‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು? | Thalapathy Vijay hosts party for Beast movie team including Pooja Hegde and Nelson Dilipkumar


‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?

‘ಬೀಸ್ಟ್’ ತಂಡ

ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ‘ಬೀಸ್ಟ್​’ (Beast Movie) ಚಿತ್ರಕ್ಕೆ ಸಾಧ್ಯವಾಗಿಲ್ಲ. ಸನ್​ ಪಿಕ್ಚರ್ಸ್​ ನಿರ್ಮಾಣ ಮಾಡಿದ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದರು. ‘ದಳಪತಿ’ ವಿಜಯ್​ (Thalapathy Vijay) ಅಭಿನಯದ ಸಿನಿಮಾ ಎಂಬ ಕಾರಣದಿಂದಲೂ ಇದು ಹೈಪ್​ ಪಡೆದುಕೊಂಡಿತ್ತು. ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ ಸಖತ್​ ಸೌಂಡು ಮಾಡಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ ಹಿನ್ನಡೆ ಆಯಿತು. ಅದಕ್ಕೆ ಕಾರಣ ಹಲವು. ‘ಕೆಜಿಎಫ್​: ಚಾಪ್ಟರ್​ 2’ (KGF: Chapter 2) ಎಂಬ ಸುನಾಮಿಯ ಎದುರಿನಲ್ಲಿ ರಿಲೀಸ್​ ಆಗಿದ್ದೇ ‘ಬೀಸ್ಟ್​’ ಚಿತ್ರದ ಹಿನ್ನಡೆಗೆ ಮುಖ್ಯ ಕಾರಣ ಎಂದರೆ ತಪ್ಪಿಲ್ಲ. ಅದೇನೇ ಇರಲಿ, ಈ ಕಹಿ ಅನುಭವವನ್ನು ಬದಿಗಿಟ್ಟು ಇಡೀ ‘ಬೀಸ್ಟ್​’ ತಂಡ ಈಗ ಪಾರ್ಟಿ ಮಾಡಿದೆ. ಅದು ಕೂಡ ದಳಪತಿ ವಿಜಯ್​ ಮನೆಯಲ್ಲಿ ಎಂಬುದು ವಿಶೇಷ. ಪಾರ್ಟಿ ಸಂದರ್ಭದ ಫೋಟೋ ವೈರಲ್​ ಆಗಿದೆ. ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರ ಕುರಿತು ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆ ಆಗುವುದಕ್ಕಿಂತ ಒಂದು ದಿನ ಮುಂಚೆ, ಅಂದರೆ ಏ.13ರಂದು ‘ಬೀಸ್ಟ್​’ ತೆರೆಕಂಡಿತು. ಮೊದಲ ಶೋ ನೋಡಿಬಂದ ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ನಾಯಕಿ ಪಾತ್ರಕ್ಕೆ ಮಹತ್ವ ಇಲ್ಲ, ಕಥೆಯಲ್ಲಿ ಲಾಜಿಕ್​ ಇಲ್ಲ, ಖಳ ನಾಯಕರ ಪಾತ್ರಗಳು ಬಲಿಷ್ಠವಾಗಿಲ್ಲ, ಕಾಮಿಡಿ ದೃಶ್ಯಗಳಿದ್ದರೂ ನಗು ಬರಲ್ಲ ಎಂಬಿತ್ಯಾದಿ ನೆಗೆಟಿವ್​ ವಿಮರ್ಶೆ ವ್ಯಕ್ತವಾಗಿದ್ದರಿಂದ ಈ ಸಿನಿಮಾಗೆ ನಿರೀಕ್ಷಿತ ಮಟ್ಟದ ಗೆಲುವು ಸಿಗಲಿಲ್ಲ. ಆದರೂ ಕೂಡ ದಳಪತಿ ವಿಜಯ್​ ಅವರು ತಮ್ಮ ತಂಡವನ್ನು ಬಿಟ್ಟುಕೊಟ್ಟಿಲ್ಲ. ಎಲ್ಲರನ್ನೂ ಕರೆದು ಔತಣ ನೀಡಿದ್ದಾರೆ.

ಈ ಪಾರ್ಟಿಯಲ್ಲಿ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​, ನಾಯಕಿ ಪೂಜಾ ಹೆಗ್ಡೆ, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​, ಸ್ಟೈಲಿಸ್ಟ್​ ಪಲ್ಲವಿ ಸೇರಿದಂತೆ ಅನೇಕರು ಭಾಗಿ ಆಗಿದ್ದಾರೆ. ‘ಈ ಪಾರ್ಟಿ ಆಯೋಜಿಸಿದ್ದಕ್ಕೆ ವಿಜಯ್​ ಸರ್​ಗೆ ಧನ್ಯವಾದಗಳು. ಇಡೀ ತಂಡದ ಜೊತೆ ಇದು ಸ್ಮರಣೀಯ ಸಮಯ ಆಗಿತ್ತು. ವಿಜಯ್​ ಅವರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ನಿಮ್ಮ ಜೊತೆ ಕೆಲಸ ಮಾಡಲು ಖುಷಿ ಆಗುತ್ತದೆ. ಈ ಕ್ಷಣವನ್ನು ನಾನು ಜೀವನವಿಡೀ ನೆನೆದು ಖುಷಿಪಡುತ್ತೇನೆ’ ಎಂದು ನೆಲ್ಸನ್​ ದಿಲೀಪ್​ ಕುಮಾರ್​ ಬರೆದುಕೊಂಡಿದ್ದಾರೆ.

ದಳಪತಿ ವಿಜಯ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಹಲವು ವರ್ಷಗಳಿಂದ ಅವರು ತಮ್ಮ ಚಾರ್ಮ್​ ಉಳಿಸಿಕೊಂಡು ಬಂದಿದ್ದಾರೆ. ‘ಬೀಸ್ಟ್​’ ಚಿತ್ರಕ್ಕೆ ನೆಗೆಟಿವ್​ ಪ್ರತಿಕ್ರಿಯೆ ಸಿಕ್ಕಿದ್ದರೂ ಕೂಡ ತಕ್ಕಮಟ್ಟಿನ ಕಲೆಕ್ಷನ್​ ಮಾಡಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ 230 ಕೋಟಿ ರೂ. ಕಮಾಯಿ​ ಆಗಿದೆ ಎಂದು ವರದಿ ಆಗಿದೆ. ಎರಡು ವಾರದ ಬಳಿಕ ಚಿತ್ರದ ಕಲೆಕ್ಷನ್​ ಗಣನೀಯವಾಗಿ ಕುಸಿದಿದೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಎದುರು ‘ಬೀಸ್ಟ್​’ ಸಂಪೂರ್ಣ ಮಂಕಾಗಿದೆ. ಸ್ವತಃ ತಮಿಳುನಾಡಿನ ಪ್ರೇಕ್ಷಕರು ಕೂಡ ‘ಬೀಸ್ಟ್​’ ಬದಲು ‘ಕೆಜಿಎಫ್​ 2’ ಚಿತ್ರಕ್ಕೆ ಹೆಚ್ಚು ಅಂಕ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *