ಕೊರೊನಾ ಹೇಗೆಲ್ಲ ಹರಡುತ್ತೆ ಅಂತ ಊಹಿಸಿಕೊಳ್ಳೋಕೇ ಕಷ್ಟ ಆಗ್ತಾ ಇದೆ. ಎಲ್ಲೂ ಹೋಗಿಯೇ ಇಲ್ಲ, ನನಗೆಲ್ಲಿಂದ ಸೋಂಕು ಬಂತು ಅಂತಾ ಅನೇಕರು ಯೋಚಿಸಿಯೂ ಇರಬಹುದು. ಕೊರೊನಾದ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡಿದಂತೆಲ್ಲ ಅದರ ಅಪಾಯದ ಬಗ್ಗೆ ಇನ್ನಷ್ಟು ವಿಚಾರಗಳು ಬೆಳಕಿಗೆ ಬರ್ತಾನೇ ಇವೆ.

ಅಬ್ಬಾ..ಈ ಕೊರೊನಾ ಸಂಕಷ್ಟ ಕಾಲ ಯಾವಾಗ ಮುಗಿಯುತ್ತೋ ಅಂತ ಕಾಯ್ತಾ ಇದ್ರೆ ಹೊಸ ಹೊಸ ವಿಚಾರಗಳು ಬಹಿರಂಗವಾಗ್ತಾನೇ ಇದೆ. ಕೊರೊನಾ ಇನ್ನೇನು ಕಡಿಮೆ ಆಯ್ತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಅಬ್ಬರಿಸುತ್ತೆ. ವಿಶ್ವದ ಮೂಲೆ ಮೂಲೆಗಳಲ್ಲೂ ಕೊರೊನಾ ಹರಡಿ ಬಿಟ್ಟಿದೆ. ಇದನ್ನು ಕಂಟ್ರೋಲ್ ಮಾಡೋದಕ್ಕೆ ಇನ್ನಿಲ್ಲದ ಸಾಹಸ ಮಾಡ್ತಾ ಇದ್ರೂ ಕೊರೊನಾ ಮಾತ್ರ ಹೊಸ ಹೊಸ ರೂಪದಲ್ಲಿ ಹರಡ್ತಾನೇ ಇದೆ. ರೂಪಾಂತರಿಯಾಗ್ತಾ ಆಗ್ತಾ ಮತ್ತಷ್ಟು ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಈಗಾಗಲೇ ಲಕ್ಷ ಲಕ್ಷ ಜನರು ಕೊರೊನಾಗೆ ಬಲಿಯಾಗಿ ಹೋಗಿದ್ದಾರೆ. ಈ ಕೊರೊನಾ ಹೇಗೆ ಹರಡ್ತಾ ಇದೆ ಅನ್ನೋ ಅಧ್ಯಯನ ಇನ್ನೂ ನಡೀತಾನೇ ಇದೆ. ಅಧ್ಯಯನ ನಡೆಸ್ತಾ ಹೋದಹಾಗೆಲ್ಲ ಕೊರೊನಾದ ಹೊಸ ಹೊಸ ವೇಷ ಅನಾವರಣವಾಗ್ತಾ ಇದೆ. ಇದೆಷ್ಟು ಭಯಂಕರ ಅನ್ನೋದು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸಾಬೀತಾಗ್ತಾನೇ ಇದೆ.

ಮೊದಲೆಲ್ಲ ಆರು ಅಡಿ ಅಂತರ ಕಾಯ್ದುಕೊಳುವ ನಿಯಮ
ಆಗ ಆರು ಅಡಿ ಅಲ್ಲ, 10 ಮೀಟರ್ ಅಂತರ ಇದ್ರೂ ಕಡಿಮೆ!

