ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ನಡೆದು ವರ್ಷಗಳೇ ಉರುಳಿದವು. ಆದ್ರೆ, ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್ ನಡುವಿನ ಜಿದ್ದಾ ಜಿದ್ದಿ ಮಾತ್ರ ಕಡಿಮೆ ಆಗಿಲ್ಲ.ಈಗ ಮತ್ತೆ ಇಬ್ಬರ ನಡುವೆ ಮಾತಿನ ಕುಸ್ತಿ ಶುರುವಾಗಿದೆ.

ಇಂತಹ ಮಾತಿನ ಸಮರ ಶುರುವಾಗಿದ್ದು ಈಗೇನಲ್ಲ. ಕಳೆದ ಲೋಕಸಭೆ ಚುನಾವಣೆಯಿಂದಲೇ ಶುರುವಾಗಿತ್ತು. ಅವತ್ತು ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ರಾಜಕೀಯ ಪ್ರವೇಶವನ್ನು ಅದ್ಧೂರಿಯಾಗಿ ಮಾಡಲು ಸಿದ್ಧತೆ ಮಾಡಿಕೊಂಡಿದ್ರು. ಅದಕ್ಕಾಗಿಯೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಎಂಪಿ ಮಾಡಲು ಹೊರಟಿದ್ರು. ಆದರೆ ಸಮಯ-ಸಂದರ್ಭ ಕೂಡಿ ಬರಲಿಲ್ಲ. ಸುಮಲತಾ ಅಂಬರೀಷ್ ಕಣಕ್ಕಿಳಿದಿದ್ರಿಂದ ಅವರ ಎದುರು ನಿಖಿಲ್ ಸೋಲು ಕಂಡುಬಿಟ್ಟರು. ಪುತ್ರನ ಸೋಲನ್ನು ಕುಮಾರಸ್ವಾಮಿಯವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರ್ತಾನೇ ಇರುತ್ತೆ. ಇದರ ಮುಂದುವರೆದ ಭಾಗವೇ ಇಂತಹ ಮಾತಿನ ಜಂಗಿ ಕುಸ್ತಿಗೆ ಮತ್ತೆ ಕಾರಣವಾಗಿರಬಹುದು.

ಕೆಆರ್​ಎಸ್ ಬಾಗಿಲಿಗೆ ಮಲಗಿಸಿ ಬಿಡಲಿ ಅಂದ್ರು ಹೆಚ್​ಡಿಕೆ
ಕುಮಾರಸ್ವಾಮಿ ಮಾತಿಗೆ ಕಿಡಿ ಕಿಡಿಯಾದ ಸುಮಲತಾ 

ಕುಮಾರಸ್ವಾಮಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ರು. ಮಂಡ್ಯ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಮಾತನಾಡೋದಕ್ಕೆ ಅವರು ಹೋಗಿದ್ರು. ಕಾರ್ಖಾನೆ ಹೇಗಾದರೂ ಮಾಡಿ ಓಪನ್ ಮಾಡಿ, ಬಂದ್ ಮಾಡಬೇಡಿ ಅಂತ ಸಂಸದೆ ಸುಮಲತಾ ಹೇಳಿಕೆ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ತಿರುಗೇಟು ಕೊಡಲು ಮುಂದಾದ್ರು. ಅಷ್ಟೇ ಅಲ್ಲ, ಕೃಷ್ಣ ರಾಜ ಸಾಗರ ಜಲಾಶಯದ ಸುತ್ತಮುತ್ತ ಗಣಿಗಾರಿಕೆಯಿಂದ ಜಲಾಶಯಕ್ಕೆ ಅಪಾಯ ಅಂತ ಸುಮಲತಾ ಹಲವಾರು ಬಾರಿ ಹೇಳ್ತಾನೆ ಬಂದಿದ್ರು. ಅದನ್ನು ನಿನ್ನೆ ಕುಮಾರಸ್ವಾಮಿ ಪ್ರಸ್ತಾಪಿಸಿ ಮಾತನಾಡಿ ಕೆಆರ್​​ಎಸ್ ಬಾಗಿಲಿಗೆ ಅವರನ್ನು ಮಲಗಿಸಿಬಿಟ್ಟರೆ ಆಗುತ್ತೆ ಅಂದು ಬಿಟ್ರು. ಅದ್ಯಾಕೆ ಕುಮಾರಸ್ವಾಮಿ ಹೀಗೆ ಮಾತನಾಡಿದರೊ ಗೊತ್ತಿಲ್ಲ. ಆದರೆ, ಕುಮಾರಸ್ವಾಮಿಯವರ ಬಾಯಲ್ಲಿ ಈ ಮಾತು ಬಂದು ಬಿಟ್ಟಿತ್ತು.

