ಬೆಳಗಾವಿ/ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಕೆಳ ಹಂತದ ಆರು ಸೇತುವೆಗಳು ಮುಳುಗಡೆಯಾಗಿವೆ.

ಯಾವೆಲ್ಲಾ ಸೇತುವೆ ಮುಳುಗಡೆ?
ದೂಧಗಂಗಾ ನದಿಗೆ ನಿರ್ಮಿಸಿರುವ ಕಾರದಗಾ- ಭೋಜ ಗ್ರಾಮ ಸಂಪರ್ಕಿಸುವ ಸೇತುವೆ, ದೂಧಗಂಗಾ ನದಿಗೆ ನಿರ್ಮಿಸಿರುವ ಭೋಜವಾಡಿ ಕುನ್ನೂರ ಸಂಪರ್ಕಿಸುವ ಸೇತುವೆ ಮತ್ತು ಸಿದ್ನಾಳ- ಅಕ್ಕೋಳ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುನ್ನೂರ-ಬಾರವಾಡ ಸೇತುವೆ, ದುಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಲಿಕವಾಡ-ದತ್ತವಾಡ ಸೇತುವೆ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು ಕಲ್ಲೋಳ ಸೇತುವೆ ಕೂಡ ಮುಳುಗಡೆಯಾಗಿವೆ.

ದತ್ತ ಮಂದಿರ ಜಲಾವೃತ
ಕಲ್ಲೋಳ ಬಳಿ ಕೃಷ್ಣಾ ನದಿಗೆ ಮಹಾರಾಷ್ಟ್ರ ಮತ್ತು ದೂಧಗಂಗಾ ನದಿ ಒಳಹರಿವು 59 ಸಾವಿರ ಕ್ಯೂಸೇಕ್ ನೀರು ಇದೆ. ಇನ್ನು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮ ಬಳಿ ದತ್ತ ಮಂದಿರ ಜಲಾವೃತ ವಾಗಿದ್ದು, ಜನರಲ್ಲಿ ಮತ್ತೆ ಪ್ರವಾಹದ ಆತಂಕ ಹೆಚ್ಚಾಗಿದೆ.

ಹೊಲ ಗದ್ದೆಗಳಿಗೆ ನುಗ್ಗಿದ ನೀರು
ಅಲ್ಲದೇ ಕೃಷ್ಣಾ ನದಿಯ ನೀರು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಹರಿದು ಬರುತ್ತಿರುವ ಭಾರಿ ಪ್ರಮಾಣದ ನೀರು ಏರಿಕೆಯಾಗುತ್ತಿದೆ. ನದಿಯ ಒಡಲು ದಾಟಿ ಹೊಲಗದ್ದೆಗಳಿಗೆ ನುಗ್ಗುತ್ತಿರುವ ಕೃಷ್ಣಾ ನದಿ ನೀರು ನುಗ್ಗುತ್ತಿದೆ. ನದಿ ನೀರು ಹೊಲಗದ್ದೆಗಳಿಗೆ ನುಗ್ಗುತ್ತಿರುವುದರಿಂದ ರೈತರಲ್ಲೂ ಆತಂಕ ಹೆಚ್ಚಾಗಿದೆ.

ಬಾಗಲಕೋಟೆಯಲ್ಲೂ ಆತಂಕ
ಕೃಷ್ಣ ನದಿಯಲ್ಲಿ ನೀರು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲೂ ಆತಂಕ ಎದುರಾಗಿದೆ. ಕೃಷ್ಣಾ ನದಿಯ ಹಿಪ್ಪರಗಿ ಬ್ಯಾರೇಜ್ ಒಳ ಹರಿವು 1 ಲಕ್ಷ 32 ಸಾವಿರ ಕ್ಯೂಸೆಕ್ ಹಾಗೂ ಹೊರ ಹರಿವು 1 ಲಕ್ಷ 31 ಸಾವಿರ ಕ್ಯೂಸೆಕ್ ಇದೆ.

ಯುವಕರ ಹುಚ್ಚು ಸಾಹಸ
ಇನ್ನು ಕೃಷ್ಣಾ ಅಬ್ಬರಕ್ಕೆ ರೈತರೇ ಕಟ್ಟಿಸಿದ ಶ್ರಮಬಿಂದು ಸಾಗರ ಬ್ಯಾರೇಜ್ ಜಲಾವೃತಗೊಂಡಿದೆ. ಚಿಕ್ಕಪಡಸಲಗಿ ಗ್ರಾಮದ ಬಳಿ ಇರುವ ಬ್ಯಾರೇಜ್ ಇದಾಗಿದ್ದು, ಅಂದಾಜು 11 ಮೀಟರ್ ಎತ್ತರದ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದೆ. ಹೀಗಿದ್ದೂ ಕೆಲ ಯುವಕರು ಹುಚ್ಚು ಸಾಹಸಕ್ಕೆ ಮುಂದಾಗಿ ಸೆಲ್ಫಿಗೆ ಪೋಸ್​ ಕೊಡ್ತಿದ್ದಾರೆ.

The post ಕೃಷ್ಣಾನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ.. ಚಿಕ್ಕೋಡಿ, ನಿಪ್ಪಾಣಿಯಲ್ಲಿ 6 ಸೇತುವೆಗಳು ಮುಳುಗಡೆ appeared first on News First Kannada.

Source: newsfirstlive.com

Source link