ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಾಗೂ ಒಮಿಕ್ರಾನ್ ವೈರಸ್ನ ಆತಂಕ ಹಿನ್ನೆಲೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ. ಇದ್ರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕಾಕರಣದ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ವರ್ಚುವಲ್ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ನ ಸಿಇಒಗಳು ಭಾಗಿಯಾಗಲಿದ್ದಾರೆ.
‘ಕೈ’ ಪಾದಯಾತ್ರೆ ಬಂದೋಬಸ್ತ್ಗಿದ್ದ ಪೊಲೀಸರಿಗೆ ಸೋಂಕು
ಮೇಕೆದಾಟು ಪಾದಯಾತ್ರೆಯ ವೇಳೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸರ ಪೈಕಿ ಮತ್ತೆ 27 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಮೂಲಕ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೋಂಕಿತರ ಸಂಖ್ಯೆ 90 ಕ್ಕೆ ಏರಿಕೆ ಆಗಿದೆ. ಮೊನ್ನೆಯವರೆಗೂ ಒಟ್ಟು 63 ಜನರಿಗೆ ಸೋಂಕು ದೃಡಪಟ್ಟಿತ್ತು. ಮತ್ತೆ ನಿನ್ನೆ ಜಿಲ್ಲೆಯ 27 ಜನ ಪೊಲೀಸರಿಗೆ ಸೋಂಕು ದೃಡಪಟ್ಟಿದೆ. ಕೋಲಾರ ಹಾಗೂ ಕೆಜಿಎಫ್ ಪೊಲೀಸ್ ವಿಭಾಗಗಳಿಂದ ಒಟ್ಟು 160 ಪೊಲೀಸರನ್ನು ಮೇಕೆದಾಟು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.
ಇಂದು ಜೆಡಿಎಸ್ ನಾಯಕರ ಸಭೆ
ಜೆಡಿಎಸ್ನ ‘ಜನತಾ ಜಲಧಾರೆ’ ಯಾತ್ರೆ ಬಗ್ಗೆ ದಳಪತಿಗಳು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.. ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಹಾಲಿ, ಮಾಜಿ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರ ಸಭೆ ನಡೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಪಕ್ಷ ಸಂಘಟನೆ, ಜನತಾ ಜಲಧಾರೆ ಯಾತ್ರೆ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ಜನವರಿ 26 ರಂದು ಯಾತ್ರೆಗೆ ಚಾಲನೆ ನೀಡಲು ನಡದಿದ್ದ ಸಿದ್ಧತೆಯನ್ನು ಕೊರೊನಾ ಕಾರಣ ಬದಲಾವಣೆ ಮಾಡಲಿದ್ದಾರೆ ಅಂತಾ ಜೆಡಿಎಸ್ ಮೂಲಗಳು ತಿಳಿಸಿವೆ.
ಕೃಷ್ಣನೂರಲ್ಲಿ ಪರ್ಯಾಯ ಮಹೋತ್ಸವದ ವೈಭವ
ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಉಡುಪಿ ಕೃಷ್ಣ ಮಠದ ಅತೀ ದೊಡ್ಡ ಹಬ್ಬ ಅಂದ್ರೆ ಅದುವೇ ಪರ್ಯಾಯ ಉತ್ಸವ. ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ನೋಡಲು, ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಿದ್ದರು, ಆದ್ರೆ ಈ ಬಾರಿ ಪರ್ಯಾಯ ಉತ್ಸವಕ್ಕೆ ಕೊರೊನಾ ಮಾರಿಯ ಕರಿ ನೆರಳು ಬಿದ್ದಿದೆ. ಆದ್ರೂ ಸಹ ಪರ್ಯಾಯಕ್ಕೆ ಭಕ್ತರ ಹೊರೆಕಾಣಿಕೆಗಳು ಬಂದಿದ್ದು, ಉಗ್ರಾಣದಲ್ಲಿ ಆಕರ್ಷಕವಾಗಿ ಜೋಡಿಸಿಡಲಾಗಿದೆ.. ದೀಪಾಲಂಕಾರದಿಂದ ಇಡೀ ನಗರವೇ ಎಲ್ಲರನ್ನೂ ಸೆಳೆಯುತ್ತಿದೆ.