ಕುಮಾರಸ್ವಾಮಿ ತಮ್ಮ ಮೇಲೆ ಯಾವಾಗ ಇಂತಹ ಮಾತು ಆಡಿದ್ದಾರೆ ಅಂತ ಗೊತ್ತಾಯ್ತೋ ಸುಮಲತಾ ಸುಮ್ಮನಾಗಲಿಲ್ಲ. ವಿಧಾನಸೌಧದ ಬಳಿ ಗರಂ ಆಗಿಯೇ ರಿಯಾಕ್ಷನ್ ಕೊಟ್ರು. ಮಾತು ಅವರ ಸಂಸ್ಕಾರ ತೋರಿಸುತ್ತೆ ಅಂತ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ರು.

ಅದ್ಯಾವುದೋ ಅನುಕಂಪದಿಂದ ಗೆದ್ದಿದ್ರು ಅಂದ್ರು ಹೆಚ್​​ಡಿಕೆ
ಅದಕ್ಕೆ ಜನರೇ ಬುದ್ಧಿ ಕಲಿಸಿದ್ದಾರೆ ಅಂತ ಸುಮಲತಾ ಟಾಂಗ್

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಏನೇನೆಲ್ಲಾ ಆಯ್ತು ಅನ್ನೋದನ್ನು ಇಡೀ ರಾಜ್ಯವೇ ಕಣ್ತುಂಬಿಕೊಂಡಿದೆ. ದಿನಕ್ಕೊಂದು ಮಾತು, ದಿನಕ್ಕೊಂದು ಟ್ವಿಸ್ಟು. ಮಂಡ್ಯದಲ್ಲೊಂದೇ ಚುನಾವಣೆ ನಡೀತಾ ಇದೆ ಅನ್ನುವಷ್ಟರ ಮಟ್ಟಿಗೆ ಎಲ್ಲರ ಗಮನವೂ ಮಂಡ್ಯದ ಮೇಲೆಯೇ ಕೇಂದ್ರಿಕೃತವಾಗಿತ್ತು. ಕುಮಾರಸ್ವಾಮಿ ತಮ್ಮ ಪುತ್ರನ ಪರವಾಗಿ ಅಕ್ಷೋಹಿಣಿ ಸೈನ್ಯವನ್ನೇ ಮಂಡ್ಯಕ್ಕೆ ತಂದಿಳಿಸಿದಂತೆ ಭಾಸವಾಗ್ತಾ ಇತ್ತು. ಸಚಿವರು, ಶಾಸಕರು, ಮೈತ್ರಿ ಪಕ್ಷದ ಸ್ನೇಹಿತರಾದ ಡಿ.ಕೆ.ಶಿವಕುಮಾರ್ ಹೀಗೆ ಘಟಾನುಘಟಿಗಳು ನಿಖಿಲ್ ಪರ ಮತಯಾಚಿಸಿದ್ರು. ಇತ್ತ ಸುಮಲತಾ ಇಂಡಿಪೆಂಡೆಂಟಾಗಿ ನಿಂತಿದ್ರಿಂದ ಇವರ ಜೊತೆ ಪಕ್ಷಾತೀತವಾಗಿ ಹಲವಾರು ಮುಖಂಡರು ನಿಂತು ಕೊಂಡ್ರು. ಇನ್ನು ಬಿಜೆಪಿಯವರು ಪರೋಕ್ಷವಾಗಿ ಸಪೋರ್ಟ್ ಮಾಡಿದ್ರು. ಎಲ್ಲರಿಗಿಂತ ಹೆಚ್ಚು ಸದ್ದು ಮಾಡಿದವರು ಯಶ್ ಮತ್ತು ದರ್ಶನ್ ಜೋಡಿ. ಜೋಡೆತ್ತು ಡೈಲಾಗ್ ಫೇಮಸ್ ಆಗಿದ್ದೇ ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ. ಅವರು ಇವರಿಗೆ ಟಾಂಗ್ ಕೊಡೋದು ಇವರು ಅವರಿಗೆ ಟಾಂಗ್ ಕೊಡೋದು ನಡೆದೇ ಇತ್ತು. ಅಂತು ಚುನಾವಣೆ ಮುಗಿದು ಫೈನಲಿ ಸುಮಲತಾ ಅಂಬರೀಷ್ ಗೆದ್ದು ಬಿಟ್ಟಿದ್ರು. ಇದಕ್ಕೆ ಕುಮಾರಸ್ವಾಮಿ ಸಹಜವಾಗಿ ಬೇಜಾರು ಮಾಡಿಕೊಂಡಿದ್ರು. ತಮ್ಮ ಪುತ್ರನ ಮೊದಲ ಎಂಟ್ರಿಯಲ್ಲೇ ಹೀಗಾಯ್ತಲ್ಲ ಅಂತ ಸಿಕ್ಕಾಪಟ್ಟೆ ನೊಂದುಕೊಂಡಿದ್ರು. ಆ ನೆನಪೋ ಅಥವಾ ವಿಷಯಾಧಾರಿತ ಚರ್ಚೆಯೋ ಗೊತ್ತಿಲ್ಲ. ಈಗ ಮತ್ತೆ ಕುಮಾರಸ್ವಾಮಿಯವರು ಕಳೆದ ಚುನಾವಣೆ ವಿಚಾರ ಕೆದಕಿದ್ದಾರೆ. ಅದ್ಯಾವುದೋ ಅನುಕಂಪದಿಂದ ಗೆದ್ದು ಬಂದಿದ್ರು. ಅದನ್ನು ಉಳಿಸಿಕೊಳ್ಳಲಿ ಅಂತ ಸುಮಲತಾ ಅವರನ್ನು ಟೀಕಿಸಿದ್ದಾರೆ.

