ಕೃಷಿಯಲ್ಲಿ ಡ್ರೋಣ್​ ಬಳಕೆಗೆ ಹಣ ಕೊಡೋದು ಯಾರು..? ಅನ್ನದಾತನ ಕೈ ಹಿಡಿಯುತ್ತಾ ಈ ಹೊಸ ಆವಿಷ್ಕಾರ


ಇನ್ನು ಕೆಲವೇ ದಶಕಗಳಲ್ಲಿ ವಿಶ್ವದ ಜನಸಂಖ್ಯೆ ಬರೋಬ್ಬರಿ 850 ಕೋಟಿ ದಾಟುತ್ತೆ.. ಜನಸಂಖ್ಯೆ ಹೆಚ್ಚಿದಷ್ಟು ಆಹಾರ ಪೂರೈಕೆಯೇ ದೊಡ್ಡ ಸವಾಲಾಗಿ ಪರಿಣಮಿಸುತ್ತಾ ಇದೆ. ಒಂದೆಡೆ ವಿಶ್ವದ ಹಸಿವೆ ದೊಡ್ಡದಾದರೆ.. ಭಾರತೀಯರ ಹಸಿವೆಗೂ ಮಿತಿಯಿಲ್ಲ.. ಇಂಥ ವೇಳೆ ಅನ್ನದಾತ ಏನು ಮಾಡಬೇಕು? ಆ ನಿಟ್ಟಿನಲ್ಲೇ ಹೊಸ ಆಲೋಚನೆ ಹುಟ್ಟಿಕೊಂಡಿದೆ.. ಡ್ರೋನ್​ ತಂತ್ರಜ್ಞಾನವೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ..

ಫೆಬ್ರವರಿ 1 ರಂದು ಭಾರತದ ಬಜೆಟ್ ಮಂಡಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಚರ್ಚೆ ಹುಟ್ಟು ಹಾಕುವುದರ ಜೊತೆಗೆ, ಹೊಸ ಸಾಧ್ಯತೆಗಳನ್ನೂ ತೆರದಿಟ್ಟಿದ್ದಾರೆ.. ವಿಶ್ವದ ಅತ್ಯಂಥ ಫಲವತ್ತಾದ ಭೂಮಿ ಭಾರತದಲ್ಲಿದ್ದರೂ ಭಾರತದ ರೈತ ಸಾಲದ ಸುಳಿಗೆ ಸಿಲುಕುವುದು ನಿಲ್ಲುತ್ತಿಲ್ಲ.. ವೈಜ್ಞಾನಿಕ ಕೃಷಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗೋದೇ ಅದಾಧ್ಯ ಅಂಥ ಸ್ಥಿತಿ ಇದೆ.. ಇನ್ನೊಂದೆಡೆ ಬೆಳೆ ಕೈಗೆ ಬರುತ್ತಾ? ಅನ್ನೋ ಪ್ರಶ್ನೆಯೂ ಕಾಡುತ್ತಿರುತ್ತೆ.. ಶೀಘ್ರ ಬೆಳೆ ಹಂಬಲದಲ್ಲಿ ಫಲವತ್ತಾದ ಭೂಮಿಗೆ ವಿಷವುಣಿಸಿ ಬಂಜರು ಮಾಡಿದವರ ಸಂಖ್ಯೆಗೂ ಕೊರತೆ ಇಲ್ಲ.. ಇಂಥ ಸ್ಥಿತಿಯಲ್ಲಿ ಸರ್ಕಾರ ಏನು ಮಾಡಬೇಕು? ರೈತರು ಏನು ಮಾಡಬೇಕು? ವ್ಯವಸ್ಥೆ ಹೇಗಿರಬೇಕು? ಅನ್ನೋ ಪ್ರಶ್ನೆ ಮೂಡುತ್ತಲೇ ಇರುತ್ತೆ..