ಕೊರೊನಾ ಬಾರದ ಹಾಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ನಿಯಮ ಸಾಮಾನ್ಯವಾಗಿ ಜಾರಿಗೆ ತರಲಾಗಿದೆ. ಜನ ಕೂಡ ಈಗ ಮೊದಲಿನಷ್ಟು ಗುಂಪು ಗೂಡಲ್ಲ. ಸಾಕಷ್ಟು ಅಂತರ ಕಾಯ್ದುಕೊಂಡೇ ವ್ಯವಹರಿಸ್ತಾರೆ, ಮಾತನಾಡ್ತಾರೆ. ಮೊದಲೆಲ್ಲ ಪರಸ್ಪರ ಆರು ಅಡಿ ಅಂತರ ಕಾಯ್ದುಕೊಳ್ಳಿ ಅಂತ ಹೇಳ್ತಾ ಇದ್ರು. ಅದೇ ರೀತಿ ಎಲ್ಲಾ ಕಡೆ ನಿಯಮ ಪಾಲಿಸಲಾಗ್ತಾ ಇತ್ತು. ಸಾರ್ವಜನಿಕ ಸ್ಥಳದಲ್ಲಿ ಎಲ್ಲೇ ಕ್ಯೂ ನಿಂತ್ರೂ, ಎಲ್ಲೇ ಕುಳಿತ್ರು ಆರು ಅಡಿ ಇರುವಂತೆ ನೋಡಿಕೊಳ್ಳಬೇಕು ಅಂತ ಮಾರ್ಗಸೂಚಿ ಬಂದಿತ್ತು. ಆದ್ರೆ ಈಗ ಆರು ಅಡಿ ಅಲ್ಲ 10 ಮೀಟರ್ ಅಂತ ಕಾಯ್ದುಕೊಂಡರೂ ಕಡಿಮೇನೇ ಅನ್ನೋ ಪರಿಸ್ಥಿತಿ ಬಂದು ಬಿಟ್ಟಿದೆ. ಕೊರೊನಾ ಹರಡುವಿಕೆಯ ವೇಗ ಹೆಚ್ಚಾಗ್ತಿದ್ದಂತೆ, ಇದರ ತೀವ್ರತೆಯೂ ಹೆಚ್ಚಾಗ್ತಾ ಇರೋದ್ರಿಂದ  ಅಧ್ಯಯನ, ಸಂಶೋಧನೆಗಳು ಮುಂದುವರೆದಿದ್ದವು. ಕೊರೊನಾ ವ್ಯಾಪಕತೆಯ ಬಗ್ಗೆ ಸಂಶೋಧನೆ ಮಾಡ್ತಾ ಹೋದಹಾಗೆ ಹೊಸ ಹೊಸ ವಿಚಾರಗಳು ಬಹಿರಂಗವಾಗತೊಡಗಿದವು. ಈಗ ಅಂತಾದ್ದೇ ಮತ್ತೊಂದು ವಿಷಯ ಹೊರಬಿದ್ದಿದೆ.

10 ಮೀಟರ್ ದೂರದವರೆಗೂ ತೇಲಿ ಬರುತ್ತಂತೆ ಕೊರೊನಾ
ಸೀನಿದಾಗ, ಕೆಮ್ಮುವಾಗ ಬರುವ ಕಣಗಳು ಸಾಗಿ ಬರುತ್ತವಂತೆ
ಹನಿಗಳು ದೂರಕ್ಕೆ ಸಾಗಿ ಇನ್ನೊಬ್ಬರೊಳಗೆ ಪ್ರವೇಶಿಸುತ್ತವಾ?