ಇಷ್ಟು ಕೇಳಿದ ಮೇಲೆ ಸುಮಲತಾ ಸುಮ್ಮನಿರೋಕಾಗುತ್ತಾ. ರಾಜಕಾರಣವೇ ಹೀಗೆ. ಅದು ಮಾತಿನ ಮಂಟಪ. ಸುಮಲತಾ ಗರಂ ಆಗಿ, ಚುನಾವಣೆ ವೇಳೆಯಲ್ಲೇ ಜನ ಬುದ್ಧಿ ಕಲಿಸಿದ್ದಾರೆ ಅಂತ ಮತ್ತೆ ತಿರುಗೇಟು ಕೊಟ್ರು.

ಇಷ್ಟೆಲ್ಲಾ ಮಾತಿನ ಸಮರಕ್ಕೆ ಕಾರಣವಾದ್ರೂ ಯಾವುದು?
ಕೆಆರ್​​ಎಸ್ ಬಗ್ಗೆ ದನಿ ಎತ್ತಿದ್ದಕ್ಕೆ ಯಾಕೆ ಕೋಪ?

ಕೃಷ್ಣ ರಾಜ ಸಾಗರ ಜಲಾಶಯದ ರಕ್ಷಣೆ ಬಗ್ಗೆ ಈ ಹಿಂದೆಯು ಸುಮಲತಾ ಮಾತನಾಡಿದ್ರು. ಅಷ್ಟೇ ಅಲ್ಲ ಇದರ ಬಗ್ಗೆ ಸಮಗ್ರವಾಗಿ ಪರಿಶೀಲಿಸಬೇಕು ಅಂತಾನೂ ಒತ್ತಾಯಿಸಿದ್ರು. ಚುನಾವಣೆ ಸಂದರ್ಭದಲ್ಲೇ ಜನ ತಮಗೆ ಮನವಿ ಕೊಡ್ತಾ ಇದ್ರು. ಹೀಗಾಗಿ ಕೆಆರ್​​ಎಸ್ ಸುತ್ತಮುತ್ತಲಿನ ಗಣಿಗಾರಿಕೆ ವಿಚಾರ ಪ್ರಸ್ತಾಪ ಮಾಡಿದ್ದೆ. ಇದನ್ನು ಮಾಡಿದ್ರೆ ಕುಮಾರಸ್ವಾಮಿಯವರಿಗೇನು ತೊಂದರೆ ಅಂತ ಸುಮಲತಾ ಪ್ರಶ್ನೆ ಮಾಡಿದ್ದಾರೆ.

