ಕುಮಾರಸ್ವಾಮಿ ಜನತಾ ಜಲಧಾರೆ ರಥ ಮುಂದಕ್ಕೆ ಚಲಿಸೋದು ಕಷ್ಟ.. ಕಷ್ಟ..!


ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್​​​​ ತರಾಟೆಗೆ ತೆಗೆದುಕೊಂಡಿದೆ. ಈಗ ಹೆಚ್​​ಡಿಕೆ ಯಾತ್ರೆಯ ಮೇಲೆ ಕೊರೊನಾ ‘ಗ್ರಹಣ’ ಕವಿದಿದೆ. ಕೈ ಯಾತ್ರೆ ವಿರುದ್ಧ ಜನತಾ ಜಲಧಾರೆ ಘೋಷಿಸಿದ್ದ ಹೆಚ್​​ಡಿಕೆ, ಗೊಂದಲಕ್ಕೆ ಸಿಲುಕಿದ್ದಾರೆ. ಜೆಡಿಎಸ್​​​ನ ಜನತಾ ಜಲಧಾರೆ ರಥ ಚಲಿಸುವುದು ಅನುಮಾನವಾಗಿದೆ.

ಜನತಾ ಜಲಧಾರೆಯ ಮೇಲೂ ಕೊರೊನಾ ಕರಿನೆರಳು
ಕೊರೊನಾ, ಒಮಿಕ್ರಾನ್ ಆರ್ಭಟದ ಮಧ್ಯೆಯೂ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಯನ್ನ ಕೈಗೊಂಡಿದ್ರು. ಆದ್ರೀಗ ಕಾಂಗ್ರೆಸ್‌ನ ನೀರಿಗಾಗಿ ನಡಿಗೆಗೆ ಸರ್ಕಾರ ಬ್ರೇಕ್‌ ಹಾಕಿದೆ. ಈ ಮಧ್ಯೆ ಕೈ ಯಾತ್ರೆಗೆ ಪ್ರತಿಯಾಗಿ ದಳಪತಿಗಳು ಜನತಾ ಜಲಧಾರೆ ಹೆಸರಲ್ಲಿ ಯಾತ್ರೆಗೆ ರಥವನ್ನೂ ಸಿದ್ಧಗೊಳಿಸಿದ್ರು. ಆದ್ರೀಗ ಈ ಜನತಾ ಜಲಧಾರೆಗೆ ಕೊರೊನಾ ಕರಿನೆರಳು ಬಿದ್ದಿದೆ. ಹೀಗಾಗಿ ಜೆಡಿಎಸ್‌ನ ಜನತಾ ಜಲಧಾರೆ ಆರಂಭವಾಗೋದು ಅನುಮಾನ ಎನ್ನಲಾಗಿದೆ.

ಜಲಧಾರೆ ಆರಂಭ ಅನುಮಾನ!
ಜನತಾ ಜಲಧಾರೆಯನ್ನ ಆರಂಭಿಸಲು ಜೆಡಿಎಸ್ ನಾಯಕರು ಪ್ಲಾನ್ ರೂಪಿಸಿದ್ರು. ಇದೇ ಜನವರಿ 26ರಿಂದ ಜಲಧಾರೆ ಯಾತ್ರೆಯನ್ನ ಆರಂಭಿಸಲು ಸಿದ್ಧತೆ ನಡೆಸಿದ್ರು. ಜನತಾ ಜಲಧಾರೆ ಯಾತ್ರೆ ಮೂಲಕ ನೆನೆಗುದಿಗೆ ಬಿದ್ದಿರುವ ರಾಜ್ಯದ ನೀರಾವರಿ ಯೋಜನೆಗಳ ಜಾರಿಗಾಗಿ ಮಹಾ ಸಂಕಲ್ಪವನ್ನ ದಳಪತಿಗಳು ಕೈಗೊಂಡಿದ್ರು. ಆದ್ರೀಗ ಜನತಾ ಜಲಧಾರೆ ಸಿದ್ಧತೆ ಮಧ್ಯೆ ಕೋವಿಡ್ ರೂಲ್ಸ್​​​ ಭೀತಿ ಎದುರಾಗಿದೆ.