ಅಂಗಡಿಗೆ ಹೋದ್ರೆ , ಮಾರ್ಕೆಟ್​ಗೆ ಹೋದ್ರೆ ಸಾಮಾಜಿಕ ಅಂತರವೇ ಇರ್ತಾ ಇರಲಿಲ್ಲ. ಇನ್ನು 10 ಮೀಟರ್ ಅಂತರ ಕಾಯ್ದುಕೊಂಡಿದ್ದು ಇಲ್ಲವೇ ಇಲ್ಲ. ಅಲ್ಲೋ ಇಲ್ಲೋ ಆರು ಅಡಿಯಷ್ಟು ಅಂತರ ಕಾಯ್ದುಕೊಂಡು ವ್ಯವಹಾರ ನಡೆಸ್ತಾ ಇದ್ರು ಜನ. ಆದ್ರೆ ಕೊರೊನಾ ವೈರಸ್ ಇಷ್ಟು ಹತ್ತಿರ ನಿಂತು ಡ್ರೆ ಬಿಡಲ್ಲ ಅಂತಿದಾರೆ ತಜ್ಞರು. ಕೊರೊನಾ ಸೋಂಕಿತರು ಸೀನಿದಾಗ, ಕೆಮ್ಮಿದಾಗ, ಉಸಿರು ಬಿಟ್ಟಾಗ ಬಾಯಿ ಅಥವಾ ಮೂಗಿನಿಂದ ಬರುವ ಹನಿಗಳು ಸಾಮಾನ್ಯವಾಗಿ ಎರಡು ಮೀಟರ್ ನಷ್ಟು ದೂರ ಚಿಮ್ಮಬಹುದು. ಆದ್ರೆ ಅದೇ ಹನಿಗಳು ಸಣ್ಣ ಸಣ್ಣ ಕಣಗಳು ಗಾಳಿಯಲ್ಲಿ ಹತ್ತು ಮೀಟರ್ ಗಳವರೆಗೂ ಸಾಗಬಹುದು ಅಂತಿವೆ ಅಧ್ಯಯನ ವರದಿ. ಹೀಗಾಗಿಯೇ ಕೊರೊನಾ ನಿಯಂತ್ರಣ ಮಾಡಬೇಕು ಅಂದ್ರೆ ಹೆಚ್ಚು ಅಂತರ ಕಾಯ್ದುಕೊಳ್ಳೋದು, ಎಲ್ಲೇ ಇದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಅಂತ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದಲೇ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಎಲ್ಲೂ ಹೋಗೇ ಇಲ್ಲ, ಆದ್ರೂ ಕೊರೊನಾ ಬರೋದು ಹೇಗೆ?
ಸೋಂಕಿತರ ಸಂಪರ್ಕವೇ ಇಲ್ಲದಿದ್ರೂ ಹೇಗೆ ಹರಡಿಬಿಡುತ್ತೆ?
ಗಾಳಿಯಲ್ಲಿ ತೇಲಿ ಬಂದು ಅರಿವಿಗೆ ಬರದಂತೆ ಎಂಟ್ರಿಯಾಗುತ್ತಾ?

ಕೊರೊನಾ ಎರಡನೇ ಅಲೆ ಶಾಕ್ ಕೊಟ್ಟ ಮೇಲೆ ಜನರಲ್ಲಿ ಭಯ ಬಂದಿದೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸೋದು ಹೆಚ್ಚಾಗಿ ಕಾಣಿಸ್ತಾ ಇದೆ. ಇಷ್ಟಾದರೂ ಕೆಲವರಿಗೆ ಹಲವು ರೀತಿಯ ಅನುಮಾನಗಳು ಶುರುವಾಗಿವೆ. ಕಾರಣ ಎಲ್ಲೂ ಹೋಗದೇ ಇದ್ದವರಿಗೂ, ಮನೆಯಿಂದ ಆಚೆ ಕಾಲಿಡದೇ ಇದ್ದವರಿಗೂ ಕೊರೊನಾ ಬಂದಿದೆ. ಎಲ್ಲಾ ನಿಯಮ ಪಾಲಿಸಿದ್ರೂ ಬಂದು ಬಿಟ್ಟಿದೆ.

ಅದು ಹೇಗೆ ಅಂದ್ರೆ ಗಾಳಿಯಲ್ಲೇ ತೇಲಿ ಬರುವ ಕಣ್ಣಿಗೆ ಕಾಣದ ಹನಿಗಳು ನಮ್ಮ ಅರಿವಿಗೆ ಬಾರದಂತೆ ಎಂಟ್ರಿಕೊಟ್ಟು ಬಿಡಬಹುದು. ಕೊರೊನಾ ಸೋಂಕಿತ ವ್ಯಕ್ತಿ ಸೀನಿದಾಗ, ಅಲ್ಲೆಲ್ಲೋ ಕೆಮ್ಮಿದಾಗ ಬರುವ ಹನಿಗಳು ಗಾಳಿಯಲ್ಲಿ 10 ಮೀಟರ್ವರೆಗೂ ತೇಲಿ ಬಂದಾಗ ಅದೇ ಸಮಯದಲ್ಲಿ ನೀವು ಮಾಸ್ಕ್ ಧರಿಸದೇ ಇದ್ದಾಗ ಅದು ಮೂಗಿನೊಳಗೆ ಹೊಕ್ಕಿ ಬಿಡಬಹುದು. ಆಗ ಎಲ್ಲೂ ಹೋಗೇ ಇಲ್ಲ, ಯಾರತ್ರಾನೂ ಮಾತಾಡಿಯೇ ಇಲ್ಲ ಆದರೂ ಬಂತಲ್ಲ ಅಂದುಕೊಂಡ್ರೆ ಅದು ನಿಮ್ಮ ತಪ್ಪು. ಎಲ್ಲೋ ಒಂದು ಕಡೆ ಎಚ್ಚರ ತಪ್ಪಿರೋದು ಗೊತ್ತಿರೋದೇ ಇಲ್ಲ.

