ಕೃಷಿ ಕಾಯ್ದೆ ಮತ್ತೆ ತರಬಹುದು ಎಂದ ಬಿಜೆಪಿ ಸಂಸದ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್


1. ನಿನ್ನೆ ಸಂಜೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ತತ್ತರ


ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಪೀಣ್ಯ, 8ನೇ ಮೈಲಿ, ವಿದ್ಯಾರಣ್ಯಪುರಣ, ಯಲಹಂಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪೀಣ್ಯಾ, ಎಂಟನೇ ಮೈಲಿಯಲ್ಲಿ ಮುಖ್ಯ ರಸ್ತೆಗಳೇ ಜಲಾವೃತವಾಗಿದ್ದು. ಮೊಣಕಾಲು ಮಟ್ಟದವರೆಗೆ ನೀರು ರಸ್ತೆ ಮೇಲೆ ಬಂದಿತ್ತು. ಹೀಗಾಗಿ ಕೆಲ ತಾಸುಗಳ ಕಾಲ ವಾಹನ ಸವಾರರು ಕಿರಿ ಕಿರಿ ಅನುಭವಿಸಿದ್ರು. ಬೆಂಗಳೂರಿನ ವಿದ್ಯಾರಣ್ಯಪುರದ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ರು. ಅಲ್ಲದೆ ಕೆಲ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿ ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು.

2. ತುರ್ತು ಸಭೆ ಮಾಡಿ ಮಳೆ ಹಾನಿ ಬಗ್ಗೆ ಸಿಎಂ ಚರ್ಚೆ


ಸಿಎಂ ಬೊಮ್ಮಾಯಿ ತುರ್ತು ಸಭೆ ಮಾಡಿ ಮಳೆಯಿಂದ ಉಂಟಾಗಿರೋ ಹಾನಿ ಕುರಿತು ಸಂಪುಟದ ಸಚಿವರ ಜೊತೆ ಚರ್ಚಿಸಿದ್ದಾರೆ. ಜೊತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾತುಕತೆ ನಡೆಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಳೆಯಿಂದಾಗಿರೋ ಹಾನಿ ಬಗೆಗಿನ ಅಂಕಿ ಅಂಶಗಳನ್ನ ಸರ್ಕಾರ ನೀಡಿದೆ. ಇನ್ನು ಸಭೆಯಲ್ಲಿ ಮಳೆಯಿಂದಾಗಿರೋ ನಷ್ಟಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮಗಳನ್ನು ಘೋಷಿಸಲಾಗಿದೆ. ಜೊತೆಗೆ ಸಂಕಷ್ಟಕ್ಕೆ ಸಿಲುಕಿರೋ ರೈತರಿಗೆ ನೆರವು ನೀಡಲು ಸರ್ಕಾರ ಮುಂದಾಗಿದೆ.

3. ಮಳೆಗೆ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆ


ಕಳೆದ ಒಂದು ವಾರದಿಂದ ಆಂಧ್ರಪ್ರದೇಶದಲ್ಲಿ ವರುಣ ತನ್ನ ರೌದ್ರ ನರ್ತನ ತೋರಿಸ್ತಿದ್ದಾನೆ. ಭಾರೀ ಮಳೆಗೆ ತಿರುಪತಿ ತಿಮ್ಮಪ್ಪನ ನಾಡು ನಡುಗಡ್ಡೆಯಂತಾಗಿದೆ. ರಣ ಭೀಕರ ಮಳೆಗೆ ಆಂಧ್ರ ಪ್ರದೇಶದ ನದಿ ಹಳ್ಳ ಕೊಳ್ಳಗಳು ರೌದ್ರ ರೂಪ ಪಡೆದಿವೆ. ಸದ್ಯ ವರುಣಾರ್ಭಟಕ್ಕೆ ಆಂಧ್ರದ ಪ್ರಮುಖ ಹೆದ್ದಾರಿ ಹಾಗೂ ರೈಲು ಮಾರ್ಗಗಳ ಸಂಪರ್ಕವೇ ಕಡಿತಗೊಂಡಿದೆ. ಜಿಲ್ಲೆಯ ಪೆನ್ನಾ ನದಿ ಸೃಷ್ಟಿಸಿರುವ ನೆರೆಯಿಂದ ದಕ್ಷಿಣದಿಂದ ಪೂರ್ವಕ್ಕೆ ಸಂಪರ್ಕಿಸುವ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಇತ್ತ ಮಳೆ ಆರ್ಭಟದಲ್ಲಿ ಬಲಿಯಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಬರೊಬ್ಬರಿ 20 ಸಾವಿರ ಜನರನ್ನ ಕಾಳಜಿ ಕೇಂದ್ರಗಳಿಗೆ ರವಾನಿಸಲಾಗಿದೆ.