ಈಗಾಗಲೇ ಕಾಂಗ್ರೆಸ್ ಪಾದಯಾತ್ರೆಯಿಂದ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ಸೋಂಕಿನ ಆರ್ಭಟದ ಮಧ್ಯೆ ಯಾತ್ರೆಯನ್ನ ತಡೆಯಲು ಬೊಮ್ಮಾಯಿ ಸರ್ಕಾರ ವಿಫಲವಾಗಿದೆ ಅಂತಾ ಹೈಕೋರ್ಟ್ ಛೀಮಾರಿ ಹಾಕಿದೆ. ಹೀಗಾಗಿ ಕಾಂಗ್ರೆಸ್‌ಗೆ ಟಕ್ಕರ್ ಕೊಡೋಕೆ ಅಂತಾ ಜೆಡಿಎಸ್ ಹೆಣೆದಿದ್ದ ಪ್ಲಾನ್ ಠುಸ್ ಆಗಿದೆ.

ಜಲಧಾರೆ ಮೇಲೆ ಕಾರ್ಮೋಡ
ಕಾಂಗ್ರೆಸ್​ ಪಾದಯಾತ್ರೆಗೆ ಅನುಮತಿ ಕೊಟ್ಟು ಸರ್ಕಾರ ಸಮಸ್ಯೆಗೆ ಸಿಲುಕಿದೆ. ಈಗಾಗಲೇ ಹಸ್ತ ಪಾದಯಾತ್ರೆಗೆ ಹೈಕೋರ್ಟ್ ಚಾಟಿ ಬೀಸಿದೆ. ಅದರಲ್ಲೂ ಸರ್ಕಾರಕ್ಕೂ ಹೈಕೋರ್ಟ್ ‌ತರಾಟೆಗೆ ತೆಗೆದುಕೊಂಡಿದೆ. ಸಭೆ ಸಮಾರಂಭಕ್ಕೆ ಅವಕಾಶ ಇಲ್ಲ ಅಂತಲೂ ಸರ್ಕಾರ ಹೇಳಿದೆ. ಕೊರೊನಾ‌ ಕೇಸ್ ಹೆಚ್ಚಾಗ್ತಿರುವ ವೇಳೆ ಅನುಮತಿ ಸಿಗೋದು ಸುಲಭದ ಮಾತಲ್ಲ. ಅಲ್ಲದೇ ಜೆಡಿಎಸ್​​​ನ ಜನತಾ ಜಲಧಾರೆಗೆ ಅನುಮತಿ ಸಿಗೋದು ನೂರಕ್ಕೆ ನೂರರಷ್ಟು ಡೌಟ್​​​. ಹೀಗಾಗಿ ಪಾದಯಾತ್ರೆಗೆ ಟಕ್ಕರ್ ಕೊಡಲು ಹೋಗಿ ಹೆಚ್​​ಡಿಕೆ ಸದ್ಯ ಗೊಂದಲಕ್ಕೆ ಸಿಲುಕಿದ್ದಾರೆ.

ಒಟ್ಟಾರೆ, ಕೊರೊನಾ ಸೋಂಕಿನ ಮಧ್ಯೆ ಎಲ್ಲಾ ರೀತಿಯ ಯಾತ್ರೆಗಳಿಗೂ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ಹೀಗಾಗಿ ಸದ್ಯಕ್ಕಂತೂ ಹೆಚ್‌.ಡಿ ಕುಮಾರಸ್ವಾಮಿ ಅವರ ಜನತಾ ಜಲಧಾರೆ ರಥ ಮುಂದಕ್ಕೆ ಚಲಿಸೋದು ಕಷ್ಟ.. ಕಷ್ಟ.

ವಿಶೇಷ ವರದಿ: ಗಣಪತಿ ಪೊಲಿಟಿಕಲ್ ಬ್ಯೂರೋ

News First Live Kannada


Leave a Reply

Your email address will not be published. Required fields are marked *