ಸುಮಲತಾ ಇಷ್ಟು ಹೇಳಿದ್ದಕ್ಕೆ ಕುಮಾರಸ್ವಾಮಿಯವರು ಯಾಕೆ ಮಾತನಾಡಿದ್ರು ಅನ್ನೋದೇ ಗೊತ್ತಾಗ್ತಾ ಇಲ್ಲ. ಸುಮಲತಾರನ್ನು ಕೆಆರ್​​ಎಸ್ ಬಾಗಿಲಿಗಿ ಮಲಗಿಸಿಬಿಡಿ ಅಂತ ಹೇಳಿಬಿಟ್ರು. ಅದಕ್ಕೆ ಸುಮಲತಾ ಅವರೂ ತಿರುಗಿಸಿ ಮಾತನಾಡಿ ಬಿಟ್ರು. ಮತ್ತೆ ಇಬ್ಬರ ನಡುವೆ ಮಾತಿನ ಕುಸ್ತಿ ಶುರುವಾಗಿ ಬಿಡ್ತು.

ಸಕ್ಕರೆ ಕಾರ್ಖಾನೆ ವಿಚಾರದಲ್ಲೂ ಭಿನ್ನಾಭಿಪ್ರಾಯ, ಸಿಟ್ಟು
ಸುಮಲತಾ ಹೇಳಿದ್ದೇನು-ಕುಮಾರಸ್ವಾಮಿ ಅಭಿಪ್ರಾಯವೇನು?

ಮಂಡ್ಯದ ಸಕ್ಕರೆ ಕಾರ್ಖಾನೆ ವಿಚಾರ ಇವತ್ತು ನಿನ್ನೆಯದಲ್ಲ. ಆದರೆ, ಅದು ಬಂದ್ ಆಗಬಾರದು ಅನ್ನೋದಷ್ಟೇ ಎಲ್ಲರ ಉದ್ದೇಶ. ಹೀಗಾಗಿಯೇ ಸುಮಲತಾ ಅಂಬರೀಷ್ ಏನಾದರೂ ಮಾಡಿ ಕಾರ್ಖಾನೆ ಒಪನ್ ಮಾಡಿ ಜನರಿಗೆ ಅನುಕೂಲ ಮಾಡಿಕೊಡಿ ಅಂತ ಮನವಿ ಮಾಡಿದ್ರು. ಇದಕ್ಕೆ ಕುಮಾರಸ್ವಾಮಿ ಗರಂ ಆಗಿದ್ದಾರೆ. ಹೇಗಾದರೂ ಮಾಡಿ ಓಪನ್ ಮಾಡೋದಲ್ಲ, ಸರ್ಕಾರವೇ ಇದನ್ನು ನಡೆಸಬೇಕು ಅಂತ ನೇರಾ ನೇರ ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಇಬ್ಬರ ಅಭಿಪ್ರಾಯದಲ್ಲೂ ಹೆಚ್ಚಿನ ವ್ಯತ್ಯಾಸವೇನು ಕಾಣ್ತಾ ಇಲ್ಲ. ಒಬ್ಬರು ಹೇಗಾದರೂ ಮಾಡಿ ಓಪನ್ ಮಾಡಿ ಅಂತಿದಾರೆ. ಇನ್ನೊಬ್ಬರು ಸರ್ಕಾರವೇ ನಡೆಸಲಿ ಅಂತಿದಾರೆ. ಆದರೆ ಖಾಸಗಿಯವರಿಗೆ ಕೊಡಬಾರದು ಅನ್ನೋದು ಕುಾಮರಸ್ವಾಮಿಯವರ ದಿಟ್ಟ ನಿಲುವು. ಖಾಸಗಿಯವರಿಗೆ ಕಾರ್ಖಾನೆ ಕೊಡೋದಕ್ಕೆ ಯಾರೋ ಒತ್ತಡ ಹೇರಿದ್ದಾರೆ ಅನ್ನೋದು ಕೂಡ ಕುಮಾರಸ್ವಾಮಿಯವರ ಅಭಿಪ್ರಾಯ. ಅದು ಪರೋಕ್ಷವಾಗಿ ಸುಮಲತಾ ಅವರನ್ನೇ ಟಾರ್ಗೆಟ್ ಮಾಡಿದಂತೆ ಕಾಣ್ತಾ ಇತ್ತು. ಆದ್ರೆ, ಸುಮಲತಾ ಅವರು ಮಾತ್ರ ತಾವು ಅಷ್ಟೆಲ್ಲಾ ಪ್ರಭಾವಿ ವ್ಯಕ್ತಿಯಲ್ಲ ಎಂದು ಮತ್ತೆ ಟಾಂಗ್ ಕೊಟ್ರು.

