ಕೃಷಿ ಕಾಯ್ದೆ ವಾಪಸ್​ನಿಂದ ರಾಜ್ಯ ಬಿಜೆಪಿಗೆ ಎಫೆಕ್ಟ್; ‘ಕೈ’ಗೆ ಸಿಕ್ಕಿವೆ ಸಾಲು ಸಾಲು ಬ್ರಹ್ಮಾಸ್ತ್ರಗಳು


ಬೆಂಗಳೂರು: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಇಷ್ಟು ದಿನ ಬೀದಿಗಳಿದು ಪ್ರತಿಭಟಿಸಿದ್ದ ರೈತರಿಗೆ ಭಾರೀ ಜಯ ಸಿಕ್ಕಂತಾಗಿದೆ. ಆದ್ರೀಗ ಕೃಷಿ ಕಾಯ್ದೆ ವಾಪಸ್ ಪಡೆದಿರೋದು ರಾಜ್ಯ ಬಿಜೆಪಿಗೆ ವರವಾಗುವ ಬದಲು ಶಾಪವಾಗುವ ಲಕ್ಷಣ ಕಾಣುತ್ತಿವೆ. ಜೊತೆಗೆ ಕಾಂಗ್ರೆಸ್ ನಾಯಕರಿಗೂ ಮೇಲ್ಮನೆ ಕದನದಲ್ಲಿ ಬ್ರಹ್ಮಾಸ್ತ್ರವೊಂದು ಸಿಕ್ಕಂತಾಗಿದೆ.

ಕೃಷಿ ಕಾಯ್ದೆ ವಾಪಸ್​ನಿಂದ ರಾಜ್ಯ ಬಿಜೆಪಿಗೆ ಎಫೆಕ್ಟ್​​!
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿವಾದಾತ್ಮಕ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಆಗ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆಮಾಡಿದೆ. ಅದರಲ್ಲೂ ಅನ್ನದಾತರು ಯುದ್ಧವನ್ನೇ ಗೆದ್ದಂತಹ ರೀತಿ ಸಂಭ್ರಮಿಸುತ್ತಿದ್ದಾರೆ. ವಿವಾದಿತ ಮೂರೂ ಕಾಯ್ದೆಗಳನ್ನು ವಾಪಸ್ ಪಡೆದಿರೋದಾಗಿ ಖುದ್ದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಆದ್ರೀಗ ಕೃಷಿ ಕಾಯ್ದೆ ವಾಪಸ್​ ಪಡೆದಿರೋದು ರಾಜ್ಯ ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಮೇಲ್ಮನೆಯ ಚುನಾವಣೆಯಲ್ಲಿ ಬಿಜೆಪಿಗೆ ಎಫೆಕ್ಟ್ ಆಗುತ್ತಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿವೆ. ಅಲ್ಲದೇ ಇದನ್ನೇ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ.

ರಾಜ್ಯ ಬಿಜೆಪಿಗೆ ಬಿಸಿತುಪ್ಪ!
ಒಂದು ವರ್ಷದ ಬಳಿಕ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನ ಕೇಂದ್ರ ಸರ್ಕಾರ ವಾಪಸ್​ ಪಡೆದಿದೆ. ಆದ್ರೀಗ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಇದನ್ನೇ ಅಸ್ತ್ರವಾಗಿಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಬಿಟ್ ಕಾಯಿನ್ ಅಸ್ತ್ರದ ಜೊತೆಗೆ ಕೃಷಿ ಮಸೂದೆ ವಾಪಸ್ ಪಡೆದಿರೋದು ಕಾಂಗ್ರೆಸ್‌ ನಾಯಕರಿಗೆ ಬಲವಾದ ಅಸ್ತ್ರ ಸಿಕ್ಕಂತಾಗಿದೆ. ಹೇಗಂದ್ರೆ, ‘ನಮ್ಮಿಂದಲೇ ಇಂದು ಕೃಷಿ ಕಾಯ್ದೆಗಳನ್ನ ವಾಪಸ್ ಪಡೆದಿದ್ದಾರೆ’. ಅಲ್ಲದೇ ಪಂಚ ರಾಜ್ಯ ಚುನಾವಣೆಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ ಅಂತಾ ಪ್ರಚಾರ ಮಾಡಲು ರಾಜ್ಯ ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

 

ಅಲ್ಲದೇ ಬಿಜೆಪಿ ಸರ್ಕಾರ ರೈತ ವಿರೋಧಿ ಎಂದು ಪಟ್ಟ ಕಟ್ಟಲು ಕೈನಾಯಕರು ತಯಾರಿ ನಡೆಸಿದ್ದಾರಂತೆ. ಜೊತೆಗೆ ಈ ಒಂದು ವರ್ಷದಲ್ಲಿ ಆದಂತಹ ಸಾವು ನೋವುಗಳಿಗೆ ಪರಿಹಾರ ಕೊಡಿ ಅಂತಾಲೂ ಪಟ್ಟು ಹಿಡಿಯಲು ಹಸ್ತ ನಾಯಕರು ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಟಕ್ಕರ್ ಕೊಡೋಕೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಅಲ್ಲದೇ ಇಷ್ಟು ದಿನ ಇಲ್ಲದ ರೈತರ ಬಗೆಗಿನ ಕಾಳಜಿ ಕೇಂದ್ರ ಸರ್ಕಾರಕ್ಕೆ ಬಂದಿದ್ದೇಕೆ? ಯಾವ ಕಾರಣಕ್ಕೆ ಮೋದಿ ಕಾಯ್ದೆಗಳನ್ನ ವಾಪಸ್ ಪಡೆದ್ರು ಅಂತಾ ಮತದಾರರ ಮುಂದೆ ಬಿಚ್ಚಿಡಲು ಕಾಂಗ್ರೆಸ್ ನಾಯಕರು ಶಸ್ತ್ರಾಭ್ಯಾಸ ಮಾಡ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಮೋಸದ ಬುದ್ಧಿ ಬಿಡದ ಚೀನಾ.. ಸದ್ದಿಲ್ಲದೇ ಭಾರತದ ಗಡಿಯಲ್ಲಿ ಗ್ರಾಮಗಳ ನಿರ್ಮಾಣ..!