ಸಾಲಮನ್ನಾ ಮಾಡೋದು.. ಕೆಲ ಬೆಳೆಗೆ ಬೆಂಬಲ ಬೆಲೆ ನೀಡೀ ಕೈತೊಳೆದು ಕೊಳ್ಳೋದೇ ಸರ್ಕಾರದ ಕರ್ತವ್ಯ ಅಂತ ಭಾವಿಸಿದ ಸರ್ಕಾರಗಳು ಕೃಷಿ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಗಮನ ಹರಿಸಲೇ ಇಲ್ಲ.. ಕೃಷಿ ಕ್ಷೇತ್ರದ ಆಮೂಲಾಗ್ರ ಸುಧಾರಣೆಗಾಗಿ ಮಹತ್ವದ ಕಾನೂನನ್ನು ತಂದರೂ ಕೇಂದ್ರ ಸರ್ಕಾರ, ಸರಿಯಾದ ರೀತಿಯಲ್ಲಿ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ಸೋತು ಹೋಯಿತು..ಪರಿಣಾಮ ಮೂರೂ ಕಾನೂನುಗಳನ್ನು ಮರಳಿ ಪಡೆಯಲೇ ಬೇಕಾದ ಸ್ಥಿತಿಗೆ ಕೇಂದ್ರ ಸರ್ಕಾರ ಸಿಲುಕಿಕೊಂಡಿತು.. ಇನ್ನೊಂದೆಡೆ ರೈತರೂ ಸಹ ತಮ್ಮ ಮುಂದಿನ ಹಾದಿ ಹೇಗಿರಬೇಕು? ಯಾವ ರೀತಿಯ ಕೃಷಿ ಕ್ರಮಗಳನ್ನು ಅನುಸರಿಸಬೇಕು? ಅನ್ನೋ ನಿಟ್ಟಿನಲ್ಲೂ ಗಹನವಾದ ಚರ್ಚೆ ನಡೆಸಲು ಯಾಕೋ ಸಾಧ್ಯವಾಗುತ್ತಿಲ್ಲ.. ಇಂಥ ಸಮಯದಲ್ಲಿಸ ಹಜವಾಗಿ ಕೃಷಿ ಕ್ಷೇತ್ರಕ್ಕೆ ಅನಾಥಭಾವ ಕಾಡುತ್ತಿರೋದು ಸುಳ್ಳಲ್ಲ..

ಕೃಷಿ ಕ್ಷೇತ್ರಕ್ಕೆ ಬದಲಾವಣೆ ಹೊರತಾದ ಬೇರೆ ಮಾರ್ಗ ಇಲ್ಲ

ಅತ್ಯಾಧುನಿಕ ತಂತ್ರಜ್ಞಾನದ ಸಾಥ್ ಕೈಗೂಡುತ್ತಾ?

ಕೇಂದ್ರದ ಪ್ಲಾನ್ ಏನು? ವಾಸ್ತವವಾದ್ರೂ ಏನು?

ಇಂದು ವಿಶ್ವದ ಕೃಷಿ ಕ್ಷೇತ್ರ ಗಣನೀಯವಾದ ಬದಲವಾಣೆಗಳನ್ನು ಕಾಣುತ್ತಿದೆ. ಮಣ್ಣೇ ಇಲ್ಲದೇ ಉತ್ತಮ ಬೆಳೆದ ಇಸ್ರೇಲ್ನಂಥ ಮಾದರಿ ದೇಶಗಳಿವೆ..ನೀರಿನ ಕೊರತೆ ಇದ್ರೂ ಅಪಾರ ಬೆಳೆ ಬೆಳೆದ ಉದಾಹರಣೆಗಳೂ ಇವೆ.. ಈ ನಿಟ್ಟಿನಲ್ಲಿ ಭಾರತ ತನ್ನ ಸಾಮರ್ಥ್ಯವನ್ನ ಇನ್ನೂ ಮನಗಂಡಂತೆ ಕಾಣುತ್ತಿಲ್ಲ.. ಸಾಯಿಲ್ ಹೆಲ್ತ್ ಕಾರ್ಡ್, ಪರ್ ಡ್ರಾಪ್ ಮೋರ್ ಕ್ರಾಪ್ ಮುಂತಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದ್ದರೂ ಆನ್ ಗ್ರೌಂಡ್ ಅದು ಆಮೂಲಾಗ್ರ ಬದಲಾವಣೆ ತರೋಕೆ ಸಾಧ್ಯವಾಗಿಲ್ಲ.. ಕಿಸಾನ್ ಸಮ್ಮಾನ್ ನಿಧಿ ಸಣ್ಣ ಸಣ್ಣ ರೈತರ ಅಕೌಂಟ್ಗೆ ಸಂದಾಯವಾಗುತ್ತಿದ್ದರೂ ಕೃಷಿ ಕ್ಷೇತ್ರಕ್ಕೆ ಹೇಳಿಕೊಳ್ಳುವಂಥ ಲಾಭವನ್ನು ತಂದಿಲ್ಲ.. ಇಂಥ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನ ಘೋಷಿಸಿದೆ. ಜೊತೆಗೆ ಅದು ಸಕ್ಸೆಸ್ ಆಗುತ್ತೆ ಅನ್ನೋ ಭರವಸೆಯಲ್ಲೂ ಇದೆ.. ಆದ್ರೆ ಈ ಡ್ರೋಣ್ ಹಾರುತ್ತಾ..?