ನೋಡಿ ಹೀಗೆ ಇಬ್ಬರು ಪರಸ್ಪರ ಮಾತಿನ ಸಮರ ಶುರು ಮಾಡಿಕೊಂಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಿಂದ ಶುರುವಾಗಿರುವ ಮಾತಿನ ಸಮರ ಇನ್ನೂ ಮುಗೀತಾ ಇಲ್ಲ. ಮಂಡ್ಯ ಚುನಾವಣೆಯಲ್ಲಂತೂ ಮಾತಿನ ಕುಸ್ತಿ ಜೋರಾಗಿಯೇ ನಡೆದಿತ್ತು. ಈಗ ಚುನಾವಣೆ ಇಲ್ಲದ ತಣ್ಣಗಿನ ವಾತಾವರಣದಲ್ಲೂ ಅದ್ಯಾಕೋ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್ ನಡುವಿನ ಮಾತಿನ ಅಬ್ಬರ ನಿಂತಿಲ್ಲ. ಇದು ಬಹುಷಃ ಮುಂದಿನ ಚುನಾವಣೆವರೆಗೂ ಇರುತ್ತಾ, ಆಗಲೂ ಕಂಟಿನ್ಯೂ ಆಗುತ್ತಾ ನೋಡಬೇಕು. ಒಟ್ಟಿನಲ್ಲಿ ಸಕ್ಕರೆ ನಾಡಿನ ವಿಚಾರವಾದರೂ ರಾಜಕಾರಣ ಬಂದಾಗ ಅಕ್ಕರೆ ಮಾತಿಗೆ ಜಾಗವಿರೋದಿಲ್ಲ ಅನ್ನೋದು ಸತ್ಯ.

ಕೃಷ್ಣ ರಾಜ ಸಾಗರದ ಸುತ್ತಮುತ್ತ ಏನು ನಡೀತಾ ಇದೆ?
ಅಕ್ರಮ ಗಣಿಗಾರಿಕೆಯಿಂದ ಜಲಾಶಯಕ್ಕೆ ಹಾನಿಯಾಗ್ತಿದ್ಯಾ?
ಹಳೇ ಮೈಸೂರು ಭಾಗದ ಜಲ ಸಂಗ್ರಹಾರಕ್ಕೆ ಅಪಾಯ ಇದ್ಯಾ?

ಹಳೇ ಮೈಸೂರು ಭಾಗದ ಅತಿ ದೊಡ್ಡ ಜಲ ಸಂಗ್ರಹಾಗಾರ,ದೊಡ್ಡ ಜಲಾಶಯವೇ ಕೃಷ್ಣ ರಾಜ ಸಾಗರ. ಮೈಸೂರು ಮಹಾರಾಜರ ಕಾಲದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ನೈಪುಣ್ಯತೆಯಿಂದ ಕಟ್ಟಿ ನಿಲ್ಲಿಸಿದ್ದೇ ಈ ಕನ್ನಂಬಾಡಿ ಕಟ್ಟೆ. ಇದು ವಿಶ್ವ ಪ್ರಸಿದ್ಧ. ಇದರ ಮುಂಭಾಗ ಇರುವ ಬೃಂದಾವನ ಗಾರ್ಡನ್ ಯಾರಿಗೆ ಗೊತ್ತಿಲ್ಲ ಹೇಳಿ. ಇಡೀ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಕೆಆರ್ ಎಸ್ ಕೂಡ ಒಂದು. ಜೀವನದಿ ಕಾವೇರಿ ಮಂಡ್ಯ ಮೈಸೂರು ಬೆಂಗಳೂರು ತಲುಪಲು ಕಾರಣ ಇದೇ ಕೃಷ್ಣ ರಾಜ ಸಾಗರ ಜಲಾಶಯ. ಇದೊಂದು ಜಲಾಶಯ ಇಲ್ಲದಿದ್ದರೆ ಹಳೇ ಮೈಸೂರು ಭಾಗವನ್ನು ಕಲ್ಪಿಸಿಕೊಂಡರೆ ಹೇಗಿರುತ್ತೆ. ಇಲ್ಲಿನ ಜನ ಜೀವನ-ವ್ಯವಸಾಯ-ಕೈಗಾರಿಕೆ ಎಲ್ಲವೂ ಇದೇ ಕೆಆರ್ ಎಸ್ ಜಲಾಶಯವನ್ನೇ ಅವಲಂಬಿಸಿದೆ. ಮೈಸೂರು ಮಹಾರಾಜರ ದೂರದೃಷ್ಟಿಯ ಕೊಡುಗೆ ಇವತ್ತು ಕೂಡ ಹಳೇ ಮೈಸೂರು ಭಾಗ ಸಮೃದ್ಧವಾಗಿರಲು ಕಾರಣವಾಗಿದೆ. ಅಷ್ಟೇ ಅಲ್ಲ, ಬೆಂಗಳೂರು ಮಹಾನಗರದ ಬೆಳವಣಿಗೆಗೂ ಇದೇ ಜಲಾಶಯ ಕಾರಣ. ಕೆಆರ್ ಎಸ್ ಇಲ್ಲದಿದ್ದರೆ ಬೆಂಗಳೂರಿಗೆ ಬೇಕಾಗುವ ಟಿಎಂಸಿ ಗಟ್ಟಲೇ ನೀರಾದರೂ ಎಲ್ಲಿಂದ ಬರ್ತಾ ಇತ್ತು ಹೇಳಿ. ಹೀಗಾಗಿ ಕೃಷ್ಣ ರಾಜ ಸಾಗರ ನಿಜವಾಗಿಯೂ ಜೀವನಾಡಿ. ಆದರೆ, ಈ ಜಲಾಶಯದ ಸುತ್ತಮುತ್ತ ಕಳೆದ ಹಲವಾರು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ ಎಂಬ ವಿಚಾರ ಆಗಾಗ ಮುನ್ನೆಲೆಗೆ ಬರ್ತಾನೇ ಇರುತ್ತೆ. ಕಲ್ಲು ಗಣಿಗಾರಿಕೆಯಿಂದ ಈ ಜಲಾಶಯಕ್ಕೆ ಹಾನಿಯಾಗುತ್ತೆ ಅಂತ ಹಲವಾರು ಜನ ದನಿ ಎತ್ತಿದ್ದಾರೆ. ಆದ್ರೆ ಇದೀಗ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಅವರೇ ದನಿ ಎತ್ತಿರುವುದರಿಂದ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.

