ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ: ಹೋರಾಟ ನಿಲ್ಲದು ಎಂದು ರೈತ ಸಂಘಟನೆಗಳು | Farmers Protest to Continue As Planned Says Samyukt Kisan Morcha Leaders


ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ: ಹೋರಾಟ ನಿಲ್ಲದು ಎಂದು ರೈತ ಸಂಘಟನೆಗಳು

ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದರೂ ರೈತ ಸಂಘಟನೆಗಳು ತಮ್ಮ ಹೋರಾಟ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ. ಪಟ್ಟು ಸಡಿಲಿಸದ ರೈತ ಸಂಘಟನೆಗಳು ನ.22, 26 ಮತ್ತು 29ರಂದು ಈ ಮೊದಲು ಘೋಷಣೆಯಾಗಿದ್ದಂತೆಯೇ ಕಾರ್ಯಕ್ರಮಗಳು ನಡೆಯಲಿವೆ ಎಂದು ಘೋಷಿಸಿವೆ. ನ.22ರಂದು ರೈತ ಸಂಘಟನೆಗಳು ಲಖನೌದಲ್ಲಿ ಱಲಿ ನಡೆಸಲಿವೆ. ನ.26ರಂದು ರೈತರ ಹೋರಾಟ ಆರಂಭವಾಗಿ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತರ‌ ಹೋರಾಟದ ವಾರ್ಷಿಕೋತ್ಸವದ ಸಭೆಗಳು ನಡೆಯಲಿವೆ. ನ.29ರಂದು ದೆಹಲಿಯ ಸಂಸತ್ತಿಗೆ ರೈತರು ಟ್ರ್ಯಾಕ್ಟರ್ ಜಾಥಾ ನಡೆಸಲಿದ್ದಾರೆ ಎಂದು ರೈತ ಸಂಘಟನೆಗಳು ಘೋಷಿಸಿವೆ.

ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೂ ರೈತರ ಹೋರಾಟ ಮುಂದುವರಿಯಲಿದೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ನೀಡಬೇಕು. ಕೃಷಿ ವಿರೋಧಿಸಿ ನಡೆದ ಹೋರಾಟದಲ್ಲಿ ಹುತಾತ್ಮರಾದ ಮೃತ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿರುವ ಸಂಘಟನೆಗಳು ವಿದ್ಯುತ್ ಖಾಸಗೀಕರಣ, ಮಾಲಿನ್ಯಕ್ಕೆ ರೈತರ ಹೊಣೆಯಾಗಿಸುವ ಮಸೂದೆಗಳನ್ನೂ ಹಿಂಪಡೆಯಬೇಕು ಎಂದು ಒತ್ತಾಯಿಸಿದವು.

ಕೃಷಿಕಾಯ್ದೆ ವಿರೋಧಿ ಹೋರಾಡುತ್ತಿದ್ದ 40 ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ನಾಯಕರು ಹೋರಾಟದ ಮುಂದಿನ ರೂಪುರೇಷೆ ಚರ್ಚಿಸಲು ಶನಿವಾರ ಸಭೆ ನಡೆಸಿದರು. ಲಖನೌ ಮಹಾಪಂಚಾಯತ್ ಮತ್ತು ಟ್ರ್ಯಾಕ್ಟರ್ ಜಾಥಾವನ್ನು ಈ ಹಿಂದೆ ನಿಗದಿಯಾಗಿರುವಂತೆಯೇ ಮುಂದುವರಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.

ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ಭಾನುವಾರವೂ ನಡೆಯಲಿದೆ. ರೈತರ ಮೇಲೆ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಪರಿಹಾರ ಘೋಷಿಸುವ ವಿಚಾರವನ್ನು ಈ ಸಭೆಯಲ್ಲಿಯೂ ಚರ್ಚಿಸಲಾಗುವುದು ಎಂದು ಮೋರ್ಚಾದ ನಾಯಕ ಗುರ್ಣಾಮ್ ಸಿಂಗ್ ಚಾರುಣಿ ಹೇಳಿದ್ದಾರೆ.

ಇದನ್ನೂ ಓದಿ: ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ: ಮುಂದೇನು?
ಇದನ್ನೂ ಓದಿ: Farm Laws Timeline ಕೃಷಿ ಕಾನೂನು ಅಂಗೀಕಾರದಿಂದ ರದ್ದತಿ ನಿರ್ಧಾರವರೆಗೆ ಏನೆಲ್ಲಾ ನಡೆಯಿತು?

TV9 Kannada


Leave a Reply

Your email address will not be published. Required fields are marked *