ಫೆಬ್ರವರಿ ಒಂದರಂದು ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹತ್ವದ ಯೋಜನೆಯನ್ನು ಘೋಷಿಸಿದ್ದಾರೆ. ಟ್ರಾಕ್ಟರ್, ಚಕ್ಕಡಿ, ಕೆಮಿಕಲ್ ಸಿಂಪಡಿಸುವ ಪಂಪ್, ಹರಗುವ ಹಲ್ಲೆ.. ಮುಂತಾದ ರೀತಿಯಲ್ಲೇ ಡ್ರೋಣ್ ಅನ್ನೂ ಕೂಡ ಪ್ರತಿ ಭಾರತೀಯ ರೈತರ ಒಕ್ಕಲುತನದ ಭಾಗವನ್ನಾಗಿಸುವ ಕನಸನ್ನು ಬಿಚ್ಚಿಟ್ಟಿದ್ದಾರೆ.

                     -ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ   

ಬೆಳೆ ಲೆಕ್ಕಾಚಾರಕ್ಕಾಗಿ.. ಜಮೀನು ದಾಖಲಾತಿಗಾಗಿ.. ಕೀಟನಾಶಕಗಳ ಸಿಂಪಡಣೆಗಾಗಿ ಮತ್ತು ಗೊಬ್ಬರ, ಪೋಷಕಾಂಶ ನೀಡಲು ಡ್ರೋಣ್ಗಳನ್ನು ಹೆಚ್ಚಾಗಿ ಬಳಸಲು ನಿರ್ಧರಿಸಲಾಗಿದೆ

ನಿರ್ಮಲಾ ಸೀತಾರಾಮನ್ ಏನೋ ಈ ಯೋಜನೆಯನ್ನು ಘೋಷಣೆ ಮಾಡಿದ್ರು.. ಆದ್ರೆ ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡೋದು ಯಾರು? ಭಾರತದಲ್ಲಿ ಸುಮಾರು ಲಕ್ಷದಷ್ಟು ಚಿಕ್ಕ ಚಿಕ್ಕ ರೈತರಿದ್ದಾರೆ.. ಅವರು 2 ಎಕರೆಗೂ ಕಡಿಮೆ ಭೂಮಿ ಹೊಂದಿದ್ದಾರೆ.. ನಿರಾವರಿ ಸೌಲಭ್ಯದಿಂದ ವಂಚಿತರಾದವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ.. ಹೀಗಿದ್ದಾಗ ಈ ಯೋಜನೆ ಸಕ್ಸೆಸ್ ಆಗುತ್ತಾ? ಈ ಯೋಜನೆಯ ವೆಚ್ಚ ಎಷ್ಟಾಗುತ್ತೆ? ಅನ್ನೋ ಪ್ರಶ್ನೆಗಳು ಸಹಜವಾಗಿ ಮೂಡುತ್ತಿವೆ. ಎಲ್ಲಕ್ಕಿಂತ ಸಾಮಾನ್ಯ ಪ್ರಶ್ನೆ ಎಂದರೆ, ಡ್ರೋಣ್ಗಳ ವೆಚ್ಚವನ್ನು ಭರಿಸೋರು ಯಾರು? ಅನ್ನೋದು..!