ಕೆಆರ್ ಎಸ್ ಸುತ್ತಮುತ್ತ ಗಣಿಗಾರಿಕೆಗೆ ಬಿದ್ದಿತ್ತು ಬ್ರೇಕ್
ಸಂಸತ್ತಿನವರೆಗೂ ವಿಚಾರ ತೆಗೆದುಕೊಂಡು ಹೋಗಿದ್ದ ಸಂಸದೆ

ಕೆಆರ್ ಎಸ್ ಸುತ್ತಮುತ್ತ ನಡೀತಾ ಇತ್ತು ಎನ್ನಲಾದ ಕಲ್ಲು ಗಣಿಗಾರಿಕೆಗೆ ಈಗ ಸ್ವಲ್ಪ ಬ್ರೇಕ್ ಬಿದ್ದಿದೆಯಂತೆ. ಶ್ರೀರಂಗಪಟ್ಟಣ ಮತ್ತು ಪಾಂಡವಪುರದ ಹಲವು ಕಡೆ ನಡೀತಾ ಇದ್ದ ಕಲ್ಲು ಗಣಿಗಾರಿಕೆಯಿಂದ ಕೃಷ್ಣ ರಾಜ ಸಾಗರ ಜಲಾಶಯಕ್ಕೆ ಹಾನಿಯಾಗುತ್ತೆ ಅಂತ ಸುಮಲತಾ ಈ ಹಿಂದೆಯೂ ಮಾತನಾಡಿದ್ರು. ಅಷ್ಟೇ ಅಲ್ಲ ಇದನ್ನು ಸಂಸತ್ತಿನವರೆಗೂ ತೆಗೆದುಕೊಂಡು ಹೋಗಿದ್ರು. ಜಲಾಶಯವನ್ನು ರಕ್ಷಣೆ ಮಾಡಬೇಕಾಗಿದ್ದು ಮೊದಲ ಆದ್ಯತೆ ಆಗಬೇಕು ಅಂತ ಒತ್ತಾಯಿಸಿದ್ರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳನ್ನು ಕಂಡು ಈ ಬಗ್ಗೆ ಒತ್ತಡ ಹೇರಿದ್ರು. ಅಧಿಕಾರಿಗಳ ಸಭೆಯಲ್ಲೂ ಕೂಡ ಖಡಕ್ ಸೂಚನೆ ಕೊಟ್ಟಿದ್ರು.

ಮಾಜಿ ಸಿಎಂ ಹೆಚ್​​ಡಿಕೆ ಗರಂ ಆಗ್ತಾ ಇರೋದಾದ್ರೂ ಯಾಕೆ?
ಜಲಾಶಯದ ರಕ್ಷಣೆ ವಿಚಾರದಲ್ಲಿ ಯಾಕೆ ಇಂತಹ ಅಭಿಪ್ರಾಯ?

