ಜವರಾಯ ಎಲ್ಲಿ ಯಾರನ್ನ ಹೇಗೆ ಲಾಕ್ ಮಾಡ್ತಾನೋ ಯಾರಿಗೂ ಗೊತ್ತಾಗಲ್ಲ. ಕೂಲ್ ಡ್ರಿಂಕ್ಸ್ ಕುಡೀಬೇಕೆಂಬ ಆಸೆಯೇ ಆತನ ಜೀವಕ್ಕೆ ಕಂಟಕವಾಗಿ ಬಿಡ್ತು. ಇಷ್ಟಕ್ಕೆಲ್ಲ ಕಾರಣ ಪ್ರೇಮ ವೈಫಲ್ಯ. ಹೀಗೆ ಪ್ರವೇಶ ನಿಷಿದ್ಧ ಅಂತ ಕ್ರೈಂ ಸೀನ್ ಸೆಕ್ಯೂರ್ ಮಾಡಿರೋ ಪೊಲೀಸರು. ಸುತ್ತಲು ನಿಂತು ನೋಡುತ್ತಿರುವ ಜನ. ಈ ದೃಶ್ಯ ಕಂಡು ಬಂದಿದ್ದು ನ್ಯೂ ಬೈಯ್ಯಪ್ಪನಹಳ್ಳಿಯಲ್ಲಿ.
ನಿನ್ನೆ ರಾತ್ರಿ ರಸ್ತೆ ಮಧ್ಯದಲ್ಲೇ ರಕ್ತ ಚಿಮ್ಮಿತ್ತು. ಸ್ಪ್ರೈಟ್ ಕುಡಿಯಲು ಸ್ನೇಹಿತನ ಜೊತೆ ಬಂದ ಭೂಪತ್ ಸಿಂಗ್ ಎಂಬಾತ ಅಂಗಡಿಗೆ ಬಂದವನು ಕೊಲೆಯಾಗಿ ಹೋಗಿದ್ದ. ನಾಲ್ಕೈದು ಜನರ ಹಳೆ ಬೈಯಪ್ಪನಹಳ್ಳಿ ಗ್ಯಾಂಗ್ನಿಂದ ಈ ಹತ್ಯೆ ನಡೆದಿದೆ ಎಂಬ ಮಾಹಿತಿ ಇದೆ.
ಉತ್ತರ ಭಾರತದ ಭೂಪತ್ ಸಿಂಗ್ ಮೂರು ತಿಂಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಡ್ರಿಲ್ಲಿಂಗ್ ಕೆಲಸ ಮಾಡ್ತಿದ್ದ ಭೂಪತ್ ಸಿಂಗ್ ಸ್ನೇಹಿತನ ರೂಮಲ್ಲಿದ್ದ. ಹೀಗೆ ನಿನ್ನೆ ರಾತ್ರಿ ಸ್ಪ್ರೈಟ್ ಕುಡಿಯೋಕೆ ಅಂತ ಸ್ನೇಹಿತನ ಜೊತೆ ಆಚೆ ಹೊರಟಿದ್ದ. ದಾರಿಯಲ್ಲಿ ನಾಲ್ಕೈದು ಜನ ಎಣ್ಣೆ ಏಟಲ್ಲಿ ಹೋಗೊ ಬರೋರಿಗೆ ಕಿರಿಕ್ ಮಾಡ್ತಿದ್ರು. ಆ ಸಂಧರ್ಭದಲ್ಲಿ ಭೂಪತ್ ಸಿಂಗ್ ಜೊತೆಗೂ ಕಿರಿಕ್ ಮಾಡಿದ್ದಾರೆ. ಅಷ್ಟೆ ಅಲ್ಲಿ ರಕ್ತದೋಕುಳಿಯೇ ಹರಿದಿತ್ತು.
ಕಿರಿಕ್ ಮಾಡಿದ ಗ್ಯಾಂಗ್ನಲ್ಲಿದ್ದವನೊಬ್ಬ ಭೂಪತ್ ಸಿಂಗ್ ಪಕ್ಕೆಗೆ ಚಾಕು ಇರಿದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದ. ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಹಂತಕರಲ್ಲೊಬ್ಬನಿಗೆ ಲವ್ ಫೇಲ್ಯೂರ್ ಆಗಿತ್ತಂತೆ. ಇದೇ ಬೇಜಾರಿನಲ್ಲಿ ಕಂಠಮಟ್ಟ ಕುಡಿದು ರೋಡಿಗಿಳಿದಿದ್ದಾರೆ. ಈ ವೇಳೆ ಭೂಪತ್ ಸಿಂಗ್ ಜೊತೆ ಜಗಳವಾಗಿ, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಅಂತ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಸದ್ಯ ಇಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಪೂರ್ವ ವಿಭಾಗ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ವಿಧಿಯಾಟವೋ, ಪ್ರೇಮ ವೈಫಲ್ಯವೋ ಹೊಟ್ಟೆ ಪಾಡಿಗಾಗಿ ಊರು ಬಿಟ್ಟು ಊರಿಗೆ ಬಂದ ಅಮಾಯಕನ ಪ್ರಾಣ ಹೋಗಿದ್ದು ಮಾತ್ರ ದುರಂತ.