ಡ್ರೋಣ್ ಬಳಕೆಯ ಮೂಲ ಉದ್ದೇಶವೇನು?

ಇಂದು ಭಾರತದ ಯಾವುದೇ ರೈತನನ್ನು ಕೇಳಿದ್ರೂ ಒಂದು ಮಾತನ್ನು ಹೇಳೇ ಹೇಳ್ತಾರೆ.. ದುಡ್ಡು ಕೊಡ್ತೀವಿ.. ಊಟ ಕೊಡ್ತೀವಿ ಅಂತಾ ಹೇಳಿದ್ರೂ ಆಳೇ ಸಿಗ್ತಿಲ್ಲ ಅಂತ.. ಆಳುಗಳು ಸಿಕ್ಕರೂ ಅವರ ಪ್ರೊಡಕ್ಟಿವಿಟಿ ಎಷ್ಟಿರಬಹುದು? ಅನ್ನೋ ಪ್ರಶ್ನೆ ಕೂಡ ಮೂಡೇ ಮೂಡುತ್ತೆ.. ಇನ್ನು ಸ್ವತಃ ರೈತರೇ ಕೀಟನಾಶಕ ಸಿಂಪಡಿಸಿವುದು.. ಗೊಬ್ಬರ ಹಾಕುವುದು ಮಾಡುವುದರಿಂದ ಅವರ ಆರೋಗ್ಯದ ಮೇಲೆ ಬೀರುವ ಪರಿಣಾಮ ಊಹಿಸಲೂ ಸಾಧ್ಯವಿಲ್ಲ.. ಅಷ್ಟೇ ಅಲ್ಲ ತಂತ್ರಜ್ಞಾನದ ಬಳಕೆ ಇಲ್ಲದೇ ಮಾಡುವ ಇಂಥ ಕೃಷಿಯಲ್ಲಿ ಎಫರ್ಟ್ ಹೆಚ್ಚಿದ್ದರೂ.. ಖರ್ಚು ಕೂಡ ಹೆಚ್ಚಾಗಿ ಇರುತ್ತೆ.. ಇಂಥ ಸಮಯದಲ್ಲಿಯೇ ಡ್ರೋಣ್ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತೆ ಅನ್ನೋದು ನೀತಿ ಆಯೋಗದ ಅಭಿಪ್ರಾಯ..

ತಂತ್ರಜ್ಞಾನ ಬಳಕೆಯಿಂದ ಖರ್ಚೂ ಕಡಿಮೆ

ಡ್ರೋಣ್ ಬಳಕೆಯಿಂದ ಇಳುವರಿಗೂ ಲಾಭ

ಡ್ರೋಣ್ ಬಳಕೆಯಿಂದ ಮೊದಲನೆಯದಾಗಿ ಭೂಮಿಯ ಗುಣಮಟ್ಟದ ಮ್ಯಾಪಿಂಗ್ ಅನ್ವಯ ಎಲ್ಲಿ ಅವಶ್ಯಕವಿದೆಯೋ ಅಲ್ಲಿ ಮಾತ್ರ ಕೀಟ ನಾಶಕ ಸಿಂಪಡಿಸಬಹುದು.. ಹೀಗಾದಾಗ ಕೀಟನಾಶಕ ಅವಶ್ಯವಿಲ್ಲದ ಬೆಳೆಗಳ ಮೇಲೆ ಕೀಟನಾಶಕ ಸಿಂಪಡನೆಯಾಗಲ್ಲ.. ಆಗ ಕೀಟನಾಶಕವೂ ಉಳಿಯುತ್ತೆ.. ಭೂಮಿಯ ಫಲವತ್ತತೆ ಉಳಿಯುವಿಕೆಗೂ ಇದು ಕಾರಣವಾಗುತ್ತೆ.. ಅಷ್ಟೇ ಅಲ್ಲ.. ಪೋಷಕಾಂಶ ಸಿಂಪಡನೆ, ಗೊಬ್ಬರ ಹಾಕುವುದು ಅಲ್ಲೂ ಕೂಡ ವೇಗ ಮತ್ತು ಕಾರುವಕ್ಕು ತನವನ್ನು ಸಾಧಿಸಲು ಸಾಧ್ಯವಾಗುತ್ತೆ.. ಆಗ ರೈತರಿಗೂ ಸಮಯವೂ ಉಳಿಯುತ್ತೆ, ಆರೋಗ್ಯ ಸಮಸ್ಯೆ ಕೂಡ ತಲೆದೂರಲ್ಲ.. ಜೊತೆ ಜೊತೆಗೆ ಹೆಚ್ಚು ಜನರಿಗೆ ನೀಡಬೇಕಾದ ಕೂಲಿಯಲ್ಲೂ ಉಳಿತಾಯ ಸಾಧ್ಯಾವುತ್ತೆ..