ಸುಮಲತಾ ಅಂಬರೀಷ್ ಅವರ ಈ ಹೇಳಿಕೆಗೆ ಕುಮಾರಸ್ವಾಮಿ ವ್ಯಂಗ್ಯವಾಗಿ ಮಾತನಾಡಿದ್ದು. ಕುಮಾರಸ್ವಾಮಿಯವರು ಜಲಾಶಯ ರಕ್ಷಣೆ ಮಾಡ್ತಾರಂತೆ. ಅವರನ್ನೇ ಜಲಾಶಯದ ಬಾಗಿಲ ಬಳಿ ಮಲಗಿಸಿ ಬಿಟ್ರೆ ಆಯ್ತು ಅಂತ ಹೇಳಿ ಬಿಟ್ರು. ಯಾಕೆ ಕುಮಾರಸ್ವಾಮಿ ಹೀಗೆ ಹೇಳಿದ್ರು ಅನ್ನೋದೇ ಅರ್ಥ ಆಗ್ತಾ ಇಲ್ಲ. ನೋಡೋಣ ಮತ್ತೊಮ್ಮೆ ಕುಮಾರಸ್ವಾಮಿ ಇದಕ್ಕೆ ಏನ್ ರಿಯಾಕ್ಟ್ ಮಾಡಿದ್ರು ಅಂತ.

ಕುಮಾರಸ್ವಾಮಿ ಹೀಗೆ ಯಾಕೆ ಗರಂ ಆದ್ರು, ಸುಮಲತಾ ಅವರ ಬಗ್ಗೆ ಯಾಕೆ ವ್ಯಂಗ್ಯವಾಗಿ ಹೇಳಿಕೆ ಕೊಟ್ರು ಅನ್ನೋದೇ ಚರ್ಚೆಯಾಗ್ತಿದೆ. ಜಲಾಶಯದ ರಕ್ಷಣೆ ವಿಚಾರದಲ್ಲಿ ಯಾರು ದನಿ ಎತ್ತಿದ್ರೂ ಅದು ಸರಿಯಾದ ಕ್ರಮವೇ ಆಗುತ್ತೆ. ಆದರೆ ,ಕೆಆರ್ ಎಸ್ ಸುತ್ತಮುತ್ತ ಏನೂ ಆಗ್ತಾನೇ ಇಲ್ಲ ಎಂಬಂತೆ , ಸುಮಲತಾ ಅನಗತ್ಯವಾಗಿ ಯಾರನ್ನೋ ಟಾರ್ಗೆಟ್ ಮಾಡಿ ಈ ವಿಚಾರ ಪ್ರಸ್ತಾಪ ಮಾಡ್ತಾ ಇದ್ದಂತೆ ಯಾಕೆ ಪ್ರತಿಕ್ರಿಯೆ ಕೊಡ್ತಾ ಇದಾರೆ ಅನ್ನೋದೇ ಯಕ್ಷ ಪ್ರಶ್ನೆ. ಆದರೆ ,ಈ ವಿಚಾರ ಮಂಡ್ಯದಲ್ಲಂತೂ ಈಗ ಬಿರುಸಿನ ಚರ್ಚೆಗೆ ಕಾರಣವಾಗಿದೆ.

ಕೆಆರ್ ಎಸ್ ಬಳಿ ಗಣಿಗಾರಿಕೆ ನಡೀತಾನೇ ಇರಲಿಲ್ವಾ?
ಜಲಾಶಯಕ್ಕೆ ಯಾವುದೇ ಹಾನಿಯೂ ಆಗ್ತಾನೇ ಇಲ್ವಾ?

