ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯ ನೋವಿನ ನಡುವೆಯೇ ದೊಡ್ಮನೆ ಕುಟುಂಬದ ನಿರ್ಧಾರದಂತೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಪುತ್ರಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಬೆಂಗಳೂರಿನ ಅರಮನೆ ಆವರಣದಲ್ಲಿ ಕುಮಾರ್ ಬಂಗಾರಪ್ಪ ಅವರ ಪುತ್ರಿ ಲಾವಣ್ಯ ಇಂದು ವಿಕ್ರಮಾದಿತ್ಯ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾಹ ನಡೆಯುವ ಅರಮನೆ ಆವರಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಬೆಂಗಳೂರಿನ ಖ್ಯಾತ ಮೇಕಪ್ ಕಲಾವಿದೆ ಗೀತಾಂಜಲಿ ವೆಂಕಟೇಶ್, ಮದುಮಗಳು ಲಾವಣ್ಯಗೆ ಮೇಕಪ್ ಮಾಡಿದ್ದಾರೆ. ಗೀತಾಂಜಲಿ ಅವರು ಕಳೆದ 5 ವರ್ಷಗಳಿಂದ ಮೇಕಪ್ ಕಲಾವಿದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಮೊದಲು ಮೇ.30 ರಂದು ನಡೆಯಬೇಕಿದ್ದ ಮದುವೆಯನ್ನು ಕೋವಿಡ್ ಕಾರಣದಿಂದ ಕುಟುಂಬದರು ಮುಂದೂಡಿದ್ದರು. ಅದರಂತೆ ಇಂದು ಮದುವೆ ನಡೆಯುತ್ತಿದೆ. ಈ ಶುಭ ಸಮಾರಾಂಭಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳು, ವಿರೋಧ ಪಕ್ಷದ ನಾಯಕರು, ತೆಲುಗು, ತಮಿಳು, ಕನ್ನಡ ಚಿತ್ರೋದ್ಯಮದ ಗಣ್ಯರು, ದೆಹಲಿಯ ನಾಯಕರು ಸೇರಿದಂತೆ ಹಲವು ಗಣ್ಯರು ಆಗಮಿಸುವ ಸಾಧ್ಯತೆ ಇದೆ.