ಇನ್ನು ಅಗಾಧ ಪ್ರಮಾಣದ ಕೃಷಿ ಭೂಮಿ ಹೊಂದಿರುವ ಭಾರತದಲ್ಲಿ ಅವುಗಳ ಸರ್ವೆಗಾಗಿ ಕೂಡ ಸರ್ಕಾರಗಳು ಪ್ರತಿ ವರ್ಷ ನೂರಾರು ಕೋಟಿ ಹಣವನ್ನ ವ್ಯಯಿಸಬೇಕಾಗುತ್ತೆ.. ಯಾಕಂದ್ರೆ ಅದಕ್ಕೆ ಮ್ಯಾನ್ ಪವರ್​ ಬೇಕು, ಎಕ್ಸ್​​ಪರ್ಟ್​ಗಳು ಬೇಕು.. ಮ್ಯಾನುವಲಿ ಮಾಡಿದಾಗ ಅದಕ್ಕೆ ತಗಲುವ ಸಮಯವೂ ಅಧಿಕ.. ಆದ್ರೆ ಇಲ್ಲೂ ಅತ್ಯಾಧುನಿಕ ಡ್ರೋಣ್ಗಳನ್ನು ಬಳಸಿದಾಗ ಸಮಯವೂ ಉಳಿತಾಯವಾಗುತ್ತೆ.. ಹಣವೂ ಉಳಿತಾಯವಾಗೋದ್ರಲ್ಲಿ ಸಂಶಯವಿಲ್ಲ ಅಂತಾರೆ ತಂತ್ರಜ್ಞರು.

ಡ್ರೋಣ್ ಬಳಕೆಗೆ ಹಣ ಕೊಡೋದು ಯಾರು?

ಡ್ರೋಣ್​​ ಬಳಕೆ ಮಾಡಬೇಕು ಅನ್ನೋದು ಸರಿ.. ಇದರ ಹಿಂದಿನ ಉದ್ದೇಶವೂ ಉತ್ತಮವಾಗಿದೆ. ಆದ್ರೆ, ಹೀಗೆ ಡ್ರೋಣ್ ಬಳಕೆ ಮಾಡಬೇಕಾದರೆ ಅದಕ್ಕೆ ಬೇಕಾದ ಹಣವನ್ನು ಯಾರು ಕೊಡ್ತಾರೆ? ಕೇಂದ್ರ ಸರ್ಕಾರ ಕೊಡುತ್ತೋ? ರಾಜ್ಯಸರ್ಕಾರಗಳು ಕೊಡುತ್ತದೋ? ಸೊಸೈಟಿಗಳು ನೀಡುತ್ತವೋ? ಅಥವಾ ರೈತರೇ ತಮ್ಮ ಕೈಯಿಂದ ಹಾಕಿ ಖರ್ಚು ಮಾಡಬೇಕೋ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ..

ಇದಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.. ಮೊದಲನೆಯದಾಗಿ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಆರ್ಗನೈಝೇಶನ್ಸ್ಗಳಿಗೆ ಸರ್ಕಾರ ಶೇ.75ರಷ್ಟು ಸಬ್ಸಿಡಿ ಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ ಎನ್ನಲಾಗ್ತಿದೆ. ಡ್ರೋಣ್ ವಿಚಾರದಲ್ಲಿ ಪ್ರಯೋಗ ನಡೆಸಲು ಪ್ರಾರಂಭಿಕವಾಗಿ ಸಣ್ಣ ಪ್ರಮಾಣದ ಹಣವನ್ನ ಕೇಂದ್ರ ಹಣಕಾಸು ಸಚಿವಾಲಯ ತೆಗೆದಿರಿಸಿದೆ ಎನ್ನಲಾಗ್ತಿದೆ..