4. ‘ಕೃಷಿ ಕಾನೂನುಗಳ ರದ್ದು’, ನ.24ಕ್ಕೆ ಕೇಂದ್ರ ಸಂಪುಟ ಸಭೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ನವೆಂಬರ್ 24 ರಂದು ಮೂರು ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ತನ್ನ ಅನುಮೋದನೆ ನೀಡಲಿದೆ. ಇದಾದ ಬಳಿಕ ನವೆಂಬರ್ 29 ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದಲ್ಲಿ ಕಾನೂನನ್ನು ಹಿಂಪಡೆಯುವ ಸಾಂವಿಧಾನಿಕ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ಸಂಸದೀಯ ನಿಯಮಗಳ ಪ್ರಕಾರ, ಹಳೆಯ ಕಾನೂನನ್ನು ಹಿಂಪಡೆಯುವ ಪ್ರಕ್ರಿಯೆಯು ಹೊಸ ಕಾನೂನನ್ನು ಮಾಡುವಂತೆಯೇ ಇರಲಿದೆ.

5. ಕೃಷಿ ಕಾಯ್ದೆ ಮತ್ತೆ ತರಬಹುದು ಎಂದ ಬಿಜೆಪಿ ಸಂಸದ
ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಅಗತ್ಯವಾದರೆ ಕೃಷಿ ಕಾಯ್ದೆಗಳನ್ನು ಮತ್ತೆ ತರಬಹುದು ಎಂದಿದ್ದಾರೆ. ಉನ್ನಾವೊದಲ್ಲಿ ಈ ಬಗ್ಗೆ ಮಾತನಾಡಿದ ಸಾಕ್ಷಿ ಮಹಾರಾಜ್, ಮಸೂದೆಯನ್ನು ರೂಪಿಸಲಾಗುತ್ತದೆ ಹಾಗೂ ರದ್ದುಗೊಳಿಸಲಾಗುತ್ತದೆ. ಅವುಗಳು ಮತ್ತೆ ಬರಲಿವೆ ಅದು ಯಾವುದೇ ಸಂದರ್ಭದಲ್ಲಿ ನಡೆಯಬಹುದಾಗಿದೆ ಎಂದಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ವಿಶಾಲ ಹೃದಯಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಅಂತಾ ಸಂಸದ ಸಾಕ್ಷಿ ಮಹಾರಾಜ್​ ಹೇಳಿದ್ದಾರೆ.

6. ಬೂಸ್ಟರ್ ಡೋಸ್ ಅವಶ್ಯವಿಲ್ಲ ಎಂದ ಐಸಿಎಂಆರ್


ದೇಶದಲ್ಲೇನೋ ಕೊರೊನಾ ಹಾವಳಿ ಕಡಿಮೆಯಾಗಿದೆ. ಆದ್ರೆ, ಆಗಾಗ ರೂಪಾಂತರಿಗಳು ಎಂಟ್ರಿ ಕೊಟ್ಟು ಹೋಗ್ತಿವೆ. ಇದೇ ವೇಳೆ ಲಸಿಕೆ ಬೂಸ್ಟರ್‌ ಡೋಸ್‌ನ ಬಗ್ಗೆ ಚರ್ಚೆಯೂ ಆಗುತ್ತಿದೆ. ಆದ್ರೀಗ ಭಾರತಕ್ಕೆ ಬೂಸ್ಟರ್‌ ಡೋಸ್‌ ಬೇಡ ಅಂತಾ ಐಸಿಎಂಆರ್ ಹೇಳಿದೆ. ಎರಡು ಡೋಸ್‌ ಲಸಿಕೆ ಪಡೆದವರು, ಬೂಸ್ಟರ್‌ ಡೋಸ್‌ ಪಡೆದರೆ ಹೇಳಿಕೊಳ್ಳುವಂಥ ಪ್ರಯೋಜನವೇನೂ ಆಗುವುದಿಲ್ಲ ಎಂದು ಐಸಿಎಂಆರ್​​​ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎನ್ನಲಾಗಿದೆ.

