ಉಡುಪಿ: ಹಸಿವೆಯ ಅನುಭವ ಒಬ್ಬ ಹಸಿದವನಿಗೆ ಮಾತ್ರ ತಿಳಿದಿರುತ್ತದೆ. ಮಹಾಮಾರಿ ಕೊರೊನಾ ಬಡವರನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸಿದೆ. ಸಂಕಷ್ಟದ ಕಾಲದಲ್ಲಿ ಉಡುಪಿಯ ಕೂಲಿ ಕಾರ್ಮಿಕರೊಬ್ಬರ ಹೃದಯ ಮಿಡಿದಿದೆ. ತನಗಿಂತ ಹೀನ ಸ್ಥಿತಿಯಲ್ಲಿರುವ ಎಪ್ಪತ್ತು ಕುಟುಂಬಕ್ಕೆ ಅನ್ನ ನೀಡುವ ಮಹತ್ಕಾರ್ಯ ಮಾಡಿದ್ದಾರೆ.

ಸಾಂಕ್ರಾಮಿಕ ಕೊರೊನಾ ಎಲ್ಲರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೂಲಿನಾಲಿ ಮಾಡಿ ಜೀವನ ಕಟ್ಟಿಕೊಂಡಿದ್ದ ಬಡವರನ್ನು ಮೇಲೇಳದಂತೆ ಪಾತಾಳಕ್ಕೆ ತಳ್ಳಿದೆ. ಅಗರ್ಭ ಶ್ರೀಮಂತನೂ ಲೆಕ್ಕಾಚಾರ ಮಾಡುವ ಸ್ಥಿತಿ ಬಂದಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿಯ ಬಡ ಕೂಲಿ ಕಾರ್ಮಿಕನ ಹೃದಯ ಮಿಡಿದಿದೆ.

ಫೋಟೋಲ್ಲಿರುವವರು ಅಂಬಲಪಾಡಿಯ ಕೃಷ್ಣ. ಕೂಲಿಕೆಲಸ ಮರ ಕಡಿಯುವುದು ಮರದ ಗೆಲ್ಲು ಜಾರಿಸುವುದು ಇವರ ಕಾಯಕ. ದಲಿತ ಸಮುದಾಯದ ಕೃಷ್ಣ, ಬೆವರು ಸುರಿಸಿ ಸಂಪಾದಿಸಿದ ಸುಮಾರು 70 ಸಾವಿರ ರೂಪಾಯಿಯನ್ನು ದಾನ ಮಾಡಿದ್ದಾರೆ. ಅಕ್ಕಿ ಬೇಳೆ ಉಪ್ಪು ಸಕ್ಕರೆ ಚಹಾ ಕುಡಿ ಎಲೆ-ಅಡಿಕೆ ಮತ್ತಿತರ ಅಗತ್ಯ ವಸ್ತುಗಳನ್ನು 70 ಕುಟುಂಬಗಳಿಗೆ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೃಷ್ಣ, ನಾನು ಚಿಕ್ಕಂದಿನಲ್ಲಿದ್ದಾಗ ನನ್ನ ತಂದೆ ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೂ ಅವರಿಗೆ ಅಲ್ಲಿ ಕೊಡುತ್ತಿದ್ದ ಗಂಜಿಯಲ್ಲಿ ತಿಳಿನೀರನ್ನು ಅವರು ಕುಡಿದು ಅನ್ನ ನಮಗೆ ತಂದು ಕೊಡುತ್ತಿದ್ದರು. ಜನರ ಕಷ್ಟ ಏನು ಎಂಬುದು ನನಗೆ ಇನ್ನೂ ನೆನಪಿದೆ. ನಾನು ವರ್ಷ ಪೂರ್ತಿ ಕೂಲಿ ಕೆಲಸ ಮಾಡುತ್ತೇನೆ. ದುಡಿಮೆ ಹಣದಲ್ಲಿ ಸ್ವಲ್ಪ ಸ್ವಲ್ಪ ಡಬ್ಬಿಯಲ್ಲಿ ಕೂಡಿಟ್ಟು ಉತ್ತಮ ಕೆಲಸಕ್ಕೆ ಬಳಸುತ್ತೇನೆ ಎಂದರು.