ನೀತಿ ಆಯೋಗದ ಸದಸ್ಯರಾಗಿರೋ ರಮೇಶ್ ಚಂದ್ ಅವರು ಹೇಳುವ ಹಾಗೆ.. ಪ್ರಾರಂಭಿಕವಾಗಿ ಡ್ರೋಣ್ ಬಳಕೆ ಸ್ವಲ್ಪ ಕಾಸ್ಟಲಿ ಎನಿಸಿದ್ರೂ.. ಹೆಚ್ಚಿನ ಜನ ಬಳಸಿದಂತೆ ಅತ್ಯಂತ ಅಗ್ಗವಾಗುತ್ತೆ ಅಂತಾರೆ ಅವರು. ಅಷ್ಟೇ ಅಲ್ಲ, ರೈತರು ತಂಡವಾಗಿ ಡ್ರೋಣ್​ ಬಳಕೆ ಮಾಡಿಕೊಳ್ಳಲು ಮತ್ತು ಅದಕ್ಕೆ ತಗಲುವ ವೆಚ್ಚನ್ನು ಹಂಚಿಕೊಳ್ಳಲು ಮುಂದಾದರೂ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಕೆಲಸ ಸಾಧ್ಯವಾಗುತ್ತೆ.. ಇನ್ನು ಕೇಂದ್ರದ ಲೆಕ್ಕಾಚಾರದಂತೆ ನೋಡಿದಾಗ, 10 ಕೇಜಿ ತೂಕವನ್ನು ಹೊರಬಲ್ಲು ಡ್ರೋಣ್ ಬಳಸಿದಾಗ, ಪ್ರತಿ ಎಕರೆಗೆ ಕೇವಲ 350-ರಿಂದ 400 ರೂಪಾಯಿ ವೆಚ್ಚ ತಗಲುತ್ತೆ. ಹೀಗಾಗಿ, ರೈತರು ಈ ತಂತ್ರಜ್ಞಾನಕ್ಕೆ ಒಂದು ಅವಕಾಶ ನೀಡಬೇಕು ಅಂತಾರೆ.

ಯಾವ ಡ್ರೋಣ್ ಬಳಸೇಕು? ಪೈಲೆಟ್ ಯಾರಾಗಿರಬೇಕು?

ರೈತರಿಗೆ ಮೋಸವಾಗದ ರೀತಿ ನಿರ್ವಹಣೆ ಸಾಧ್ಯವೇ?

ಡ್ರೋಣ್ ಬಳಕೆ ಎಂದಾಗ ಯಾವ ಡ್ರೋಣ್ ಬಳಸಬೇಕು? ಅನ್ನೋ ಪ್ರಶ್ನೆ ಕೂಡ ಮೂಡುತ್ತೆ. ಇಂದು ಮದುವೆಗಾಗಿ, ಖಾಸಗೀ ಕಾರ್ಯಕ್ರಮಗಳಿಗಾಗಿ ಅಥವಾ ಫೋಟೋ ಶೂಟ್ಗಾಗಿಯೂ ಡ್ರೋಣ್ ಬಳಕೆ ಮಾಡಲಾಗುತ್ತೆ.. ಅಂಥದ್ದೆಲ್ಲ ಡ್ರೋಣ್ ಬಳಸಿದ್ರೆ ಅಪೇಕ್ಷಿತ ಫಲಿತಾಂಶ ಬರೋದು ಸಾಧ್ಯವೇ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಹೀಗಾದಾಗ ರೈತರಿಗೆ ಮೋಸವಾದ್ರೇನು ಗತಿ? ಅನ್ನೋ ಆತಂಕವೂ ಇದ್ದೇ ಇದೆ..