ಕೆಆರ್ ಎಸ್ ಬಳಿ ಯಾವುದೂ ಕಲ್ಲು ಗಣಿಗಾರಿಕೆ ನಡೀತಾನೇ ಇರಲಿಲ್ವಾ ಅಂತ ಕೇಳಿದ್ರೆ ಜನ ಪ್ರತಿನಿಧಿಗಳು ಸರಿಯಾಗಿ ಉತ್ತರ ಕೊಡ್ತಾ ಇಲ್ಲ. ಇಲ್ಲಿ ಗಣಿಗಾರಿಕೆ ನಡೀತಾ ಇದೆ. ಇಲ್ಲಿ ನಡೆಸ್ತಾ ಇರೋ ಸ್ಫೋಟದಿಂದಾಗಿ ಜಲಾಶಯಕ್ಕೆ ಹಾನಿಯಾಗ್ತಿದೆ ಅನ್ನೋ ಮಾತು ಇವತ್ತು ನಿನ್ನೆಯದಲ್ಲ. ಇದು ಹಲವಾರು ವರ್ಷಗಳಿಂದ ಕೇಳಿ ಬರ್ತಾನೇ ಇದೆ. ಆದರೆ, ಇದರ ಬಗ್ಗೆ ಆಗಾಗ ಕೆಲವರು ದನಿ ಎತ್ತಿದ್ದು ಬಿಟ್ಟರೆ ಜನ ಪ್ರತಿನಿಧಿಗಳು ಹೆಚ್ಚು ಮಾತನಾಡಿದ್ದೇ ಇಲ್ಲ. ಈ ಹಿಂದೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯನವರು ಇದ್ದಾಗ ಕಲ್ಲು ಗಣಿಗಾರಿಕೆಯಿಂದ ಜಿಲ್ಲೆಯ ಜನ-ಜೀವನಕ್ಕೆ ಅಪಾಯ ಅಂತ ಹೇಳ್ತಾನೇ ಇದ್ರು. ಈಗಲೂ ಹಲವಾರು ಪರಿಸರ ಪ್ರೇಮಿಗಳು, ತಜ್ಞರು, ರೈತ ಮುಖಂಡರು ದನಿ ಎತ್ತಿದ್ರೂ ಇವರ ಮಾತನ್ನು ಯಾರೂ ಕಿವಿಗೇ ಹಾಕಿಕೊಳ್ತಾ ಇರಲಿಲ್ಲ. ಆದರೆ ಈಗ ಮಂಡ್ಯದ ಸಂಸದೆ ಸುಮಲತಾ ಅವರೇ ಈ ವಿಚಾರವನ್ನು ಕೈಗೆತ್ತಿಕೊಂಡು ಮುಂದುವರೆದಿದ್ದಾರೆ. ಹೀಗಾಗಿ ಕೃಷ್ಣ ರಾಜ ಸಾಗರ ಜಲಾಶಯದ ಹತ್ತಿರ ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಆಗ್ತಾ ಇರೋದೇನು ಅನ್ನೋ ವಿಚಾರದ ಬಗ್ಗೆ ಮಂಡ್ಯದಲ್ಲಿ ಗುಸು ಗುಸು ಆರಂಭವಾಗಿದೆ. ಇಲ್ಲಿ ಗಣಿಗಾರಿಕೆ ನಡೀತಾನೇ ಇದ್ದಿದ್ದೇ ಆದ್ರೆ ಅದನ್ನು ಯಾರು ನಡೆಸ್ತಾರೆ, ಇದರ ಹಿಂದೆ ಯಾರಾದರು ಪ್ರಭಾವಿಗಳಿದ್ದಾರಾ, ಯಾರ ಒತ್ತಡ ಇದೆ, ಇದೆಲ್ಲ ಹೊರಗೆ ಬರಲೇಬೇಕು. ಆದರೆ, ಇದೆಲ್ಲ ಹೊರಗೆ ತರುವ ನಿಟ್ಟಿನಲ್ಲಿ ಸುಮಲತಾ ಅಂಬರೀಷ್ ಮಾತನಾಡಿದ್ರೆ ಕುಮಾರಸ್ವಾಮಿಯವರು ಯಾಕೆ ಗರಂ ಆಗಬೇಕಿತ್ತು ಅನ್ನೋದು ದೊಡ್ಡ ಪ್ರಶ್ನೆ.

ಸಾರ್ವಜನಿಕ ಹಿತಾಸಕ್ತಿಯಿಂದ ಯಾರು ಯಾವುದೇ ವಿಚಾರ ಮಾತನಾಡಿದರೂ ಅದನ್ನು ಒಪ್ಪಲೇಬೇಕು. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇದೆ ಅನ್ನೋ ಅನುಮಾನ ಬರಬಾರದು. ಆದ್ರೆ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್ ನಡುವೆ ನಡೆದ ಮಾತಿನ ಸಮರ ಹಲವು ಅನುಮಾನಗಳಿಗೆ ಕಾರಣವಾಗಿದೆ.

The post ಕುಮಾರಸ್ವಾಮಿ-ಸುಮಲತಾ ವಾಕ್ಸಮರ -ಹೆಚ್​ಡಿಕೆ ಗರಂ ಆಗ್ತಿರೋದು ಯಾಕೆ? appeared first on News First Kannada.

Source: newsfirstlive.com

Source link