ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ನ್ಯಾನೋ ಯೂರಿಯಾ ದಾಸ್ತಾ‌ನಿಗೆ ಹಸಿರು ನಿಶಾನೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ‌ಮೂಲಕ ಇಫ್ಕೋ ಕಂಪನಿ ಉತ್ಪಾದಿತ ನ್ಯಾನೋ ಯೂರಿಯಾ ದಾಸ್ತಾನಿಗೆ ಚಾಲನೆ ನೀಡಿದ್ದು, ಗುಜರಾತಿನ ಕಲೋಲ್ ಸ್ಥಾವರದಿಂದ ಇಂದು ಕರ್ನಾಟಕದತ್ತ ಯೂರಿಯಾ ದಾಸ್ತಾನಿನ ಮೊದಲ‌ ಕಂತು ಆಗಮನ ಆಗಲಿದೆ.

ನ್ಯಾನೋ ಯೂರಿಯಾ ದಾಸ್ತಾ‌ನಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಸಚಿವ ಸದಾನಂದ ಗೌಡ, ರಾಸಾಯನಿಕ ಗೊಬ್ಬರದಿಂದ ಫಲವತ್ತತೆ ಕಡಿಮೆಯಾಗುತ್ತಿದೆ. ಆಹಾರ ಉತ್ಪಾದನೆಗಾಗಿ ಅದು ಅವಶ್ಯಕ ಇತ್ತು. ಆದರೆ ಫಲವತ್ತತೆ ಕಡಿಮೆಯಾಗಿ ಫಸಲು ಕೂಡ ಕಡಿಮೆ. ಆದ್ದರಿಂದಲೇ ಮಣ್ಣಿನ ಆರೋಗ್ಯ ಕಾರ್ಡ್ ನೀಡಲಾಗಿದೆ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಲು ತೀರ್ಮಾನ ಮಾಡಲಾಗಿದ್ದು ಸಾವಯವ, ನೈಸರ್ಗಿಕ ಗೊಬ್ಬರ ಬಳಕೆಗೆ ನಿರ್ಧಾರ ಮಾಡಲಾಗಿದೆ ಎಂದರು.

ಯೂರಿಯಾ ಬೆಲೆ ₹420ಕ್ಕೆ ಏರಿಕೆಯಾಗಿದ್ದು, ಮುಚ್ಚಿದ್ದ ಐದು ಯೂರಿಯಾ ಪ್ಲಾಂಟ್‌ಗಳಿಂದ ಸದ್ಯ 12.7 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರೈತನಿಗೆ ಉತ್ಪಾದನೆ ಹೆಚ್ಚಳ ಆಗಬೇಕು. ಜೊತೆಗೆ ಉತ್ಪಾದನಾ ವೆಚ್ಚ ಕಡಿಮೆ ಆಗಬೇಕು. ಈ‌ ಕಾರಣದಿಂದ ನ್ಯಾನೋ ಫರ್ಟಿಲೈಸರ್ ಉತ್ಪಾದನೆ ಮಾಡಲು ಮುಂದಾಗಿದ್ದು, ರಾಜ್ಯದಲ್ಲೇ ಉತ್ಪಾದಿಸಲು ಘಟಕ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪೆಟ್ರೋಲ್ ದರ ಏರಿಕೆ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಪೆಟ್ರೋಲ್ ದರ ಅಂತರಾಷ್ಟ್ರೀಯ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಆದ್ದರಿಂದ ಜಿಎಸ್​​ಟಿ ವ್ಯಾಪ್ತಿಯಲ್ಲಿ ಇದನ್ನು ತಂದರೆ ಒಳ್ಳೆಯದು ಅನ್ನೋದು ನಮ್ಮ ಭಾವನೆ. ಆದರೆ ಜಿಎಸ್​​ಟಿ ಅಟೋನಮಸ್ ಬಾಡಿ ಆಗಿದ್ದು, ಎಲ್ಲಾ ಫೈನಾನ್ಸ್ ಮಿನಿಸ್ಟರ್ ಅಲ್ಲಿ ಇರ್ತಾರೆ. ಅಲ್ಲಿ ಇದರ ದರ ನಿಗದಿಯಾಗಲಿದೆ ಎಂದು ಹೇಳಿದರು.

The post ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ- ನ್ಯಾನೋ ಯೂರಿಯಾ ದಾಸ್ತಾ‌ನಿಗೆ ಹಸಿರು ನಿಶಾನೆ appeared first on News First Kannada.

Source: newsfirstlive.com

Source link