ಈ ಆತಂಕ ನಿವಾರಣೆಗಾಗಿಯೂ ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ರೈತರು ಹಾಗೆ ಯಾವುದ್ಯಾವುದೋ ಡ್ರೋಣ್ ಬಳಸಲು ಸಾಧ್ಯವಿಲ್ಲ. ಬದಲಿಗೆ ಭಾರತದ ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಎವಿಏಷನ್ ಅವರಿಂದ ಅನುಮತಿ ಪಡೆದ ಡ್ರೋಣ್ ಮಾತ್ರ ಬಳಸಬಹುದು. ಕೇವಲ ಡ್ರೋಣ್ಗಳು ಮಾತ್ರವಲ್ಲ.. ಆ ಡ್ರೋಣ್ ಬಳಸಬಲ್ಲ ಪೈಲಟ್ ಗಳಿಗೂ ಡಿಜಿಸಿಎ ಅನುಮತಿ ಕಡ್ಡಾಯ. ಸದ್ಯ ಡಿಜಿಸಿಎ ನಾಲ್ಕು ರೀತಿಯ ಡ್ರೋಣ್ ಬಳಕೆಗೆ ಅನುಮತಿ ನೀಡುತ್ತಿದೆ. ಮೊದಲನೆಯಾದಗಿ ಕೇವಲ 250 ಗ್ರಾಂ ತೂಕ ಹೊರಬಲ್ಲ ನ್ಯಾನೋ ಡ್ರೋಣ್, 2 ಕೆಜಿ ತನಕ ತೂಕ ಹೊರಬಲ್ಲ ಮೈಕ್ರೋ, 2-25 ಕೇಜಿ ತೂಕ ಹೊರುವ ಸಾಮರ್ಥ್ಯವಿರುವ ಸ್ಮಾಲ್ ಡ್ರೋಣ್ಗಳನ್ನು ಬಳಸಲು ಅವಕಾಶವಿದೆ. ಸದ್ಯ ಭಾರತದಲ್ಲಿ 22 ರೆಜಿಸ್ಟರ್ಡ್ ಕಂಪನಿಗಳಿವೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚು ವಿಶ್ವಾಸ ಕೂಡ ಇದೆ. ಇನ್ನು ಇದರ ಜೊತೆಗೆ ಅಗ್ರಿ 01 ಅಂದ್ರೆ 2 ಕೆಜಿ ಕೆಟಗರಿ, ಅಗ್ರಿಬೋಡ್ ಯುಎವಿ 23 ಕೆಜಿ ಕೆಟಗರಿಯ ಡ್ರೋಣ್ಗಳನ್ನು ಮುಖ್ಯವಾಗಿ ಅಗ್ರಿಕಲ್ಚರ್​​ಗಾಗಿ ಬಳಸಲಾಗುತ್ತೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ಲಾನ್ ಹಾಕೊಳ್ಳುತ್ತಿದ್ದರೂ ಅದರ ಬಗ್ಗೆ ಹೆಚ್ಚಿನ ಅಧ್ಯಯನ ಹಾಗೂ ರೈತರೊಂದಿಗೆ ಚರ್ಚೆ ನಡೆಸಲೇಬೇಕಿದೆ. ಇಲ್ಲದಿದ್ದರೆ ಇಲ್ಲೂ ಕೇಂದ್ರದಿಂದ ಕಮ್ಯುನಿಕೇಷನ್ ಗ್ಯಾಪ್ ಆದ್ರೆ ಅನ್ನದಾತರ ತನಕ ಈ ಯೋಜನೆ ತಲುಪುವುದೇ ಕಷ್ಟ ಸಾಧ್ಯವಾಗುತ್ತೆ. ಹೀಗಾಗಿ, ಕೇಂದ್ರ ರೈತರೆಡೆಗೆ ಸಹಾಯ ಹಸ್ತ ಚಾಚುವುದರ ಜೊತೆಗೆ, ಬದಲಾವಣೆಯ ಕೇಂದ್ರ ಬಿಂದುವನ್ನಾಗಿ ಅನ್ನದಾತರನ್ನೇ ಮಾಡಿಕೊಳ್ಳಬೇಕಿದೆ..

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಮೀಡಿಯಾ

News First Live Kannada


Leave a Reply

Your email address will not be published. Required fields are marked *