೂರ್ತಿಯನ್ನ ಸಾಮಾಧಾನ ಪಡಿಸಿದ್ದಾರೆ.
ಈ ಘಟನೆಯನ್ನ ಸಂಪೂರ್ಣವಾಗಿ ಕಾಂತರಾಜು ಮಗ ಮಣಿ ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸಿದ್ದಾನೆ. ಚಾಮರಾಜನಗರ ಪೂರ್ವ ಗ್ರಾಮಾಂತರ ಠಾಣೆಯ ಪೊಲೀಸರು ತಾಂಡವಮೂರ್ತಿಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.

ತಾಂಡವಮೂರ್ತಿಯ ಬೆತ್ತಲೆ ವಿಡಿಯೋವನ್ನ ಪೊಲೀಸರಿಗೆ ಕೊಟ್ಟಿದ್ದಕ್ಕೆ ರೊಚ್ಚಿಗೆದ್ದ ಆತನ ಮಕ್ಕಳಾದ ಮಹೇಂದ್ರ ಮತ್ತು ಸಂತೋಷ, ಕಾಂತರಾಜು ಕುಟುಂಬದ ಮೇಲೆ ಜಗಳ ತೆಗೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಕಾಂತರಾಜು ಮತ್ತು ಮಣಿಯನ್ನ ಕೂಡಲೇ ಚಾಮರಾಜನಗರ ಜಿಲ್ಲಾಸ್ಪತ್ರಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಸಿಲಾಗಿದೆ.

ಈ ವೇಳೆ ಕಾಂತರಾಜುವಿಗೆ ಎಡಗಣ್ಣು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂಣಜನೂರು ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಹಲ್ಲೆ ನಡೆಸಿದ ಮಹೇಂದ್ರ ಮತ್ತು ಸಂತೋಷನನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕುಡಿದ ಮತ್ತಿನಲ್ಲಿ ನಡೆದ ಜಗಳದಿಂದ ಒಬ್ಬರು ಕಣ್ಣು ಕಳೆದುಕೊಂಡ್ರೆ, ಮತ್ತೊಬ್ಬರಿಗೆ ತಲೆಗೆ ಗಂಭೀರವಾಗಿ ಗಾಯವಾಗಿದೆ. ಹಲ್ಲೆ ಮಾಡಿದ ಅಪ್ಪ, ಮಕ್ಕಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

The post ಕುಡಿದ ಮತ್ತಿನಲ್ಲಿ ಮಹಿಳೆಯರ ಎದುರು ಬೆತ್ತಲಾಗಿ ಗಲಾಟೆ- ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ.. ಒಂದು ಕಣ್ಣೇ ಹೋಯ್ತು appeared first on News First Kannada.

Source: newsfirstlive.com

Source link