ಹಾಗಾದ್ರೆ ಗಾಳಿಯಲ್ಲಿ ತೇಲಿ ಬರುವ ಸಣ್ಣ ಸಣ್ಣ ಕಣಗಳ ಮೂಲಕ ಎಂಟ್ರಿ ಕೊಡುವ ಕೊರೊನಾಗೆ ಹೇಗೆ ಗೇಟ್ ಹಾಕಬೇಕು ಅಂತ ನೀವು ಕೇಳಿದ್ರೆ ಅದಕ್ಕೆ ಇರೋ ಒಂದೇ ಉಪಾಯ ಸದಾ ಮಾಸ್ಕ್ ಧರಿಸಿರಬೇಕು. ಮನೆಯಲ್ಲೂ ಮಾಸ್ಕ್ ಧರಿಸೋದು ಕೂಡ ಒಳಿತು. ಹೊರಗೆ ಹೋಗಿ ಬಂದವರ ಜೊತೆ ಮಾತನಾಡುವಾಗ ಅಥವಾ ಅವರಿಗೆ ಲಕ್ಷಣವಿಲ್ಲದ ಕೊರೊನಾ ಬಂದಿದ್ದರೆ ಅಂಥವರ ಉಸಿರಾಟ, ಕೆಮ್ಮಿನಿಂದಾಗಿ ಅದು ನಿಮಗೂ ಹರಡಬಹುದು. ಹೀಗಾಗಿ ಮನೆಯಲ್ಲಿರಲಿ, ಹೊರಗಿರಲಿ, ಎಲ್ಲೇ ಹೋಗಲಿ ಮಾಸ್ಕ್ ಮಾತ್ರ ಮರೆಯಬಾರದು. ಕೆಲವರು ಮೂಗಿನ ಕೆಳಗೆ ಬಾಯಿ ಮಾತ್ರ ಮುಚ್ಚುವಂತೆ ಮಾಸ್ಕ್ ಧರಿಸಿರುತ್ತಾರೆ. ಆದ್ರೆ ಇದರಿಂದ ಪ್ರಯೋಜನವಾಗಲ್ಲ. ಮೂಗು ಮುಚ್ಚುವಂತೆ ಮಾಸ್ಕ್ ಯಾವಾಗಲೂ ಧರಿಸಿದ್ರೆ ಮಾತ್ರ ಸೇಫ್.

ಒಳಾಂಗಣದಲ್ಲಿ ಅಪಾಯ ಹೆಚ್ಚು, ಹೊರಗೆ ಕಡಿಮೆ ಅನ್ನೋದು ತಪ್ಪು
ಎಲ್ಲೇ ಇದ್ದರೂ ಗಾಳಿಯಲ್ಲಿ ತೇಲಿ ಬರುವ ಕಣಕ್ಕೆ ತಡೆ ಬೀಳೋದೇಗೆ?