ಕೈ-ತೆನೆಯಿಂದ ನಾರಾಯಣ ಗುರುಗಳ ಅಸ್ತ್ರ!
ಗಣರಾಜ್ಯೋತ್ಸವ ಪರೇಡ್ಗೆ ನಾರಾಯಣ ಗುರು ಸ್ತಬ್ದಚಿತ್ರ ಅನುಮತಿ ನಿರಾಕರಿಸಿದ ಕೇಂದ್ರದ ನಿರ್ಣಯಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.. ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್-ಜೆಡಿಎಸ್ ನಾಯಕರು ಟ್ವೀಟ್ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿ, ಅವಮಾನಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಹೊರಬಿತ್ತು ಪಂಚ ರಾಜ್ಯ ಚುನಾವಣಾ ಸಮೀಕ್ಷೆ
ದೇಶಾದ್ಯಂತ ಪಂಚ ರಾಜ್ಯಗಳ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಚುನಾವಣೆಗೆ ಮೂರೇ ಮೂರು ವಾರಗಳು ಬಾಕಿ ಇರುವಂತೆಯೇ ರಿಲೀಸ್ ಆಗಿರೋ ಸಮೀಕ್ಷೆಯ ಚುನಾವಣೆಯ ಅಖಾಡವನ್ನು ಮತ್ತಷ್ಟು ಬಿಸಿಯೇರಿಸಿದೆ. ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಿರೋ ಉತ್ತರಪ್ರದೇಶ ಹಾಗೂ ಪಂಜಾಬ್ನ ಸಮೀಕ್ಷೆ ವರದಿ ಹೊರಬಿದ್ದಿದೆ ಯುಪಿಯಲ್ಲಿ . ಬಿಜೆಪಿ 252-272 ಸೀಟು ಗೆದ್ರೆ. ಎಸ್ಪಿ 111-131 ಸ್ಥಾನ ಗೆಲ್ಲುತೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಇನ್ನು ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಈ ಬಾರಿ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿದೆ. ದೇವಭೂಮಿ ಉತ್ತರಾಖಂಡ್, ಗೋವಾ, ಮಣಿಪುರದಲ್ಲಿ ಈ ಬಾರಿ ಬಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.
ಹಿಮಾವೃತ ಪ್ರದೇಶದಲ್ಲಿ ಯೋಧರ ಗಸ್ತು
ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾಗ್ತಿದ್ದು ಹಲವು ಪ್ರದೇಶಗಳು ಹಿಮಾವೃತವಾಗಿವೆ. ದಟ್ಟ ಹಿಮ ಬಿದ್ದ ಪರಿಣಾಮ ಹಲವೆಡೆ ರಸ್ತೆಗಳು ಮುಚ್ಚಿಹೋಗಿದ್ದು, ಇದರ ನಡುವೆಯೇ ಭಾರತೀಯ ಯೋಧರು ಗಸ್ತು ನಡೆಸಿದ್ದಾರೆ. ಹಿಮಪಾತದಲ್ಲಿ ಯಾರಾದರೂ ಸಿಲುಕಿದ್ದಾರಾ ಅಂತಾ ಯೋಧರು ಪರಿಶೀಲನೆ ನಡೆಸುತ್ತಿದ್ದು, ಹಿಮಾವೃತವಾದ ಸ್ಥಳಗಳಲ್ಲಿ ತಂಡಗಳನ್ನ ಮಾಡಿಕೊಂಡು ಶೋಧಕಾರ್ಯ ನಡೆಸುತ್ತಿದ್ದಾರೆ.
ಭಾವಿ ಅಳಿಯನಿಗಾಗಿ ಸಿದ್ಧವಾಯ್ತು 365 ಬಗೆಯ ತಿನಿಸು!