ಕೃಷ್ಣ ಆರ್ಥಿಕವಾಗಿ ಶ್ರೀಮಂತನಲ್ಲ. ಹೆಚ್ಚಿನ ಶ್ರೀಮಂತರಿಗೆ ಇಲ್ಲದ ಹೃದಯ ಶ್ರೀಮಂತಿಕೆ ಕೃಷ್ಣನಿಗೆ ಇದೆ. ನಾನು ಚಿಕ್ಕಂದಿನಲ್ಲಿ ಅನುಭವಿಸಿದ ಕಷ್ಟ ಏನು ಎಂಬುದು ಮರೆಯದ ಅವರು, ಉಡುಪಿ ಸುತ್ತಲ ಐದಾರು ಗ್ರಾಮದ ಕಡುಬಡವರನ್ನು ಗುರುತಿಸಿ ಎಲ್ಲರಿಗೂ ದಿನಸಿ ಕಿಟ್ ಗಳನ್ನು ಕೊಟ್ಟಿದ್ದಾರೆ. ತಾನು ಒಂದೆರಡು ವರ್ಷ ಸಂಪಾದಿಸಿದ ಕೂಲಿ ಹಣದಲ್ಲಿ ಪ್ರತಿದಿನ ಪ್ರತ್ಯೇಕವಾಗಿ ಕೂಡಿಡುತ್ತಿದ್ದರು. ಸಮಸ್ಯೆಯ ಈ ಸಂದರ್ಭದಲ್ಲಿ ಎಲ್ಲವನ್ನೂ ಕೊಟ್ಟುಬಿಟ್ಟಿದ್ದಾರೆ.

ಕೃಷ್ಣ ಅವರ ಸಮಾಜಸೇವೆಗೆ ಮತ್ತೊಬ್ಬ ಸಮಾಜಸೇವಕ ವಿಶು ಶೆಟ್ಟಿ ಅಂಬಲ್ಪಾಡಿ ಪ್ರೇರಕ. ವಿಶು ಅವರ ನಿರಂತರ ಜನಸೇವೆಯಿಂದ ಉತ್ತೇಜಿತರಾಗಿ ಈ ಕೆಲಸ ಮಾಡಿದ್ದಾರೆ. ಸಮಾಜ ಸೇವಕ ವಿಶ್ವ ಶೆಟ್ಟಿ ಅಂಬಲ್ಪಡಿ ಮಾತನಾಡಿ, ಕಿಟ್ಟ ನನ್ನ ಗೆಳೆಯ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೆ ಸ್ಪಂದಿಸುವ ವ್ಯಕ್ತಿ. ಕೂಲಿ ಕೆಲಸ ಮಾಡಿ ತಾಯಿಯ ಜೊತೆ ಬದುಕುತ್ತಿರುವವರು ಮೃದುಹೃದಯಿ. ಎಲ್ಲರೂ ಕೃಷ್ಣನಂತೆ ಆಲೋಚನೆ ಮಾಡಿದರೆ ಪಕ್ಕದ ಮನೆಯವರು ಹಸಿವಿನಿಂದ ಮಲಗುವುದನ್ನು ತಪ್ಪಿಸಬಹುದು. ಲಾಕ್ಡೌನ್ ಸಂದರ್ಭ ಇವರ ಕಾರ್ಯ ಎಲ್ಲರಿಗೂ ಮಾದರಿ ಎಂದರು.

The post ಕೂಲಿ ಮಾಡಿ ಕೂಡಿಟ್ಟ 70 ಸಾವಿರ ರೂ. ದಾನ ಮಾಡಿದ ಉಡುಪಿಯ ಕೃಷ್ಣ appeared first on Public TV.

Source: publictv.in

Source link