ಹಿಂದೆ ಒಳಾಂಗಣದಲ್ಲಿ ಕೊರೊನಾ ಅಪಾಯ ಹೆಚ್ಚು ಅಂತ ಹೇಳಲಾಗ್ತಾ ಇತ್ತು. ಕೊಠಡಿ, ಸಭಾಂಗಣದಲ್ಲಿ ಒಂದಿಷ್ಟು ಜನ ಸೇರಿದರೆ ಅಲ್ಲಿ ಗಾಳಿ ಓಡಾಡದೇ ಪರಸ್ಪರ ಉಸಿರು ವಿನಿಮಯ ಆಗೋ ಸಾಧ್ಯತ ಇರೋದ್ರಿಂದ ಸುಲಭವಾಗಿ ಹರಡುತ್ತೆ ಅಂತ ಹೇಳಲಾಗ್ತಾ ಇತ್ತು. ಇನ್ನು ಹಾಲ್ ನಲ್ಲಿ ಗಾಳಿಯ ದಿಕ್ಕು ಕೂಡ ಒಂದೇ ಕಡೆ ಆಗಿರೋದ್ರಿಂದ ಇಂತಹ ಸ್ಥಳಗಳಲ್ಲಿ ಕೊರೊನಾ ವೈರಸ್ ಹರಡೋ ಪ್ರಮಾಣ ಹೆಚ್ಚು ಅಂತಾನೇ ವಿಶ್ಲೇಷಿಸಲಾಗ್ತಾ ಇತ್ತು. ಆದ್ರೆ ಈಗ ಇದೆಲ್ಲ ಸುಳ್ಳಾಗಿದೆ. ಒಳಾಂಗಣದಲ್ಲಿರಲಿ, ಹೊರಾಂಗಣದಲ್ಲಿರಲಿ ಗಾಳಿಯಲ್ಲಿ ತೇಲಿ ಬರುವ ಸಣ್ಣ ಸಣ್ಣ ಹನಿಗಳಿಗೆ ಕಡಿವಾಣ ಬೀಳಲ್ಲ. ಹೊರಾಂಗಣದಲ್ಲಿ ಮತ್ತಷ್ಟು ವೇಗವಾಗಿ ಹರಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಒಳಾಂಗಣದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಮಾತನಾಡಿದ್ರೆ ಸೇಫ್ ಅಲ್ಲ ಅಂತ ಬಯಲಿನಲ್ಲಿ ಕುರ್ಚಿ ಹಾಕಿ ಕುಳಿತುಕೊಂಡ್ರೂ ಗಾಳಿಯಲ್ಲಿ ತೇಲಿ ಬರುವ ಕಣಗಳಿಗೆ ಕಡಿವಾಣ ಬೀಳಲ್ಲ. ಹೀಗಾಗಿ ಎಲ್ಲೇ ಇದ್ದರೂ ನಮ್ಮ ಮುನ್ನೆಚ್ಚರಿಕೆಯಲ್ಲಿ ನಾವು ಇರಲೇಬೇಕು. ಮಾಸ್ಕ್ ಮರೆತು ದೂರವೇ ಇದ್ದೇವೆ ಅಂತ ಅಂದುಕೊಂಡಿದ್ರೆ ಗಾಳಿಯಲ್ಲಿ ತೇಲಿಬರುವ ಸಣ್ಣ ಸಣ್ಣ ಹನಿಗಳು ವೈರಸ್ ಹೊತ್ತು ತಂದು ನಿಮ್ಮೊಳಗೆ ಸೇರಿಸಬಹುದು.

ಮುಖಾಮುಖಿ ಮಾತನಾಡುವಾಗ ಹೆಚ್ಚು ಎಚ್ಚರಿಕೆ ಬೇಕೇ ಬೇಕು
ಸೀನಿದಾಗ, ಕೆಮ್ಮಿದಾಗಲಂತೂ ಹೆಚ್ಚು ಅಂತರ ಇದ್ದರೇನೇ ಸೇಫ್

ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಹೊರಡಿಸಿದ ಪ್ರಕಟಣೆಯಲ್ಲಿ 10 ಮೀಟರ್ ದೂರದವರೆಗೂ ಸಣ್ಣ ಸಣ್ಣ ಹನಿಗಳು ತೇಲಿ ಬರಬಹದು ಅಂತ ಉಲ್ಲೇಖಿಸಲಾಗಿದೆ. ಅಂದ್ರೆ ಕೆಮ್ಮುವಾಗ, ಸೀನಿದಾಗಲಂತೂ ಅಂತರ ಹೆಚ್ಚಿದ್ದಷ್ಟೂ ಸೇಫ್. ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿಗೆ ರೋಗದ ಲಕ್ಷಣಗಳು ಇಲ್ಲದಿದ್ದರೂ ಅವರಿಂದ ವೈರಸ್‌ ಹರಡಬಹುದು. ಮುಖ್ಯವಾಗಿ ಬಾಯಿಯಿಂದ ಹೊರಬೀಳುವ ಲಾಲಾರಸ ಮತ್ತು ಮೂಗಿನಿಂದ ಹೊರಬೀಳುವ ಹನಿಗಳಿಂದ ಸೋಂಕು ಹರಡುವ ಪ್ರಾಥಮಿಕ ಸಾಧ್ಯತೆಯಾಗಿದೆ. ಉಸಿರು ಹೊರಬಿಡುವಾಗ, ಮಾತನಾಡುವಾಗ, ಕೂಗುವಾಗ, ಹಾಡುವಾಗ, ನಗುವಾಗ, ಕೆಮ್ಮವಾಗ ಹಾಗೂ ಸೀನುವಾಗ ವೈರಸ್ ಹೊತ್ತ ಹನಿಗಳು ಚಿಮ್ಮುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಏನೇ ಚಟವಟಿಕೆ ನಡೆಸಬೇಕಾದರೂ ಗರಿಷ್ಠ ಎಚ್ಚರಿಕೆ ವಹಿಸಲೇಬೇಕು. ಕೆಮ್ಮಿದಾಗ, ಸೀನಿದಾಗ ಹೊರಗೆ ಬರುವ ಹನಿಗಳು ಸೆಕೆಂಡುಗಳಷ್ಟು ಕಾಲ ಮಾತ್ರ ತೇಲುತ್ತಿರಬಹುದು. ಆದ್ರೆ ಅಷ್ಟೇ ಸೆಕೆಂಡುಗಳಲ್ಲಿ ನೀವು ಎದುರಾದರೆ ವೈರಸ್ ಎಂಟ್ರಿಗೆ ಅಷ್ಟೇ ಸಾಕು.

ಆಸ್ಪತ್ರೆಗಳಿಗೆ ಹೋದಾಗ ಗರಿಷ್ಠ ಮಟ್ಟದ ಎಚ್ಚರಿಕೆ ಇರಬೇಕು
ನಿಮ್ಮ ಮಧ್ಯೆಯೇ ಲಕ್ಷಣವಿಲ್ಲದ ಸೋಂಕಿತರು ಕುಳಿತಿರಬಹುದು
ಅಂತರ ಕಾಯ್ದುಕೊಳ್ಳದಿದ್ರೆ ನಿಮಗೆ ಹರಡಲು ಅಷ್ಟೇ ಕಾರಣ ಸಾಕು

ಕೊರೊನಾ ಅಂತಲ್ಲ. ಬೇರೆ ಅನಾರೋಗ್ಯದ ಸಮಸ್ಯೆಗಳಿಂದ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲೂ ಹೆಚ್ಚಿನ ಎಚ್ಚರಿಕೆ ಬೇಕು. ಅಲ್ಲಿ ಸೋಂಕಿತರೂ ಇರಬಹುದು. ಅಥವಾ ಲಕ್ಷಣವಿಲ್ಲದೆ ಇರೋರು ನಿಮ್ಮ ಪಕ್ಕದಲ್ಲೇ ಕುಳಿತಿರಬಹುದು. ಒಳಾಂಗಣದಲ್ಲಾದರೂ ನಿಮಗೆ ವೈರಸ್ ಹರಡಲು ಅಷ್ಟೇ ಸಾಕು. ಇನ್ನು ನಿಮ್ಮವರೇ ಯಾರಾದರೂ ಸೋಂಕಿತರು ಅಡ್ಮಿಟ್ ಆಗಿದ್ರೆ ಅವರನ್ನು ನೋಡಲು ಹೋದಾಗಲೂ ಸಾಕಷ್ಟು ದೂರ ಇರೋದೇ ಒಳಿತು. ಅನಗತ್ಯವಾಗಿ ಹತ್ತಿರ ಹೋಗಿ ಆರೋಗ್ಯ ವಿಚಾರಿಸೋದು, ಆಸ್ಪತ್ರೆ ಹೊರಗೆ ನಿಂತು ಎಚ್ಚರಿಕೆ ಇಲ್ಲದೆ ಕುಳಿತುಕೊಳ್ಳವುದು ಕೂಡ ಅಪಾಯ ತರಬಲ್ಲದು. ಅನಿವಾರ್ಯ ಸಂದರ್ಭ ಬಿಟ್ಟರೆ ರೋಗಿಗಳು ಹೆಚ್ಚಾಗಿ ಬರುವ ಕ್ಲಿನಿಕ್, ಹಾಸ್ಟಿಟಲ್, ಟೆಸ್ಟಿಂಗ್ ಸೆಂಟರ್ ಗಳಿಂದ ದೂರವೇ ಇರಿ. ಅಗತ್ಯ ಇದ್ದಾಗ, ಅನಿವಾರ್ಯ ಇದ್ದಾಗ ಮಾತ್ರವೇ ಹೋಗಬೇಕು. ಸಣ್ಣ ಪುಟ್ಟ ಸಮಸ್ಯೆಗಳಿದ್ರೆ ಎಲ್ಲಾ ಕಡೆ ಕೊರೊನಾ ಕಂಟ್ರೋಲ್ ಆದ ಮೇಲೆಯೇ ಹೋಗೋದು ಉತ್ತಮ.