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ತಮ್ಮ ಭಾವಿ ಅಳಿಯನಿಗೆ 365 ಬಗೆಯ ತಿಂಡಿಗಳನ್ನ ಮಾಡಿ ಬಡಿಸುವ ಮೂಲಕ ಆಂಧ್ರದ ಕುಟುಂಬವೊಂದು ಭಾರಿ ಸುದ್ದಿಗೆ ಕಾರಣವಾಗಿದೆ. ಸಂಕ್ರಾಂತಿ ಹಬ್ಬವನ್ನ ಎಲ್ಲ ಕಡೆ ವಿವಿಧ ಹೆಸರಿನಿಂದ ಆಚರಣೆ ಮಾಡಲಾಗುತ್ತೆ. ಆಂಧ್ರದಲ್ಲೂ ಸುಗ್ಗಿ ಸಂಭ್ರಮವನ್ನ ಸಖತ್ ಆಗಿ ಸೆಲೆಬ್ರೆಟ್ ಮಾಡಲಾಗುತ್ತೆ. ಈ ಹಿನ್ನೆಲೆ ತಮ್ಮ ಮನೆಯ ಭಾವಿ ಅಳಿಯನನ್ನ ಹಬ್ಬಕ್ಕೆ ಕರೆದ ಕುಟುಂಬವೊಂದು 365 ಬಗೆಯ ವಿವಿಧ ತಿಂಡಿ ತಿನಿಸುಗಳನ್ನ ಮಾಡಿ ಬಡಿಸಿದ್ದಾರೆ.
ಅಫ್ಘಾನ್ನಲ್ಲಿ ಭೂಕಂಪಕ್ಕೆ 26 ಜನರು ಬಲಿ
ತಾಲಿಬಾನಿಗಳ ಅಟ್ಟಹಾಸದಿಂದ ನಲುಗಿದ್ದ ಅಫ್ಘಾನಿಸ್ತಾನಕ್ಕೆ ಇದೀಗ ನಿಸರ್ಗವೂ ಶಾಕ್ ನೀಡಿದೆ. ಅಫ್ಘಾನ್ನ ಪಶ್ಚಿಮ ಪ್ರಾಂತ್ಯದ ಬದ್ಸ್ಗೀಸ್ನಲ್ಲಿ ಭೂಕಂಪ ಸಂಭವಿಸಿದ್ದು 26 ಮಂದಿ ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದ ಹಿಂದೂ ಕುಷ್ ಪರ್ವತ ಶ್ರೇಣಿಯಲ್ಲಿ ಆಗಾಗ ಭೂಂಕಪಗಳು ಉಂಟಾಗುತ್ತವೆ ಆದ್ರೆ ಈ ಬಾರಿ 5.6 ರಷ್ಟು ತೀವ್ರತೆಯಲ್ಲಿ ಭೂಕಂಪ ಉಂಟಾಗಿದೆ ಎನ್ನಲಾಗಿದೆ. ಇನ್ನು ಭೂಕಂಪದ ತೀವ್ರತೆಗೆ ಹಲವು ಮನೆಗಳು ಜಖಂಗೊಂಡಿದ್ದು, 26 ಮಂದಿ ಅಸುನೀಗಿದ್ದಾರೆ.. ಇನ್ನು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಧನುಷ್-ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಬ್ರೇಕ್!
ತಮಿಳು ಚಿತ್ರರಂಗದ ತಲೈವಾ ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಧನುಷ್ ವಿವಾಹ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಐಶ್ವರ್ಯಾ ಹಾಗೂ ಧನುಷ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, 18 ವರ್ಷದ ವೈವಾಹಿಕ ಜೀವನದಿಂದ ಹೊರಬರುತ್ತಿರೋದಾಗಿ ತಿಳಿಸಿದ್ದಾರೆ. ಇಷ್ಟು ವರ್ಷ ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದ ನಮ್ಮ ಸಂಬಂಧದಿಂದ ನಾವು ದೂರವಾಗಲು ಬಯಸಿದ್ದೇವೆ ಎಂದು ಬರೆದುಕೊಂಡಿರುವ ಅವರು, ಇದರಿಂದ ನಮ್ಮನ್ನು ವೈಯಕ್ತಿಕವಾಗಿ ಮತ್ತಷ್ಟು ಪ್ರೀತಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ. ಐಶ್ವರ್ಯಾ ಹಾಗೂ ಧನುಷ್ ವಿಚ್ಛೇದನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದು, ಇದು ಹೃದಯಕ್ಕೆ ನೋವುಂಟುಮಾಡುವ ವಿಷಯ ಅಂತಾ ಬೇಸರ ಹೊರಹಾಕಿದ್ದಾರೆ.