ಕೈ ಬತ್ತಳಿಕೆಗೆ ಕೃಷಿ ಅಸ್ತ್ರ!
ಪ್ರಚಾರ ಪ್ಲಾನ್​​​ 1 : ಬಿಜೆಪಿಗೆ ರೈತ ವಿರೋಧಿಯ ಪಟ್ಟ ಕಟ್ಟುವುದು
ಪ್ರಚಾರ ಪ್ಲಾನ್​​ 2 : ನಮ್ಮಿಂದಲೇ ಕೃಷಿ ಮಸೂದೆಯ ವಾಪಸ್
ಪ್ರಚಾರ ಪ್ಲಾನ್​​​ 3 : ಚುನಾವಣೆ​​​ ಭಯದಿಂದ ಕಾಯ್ದೆ ಹಿಂದಕ್ಕೆ
ಪ್ರಚಾರ ಪ್ಲಾನ್​​​ 4 : ಆಗಿರೋ ಅನಾಹುತಗಳಿಗೆ ಪರಿಹಾರ ನೀಡಿ
ಪ್ರಚಾರ ಪ್ಲಾನ್​​ 5 : ರೈತರ ಅಭಿವೃದ್ಧಿ ನಮ್ಮಿಂದ ಮಾತ್ರ ಸಾಧ್ಯ

ಚುನಾವಣೆಯ ಪ್ರಚಾರದ ವೇಳೆ ಬಿಜೆಪಿಗೆ ರೈತ ವಿರೋಧಿಯ ಪಟ್ಟವನ್ನ ಕಟ್ಟೋದು ಕಾಂಗ್ರೆಸ್‌ನ ಮೊದಲನೆಯ ಪ್ಲಾನ್ ಆಗಿದೆ. ಎರಡನೇಯದಾಗಿ ನಮ್ಮಿಂದಲೇ ಕೃಷಿ ಮಸೂದೆಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ ಅಂತಾ ತಿಳಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆಯಂತೆ. ಅಲ್ಲದೇ ಪಂಚರಾಜ್ಯ ಚುನಾವಣೆಗಳ​​​ ಭಯದಿಂದ ಈ ಕಾಯ್ದೆಗಳನ್ನ ಹಿಂದಕ್ಕೆ ಪಡೆದಿದ್ದಾರೆ ಅಂತಾ ಮತದಾರರಿಗೆ ತಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರೊಂದಿಗೆ.

ಕಾಯ್ದೆ ಜಾರಿಯಾದ ಬಳಿಕ ಆಗಿರೋ ಅನಾಹುತಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಅಂತಲೂ ಕಾಂಗ್ರೆಸ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಕೊನೆಯದಾಗಿ ದೇಶದಲ್ಲಿ ರೈತರ ಅಭಿವೃದ್ಧಿ ನಮ್ಮಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನ ರವಾನಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:1 ಗಂಟೆ 25 ನಿಮಿಷಗಳ ಕಾಲ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಮಲಾ ಹ್ಯಾರಿಸ್

ಒಟ್ಟಾರೆ ಅಸಲಿಗೆ ಇದು ರೈತರ ಹೋರಾಟಕ್ಕೆ ಸಿಕ್ಕ ಜಯವೋ.. ಇಲ್ಲಾ ಕೇಂದ್ರ ಸರ್ಕಾರ ಪಂಚರಾಜ್ಯ ಚುನಾವಣೆಗಾಗಿ ಮಾಡಿರೋ ರಾಜಕೀಯದ ತಂತ್ರವೋ.. ಆದ್ರೆ, ರೈತರ ತೀವ್ರ ವಿರೋಧ ಎದುರಿಸಿದ್ದ ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಆದ್ರೀಗ ಪರಿಷತ್ ಉಪಸಮರದ ವೇಳೆಯಲ್ಲಿ ರಾಜ್ಯ ಬಿಜೆಪಿಗೆ ಬಿಸಿತುಪ್ಪವಾಗುತ್ತಾ ಅನ್ನೋದೆ ಸದ್ಯದ ಪ್ರಶ್ನೆ.

ವಿಶೇಷ ವರದಿ: ಗಣಪತಿ, ನ್ಯೂಸ್‌ಫಸ್ಟ್, ಬೆಂಗಳೂರು

News First Live Kannada


Leave a Reply

Your email address will not be published. Required fields are marked *