ಮನೆಯವ್ರೇ ಆಗಿದ್ರೂ ದೂರ ದೂರ ಕುಳಿತುಕೊಂಡರೆ ಉತ್ತಮ
ಮನೆಯಲ್ಲೇ ಇದ್ದರೂ ಆದಷ್ಟು ಅಂತರ ಕಾಯ್ದುಕೊಂಡ್ರೆ ಒಳಿತು

ನಮ್ಮ ಮನೆಯವರೇ ಆಗಿದ್ದರೂ ಅವರಿಂದ ಸ್ವಲ್ಪ ದಿನ ಅಂತರ ಕಾಯ್ದುಕೊಳ್ಳುವುದು ಉತ್ತಮ. ಮನೆಯಿಂದ ಹೊರಗೆ ಹೋಗಿ ಬಂದವರಿಂದ ಹೆಚ್ಚು ಅಂತರ ಕಾಯ್ದುಕೊಳ್ಳಬೇಕು. ಅವರು ಸ್ನಾನ ಮಾಡಿ ಶುಚಿಯಾಗಿ ಬಂದ ಮೇಲೆ ಅವರ ಜೊತೆ ಮಾತನಾಡುವುದು ಸೂಕ್ತ. ಎಲ್ಲಿಗೂ ಹೋಗದೇ ಮನೆಯಲ್ಲೇ ಇದ್ದರೂ ಕೂಡ ಈ ಕೊರೊನಾ ಕಾಲದಲ್ಲಿ ಅಂತರ ಕಾಯ್ದುಕೊಂಡ್ರೆ ಒಳಿತು. ದೂರದಿಂದಲೇ ಮಾತನಾಡುವುದರಿಂದ ಯಾರಿಗೂ ತೊಂದರೆ ಆಗಲ್ಲ. ಆದರೆ ಹೆಚ್ಚಿನ ಜನ ಮುಜುಗರವಾಗುತ್ತೆ ಅಂತ ಹತ್ತಿರ ಬಂದು ಮಾತನಾಡ್ತಾ ಇರ್ತಾರೆ. ಆದರೆ ಈ ಕೊರೊನಾ ಕಾಲದಲ್ಲಿ ಮುಜುಗರ ಪಟ್ಟುಕೊಂಡ್ರೆ ನಿಮ್ಮ ಆರೋಗ್ಯ ಮಗುಚಿ ಬೀಳಬಹುದು ಎಚ್ಚರ.

ಈ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ತೆಗೆದುಕೊಂಡ್ರೂ ಸಾಲದು. ಗರಿಷ್ಠ ಮುನ್ನೆಚ್ಚರಿಕೆ ವಹಿಸೋದೇ ಕೊರೊನಾ ಕಂಟ್ರೋಲ್ ಮಾಡೋದಕ್ಕೆ ಇರುವ ಸರಿಯಾದ ದಾರಿ. ಬಂದ ಮೇಲೆ ಎಚ್ಚರಿಕೆ ವಹಿಸೋದಕ್ಕಿಂತ ಮುಂಚೆಯೇ ಎಚ್ಚರಿಕೆಯಿಂದ ಇರೋದು ಒಳಿತು.

The post ಕೆಲವರು ಎಲ್ಲೂ ಹೊರಗಡೆ ಹೋಗದಿದ್ರೂ ಕೊರೊನಾ ಬರೋದು ಹೇಗೆ? appeared first on News First Kannada.

Source: newsfirstlive.com

Source link