ಕೂತಸ್ಥಳದಿಂದ ಏಳಲಾಗದಷ್ಟು ಸ್ಥೂಲದೇಹಿಯಾಗಿದ್ದ ಕಿರಣ್ ದೆಂಬ್ಲಾ ಈಗ ಬಾಡಿ ಬಿಲ್ಡಿಂಗ್ ಟ್ರೇನರ್ | This is story of an obese woman who went on to become a body builder and trainer as well


ವಿಡಿಯೋನಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ಕಿರಣ್ ದೆಂಬ್ಲಾ (Kiran Dembla). ಈಗಿನ ಕಿರಣ್ ಮತ್ತು 25 ವರ್ಷಗಳ ಹಿಂದಿನ ಕಿರಣ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಮಾರಾಯ್ರೇ. ಸಿಂಧಿ ಸಮುದಾಯದ ಒಂದು ಮಧ್ಯಮ ವರ್ಗ ಕುಂಟುಂಬದಲ್ಲಿ ಒಬ್ಬ ಸಾಮಾನ್ಯ ಗೃಹಿಣಿಯಾಗಿದ್ದ (homemaker) ಈ ಚಾಂಪಿಯನ್ ಮಹಿಳಾ ಬಾಡಿ ಬಿಲ್ಡರ್ (body builder) ಗೆ ತನ್ನ 40 ನೇ ವಯಸ್ಸಿನವರೆಗೆ ಜಿಮ್ ಅನ್ನೋದು ಯಾವ ಸೀಮೆಯ ಹೆಸರು ಅಂತ ಗೊತ್ತಿರಲಿಲ್ಲ. ಸಿಂಧಿ ಜನ ಭೋಜನಪ್ರಿಯರು. ಸಾಮಾನ್ಯವಾಗಿ ಗೃಹಿಣಿಯರಿಗೆ ರುಚಿಯಾದ ಅಡುಗೆ ತಯಾರಿಸಿ ಕುಟುಂಬದ ಎಲ್ಲ ಸದಸ್ಯರೊಂದಿಗೆ ಹೊಟ್ಟೆ ತುಂಬಾ ಊಟ ಮಾಡುವುದು ಮತ್ತು ಕಣ್ತುಂಬಾ ನಿದ್ರಿಸುವುದು ಬಿಟ್ಟರೆ ಬೇರೆ ಕೆಲಸ ಇರೋದಿಲ್ಲ ಅಂತ ಕಿರಣ್ ಅವರೇ ಹೇಳುತ್ತಾರೆ. ಅವರಿಗೆ ಎರಡು ಮಕ್ಕಳು ಕೂಡ ಆಗಿದ್ದವು. ಆದರೆ, ಚಟುವಟಿಕೆಯಿಲ್ಲದ ಜೀವನಶೈಲಿಯಿಂದ ಅವರು ಸ್ಥೂಲದೇಹಿಯಾದರು ಮತ್ತು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುತ್ತಿರುವುದು ಕಂಡುಬಂದಾಗ ಅದನ್ನು ಕರಗಿಸಲು ಅವರು ಮೆಡಿಸಿನ್ ತೆಗೆದುಕೊಳ್ಳಲಾರಂಭಿಸಿದರು.

ಆದರೆ, ಔಷಧಿ ಸೇವನೆ ಅವರಲ್ಲಿ ಮಂಪರಿನಂಥ ಸ್ಥಿತಿ ಮೂಡಿಸುತ್ತಿತ್ತು. ದೇಹದ ತೂಕ ಕಡಿಮೆ ಮಾಡಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎನ್ನುವುದನ್ನು ಮನಗಂಡ ಕಿರಣ್ ಜಿಮ್ ಗೆ ಹೋಗುವ ನಿರ್ಧಾರ ಮಾಡಿದರು. ಆದರೆ, ಸಾಂಪ್ರದಾಯಿಕ ಕುಟುಂಬದ ಹಿನ್ನೆಲೆಯ ಕಿರಣ್ ಅವರಿಗೆ ಜಿಮ್ ಗೆ ಹೋಗಿ ಕಸರತ್ತು ಮಾಡುವುದು ಮುಜುಗುರ ಮತ್ತು ನಾಚಿಕೆ ಹುಟ್ಟಿಸುತಿತ್ತು. ಸೆಲ್ವಾರ್ ಕಮೀಜ್ ಧರಿಸಿ ಅವರು ಜಿಮ್ ಗೆ ಹೋಗುತ್ತಿದ್ದರಂತೆ!!

ಕೆಲ ದಿನಗಳ ನಂತರ ಅವರಿಗೆ ಕ್ರಮೇಣ ಅದು ಅಭ್ಯಾಸವಾಗತೊಡಗಿತು. ನಿಮಗೆ ಆಶ್ಚರ್ಯವಾಗಬಹುದು, ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು 25 ಕೆಜಿ ತೂಕ ಇಳಿಸಿಕೊಂಡರು. ನಂತರ ಪತಿಯ ದುಂಬಾಲು ಬಿದ್ದು ಅವರದ್ದೇ ಆದ ಒಂದು ಜಿಮ್ ಸೆಂಟರ್ ಸ್ಥಾಪಿಸಿದರು. ಜಿಮ್ ನೊಂದಿಗೆ ಅವರು ಯೋಗ ಮತ್ತು ಧ್ಯಾನ ಸಹ ಮಾಡುತ್ತಾರೆ.

ಏತನ್ನಧ್ಯೆ, ಸಂಗೀತದಲ್ಲಿ ಆಸಕ್ತಿ ಬೆಳಸಿಕೊಂಡು ಶಾಸ್ತ್ರೀಯ ಸಂಗೀತ ಅಭ್ಯಾಸ ಕೂಡ ಕಿರಣ್ ಮಾಡಿದರು. ಈಗ ಅವರು ಯುವಕ ಯುವತಿಯರಿಗೆ ಟ್ರೇನ್ ಮಾಡುವ ಬಾಡಿ ಬಿಲ್ಡರ್ ಮತ್ತು ಡಿಜೆಯೂ ಹೌದು. ಹೈದರಾಬಾದಿನಲ್ಲಿ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖೀ ಸಂಸಾರ ನಡೆಸುತ್ತಿರುವ 47ರ ಪ್ರಾಯದ ಕಿರಣ್ ಕೇವಲ ಮಹಿಳೆಯರಿಗೆ ಮಾತ್ರ ಅಲ್ಲ, ಸೋಂಬೇರಿ ಪುರುಷರಿಗೂ ಆದರ್ಶಪ್ರಾಯರಾಗಿದ್ದಾರೆ.

TV9 Kannada


Leave a Reply

Your email address will not be published. Required fields are marked *