7. ಯುರೋಪ್​​ನಲ್ಲಿ ಕೊರೊನಾ ಕೇಸ್​​ ಹೆಚ್ಚಳ
ಭಾರತದಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದರೂ ಕೂಡ, ಯುರೋಪಿನಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕು ಹೆಚ್ಚಳದಿಂದಾಗಿ ಹಲವು ಯುರೋಪಿಯನ್ ದೇಶಗಳು ನಿರ್ಬಂಧಗಳನ್ನು ಬಿಗಿಗೊಳಿಸಿವೆ. ಅತ್ತ ಆಸ್ಟ್ರಿಯಾ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಘೋಷಿಸಿದ್ದು, ನೆದರ್ಲ್ಯಾಂಡ್ಸ್ ಸಹ ಲಾಕ್‌ಡೌನ್ ಅನ್ನು ಜಾರಿಗೊಳಿಸಿದೆ. ಅಲ್ಲದೆ ನೆದರ್​ಲ್ಯಾಂಡ್ಸ್​ನಲ್ಲಿ ಲಸಿಕೆ ಪಡೆಯದ ವ್ಯಕ್ತಿಗಳ ಮೇಲೆ ಕೆಲ ನಿರ್ಬಂಧಗಳನ್ನು ಹಾಕಲು ಮಾತುಕತೆ ನಡೆಯುತ್ತಿದೆ. ಇದರಿಂದ ಅಸಮಾಧಾನಗೊಂಡ ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

8. ಕಳ್ಳತನ ಮಾಡಲೆಂದೇ ತೆಳ್ಳಗಾದ ಚಾಲಾಕಿ ಕಳ್ಳ
ಭೋಪಾನ್​​​ನಲ್ಲಿ ಕಳ್ಳತನ ಮಾಡುವ ಸಲುವಾಗಿ ವ್ಯಕ್ತಿಯೊಬ್ಬ ತೂಕ ಇಳಿಸಿಕೊಂಡು ಭಾರಿ ಸುದ್ದಿಯಾಗಿದ್ದಾನೆ. ಕಳ್ಳತನ ಮಾಡಲು ಮೊದಲೇ ಸ್ಕೆಚ್‌ ಹಾಕಿಕೊಂಡಿದ್ದ ವ್ಯಕ್ತಿ ಕಿಟಕಿ ಒಳಗಿನಿಂದ ನುಸುಳುವ ಸಲುವಾಗಿ ಸಣ್ಣವಾಗಲು ಬಯಸಿದ್ದ. ಅದರಂತೆ ವ್ಯಾಯಾಮ ಮಾಡಿ, ಅಂದುಕೊಂಡಷ್ಟು ತೆಳ್ಳಗಾಗಿದ್ದ. 10 ಕೆಜಿ ತೂಕ ಇಳಿಸಿಕೊಂಡ. ನಂತರ ಭೋಪಾಲ್​ ನಗರದ ಬಸಂತ್ ಬಹಾರ್ ಸೊಸೈಟಿಯಲ್ಲಿರುವ ಸಿಸಿಟಿವಿ ಕ್ಯಾಮರಾಗಳಿಗೆ ಕಾಣಿಸದಂತೆ ಒಳಕ್ಕೆ ನುಗ್ಗಿ 37 ಲಕ್ಷ ರೂಪಾಯಿ, ಚಿನ್ನಾಭರಣಗಳನ್ನು ಕದ್ದೊಯ್ದಿದ್ದ. ಆದರೆ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

9. ಇಂದು ಕರ್ನಾಟಕ-ತಮಿಳುನಾಡು ಮುಖಾಮುಖಿ
ದೇಶಿ ಕ್ರಿಕೆಟ್​ನ ಪ್ರತಿಷ್ಠಿತ ಮುಷ್ತಾಕ್ ಅಲಿ ಟಿ20 ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಇಂದಿನ ಫೈನಲ್​​ನಲ್ಲಿ ಕರ್ನಾಟಕ-ತಮಿಳುನಾಡು ಮುಖಾಮುಖಿಯಾಗ್ತಿದ್ದು, ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ಭಾರೀ ಕುತೂಹಲ ಮೂಡಿಸಿದೆ. ಅರುಣ್​​ ಜೇಟ್ಲಿ ಸ್ಟೇಡಿಯಂನಲ್ಲಿ ಪಂದ್ಯದಲ್ಲಿ ನಡೆಯಲಿದೆ. ಟೂರ್ನಿಯ ಇತಿಹಾಸದಲ್ಲಿ ಉಭಯ ತಂಡಗಳು ತಲಾ ಎರಡು ಬಾರಿ ಪ್ರಶಸ್ತಿ ಜಯಿಸಿವೆ.

10. ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ


ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. 73 ರನ್​ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದರಿಂದ ಪ್ರವಾಸಿ ನ್ಯೂಜಿಲೆಂಡ್​​ ವೈಟ್​​ವಾಷ್​ ಮುಖಭಂಗಕ್ಕೆ ಒಳಗಾಗಿದೆ. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಡೆದ ಮೊದಲ ಟಿ20 ಸರಣಿ ಇದಾಗಿದೆ. ನೂತನ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಈ ಸಾಧನೆ ಮಾಡಿದೆ.

News First Live Kannada


Leave a Reply

Your email address will not be published. Required fields are marked *