ಕೆಲವ್ರು ಪಕ್ಷಕ್ಕೆ ಬರೋರಿದ್ದಾರೆ, ಬೇಡ ಅನ್ನಲ್ಲ -ಬಿಜೆಪಿ ನಿದ್ದೆಗೆಡಿಸಿದ ಡಿಕೆಎಸ್ ಈ ಹೇಳಿಕೆ
ಕೆಲವರು ಪಕ್ಷಕ್ಕೆ ಬರುವವರು ಇದ್ದಾರೆ, ನಾನು ಬೇಡ ಅನ್ನುವುದಿಲ್ಲ. ಕೆಲವರು ನನಗೆ ಆಗದೇ ಇರಬಹುದು. ಕೆಲವರು ಬೇರೆಯವರಿಗೆ ಆಗದೇ ಇರಬಹುದು. ಆದರೆ ಇದೆಲ್ಲ ವೈಯುಕ್ತಿಕವಾಗಿಲ್ಲ, ಪಾರ್ಟಿ ಅಂತ ನೋಡುತ್ತೇವೆ.
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕೆಪಿಸಿಸಿ ಅಧ್ಯಕ್ಷರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ರಾಜಕೀಯ ಶತ್ರುಗಳು ಪರಸ್ಪರ ಒಂದಾಗುತ್ತಿದ್ದಾರಾ ಅನ್ನೋ ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ. ಅವರು ಬೇರೆ ಯಾರೂ ಅಲ್ಲ, ಮಾಜಿ ಮಿನಿಸ್ಟರ್, ಬಿಜೆಪಿ ಹಿರಿಯ ನಾಯಕ ಸಿ.ಪಿ.ಯೋಗೇಶ್ವರ್!
ಹೆಚ್ಡಿಕೆ ಕಟ್ಟಿಹಾಕಲು ಪ್ಲಾನ್
ಡಿ.ಕೆ ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್ ಹಾವು ಮುಂಗೂಸಿಯಂತೆ ಕಿತ್ತಾಡಿದ್ದು ಗೊತ್ತಿರುವ ವಿಚಾರವೇ. ಇದೀಗ ಇವರಿಬ್ಬರು ಮತ್ತೆ ಒಂದಾಗುತ್ತಿದ್ದಾರೆ ಅನ್ನೋ ಗುಸುಗುಸು ರಾಜಕೀಯ ವಲಯದಲ್ಲಿ ಶುರುವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿಯನ್ನ ಕಟ್ಟಿಹಾಕಲು ಡಿಕೆಎಸ್, ಸಿಪಿವೈ ಒಂದಾಗುತ್ತಾರೆ. ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಬಗ್ಗು ಬಡಿಯಲು ಒಂದಾಗುತ್ತಾರಂತೆ ಅನ್ನೋ ಚರ್ಚೆ ಜೋರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿಪಿವೈಯನ್ನ ಬಿಜೆಪಿಯಿಂದ ಸೆಳೆಯಲು ಡಿಕೆ ಶಿವಕುಮಾರ್ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಇದರ ಮುಂದುವರಿದ ಭಾಗವಾಗಿ ಡಿಕೆಎಸ್ ಹಾಗೂ ಡಿ.ಕೆ.ಸುರೇಶ್ ಸಿ.ಪಿ.ಯೋಗೇಶ್ವರ್ ಅವರನ್ನ ಭೇಟಿಯಾಗಿದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ನಡೆದಿದೆ ಅಂತಾ ಮೂಲಗಳು ಹೇಳಿವೆ. ಅಲ್ಲದೇ ಕಾಂಗ್ರೆಸ್ ಸೇರಲು ಖುದ್ದು ಸಿಪಿ ಯೋಗೇಶ್ವರ್ ಅವರೇ ಉತ್ಸುಕರಾಗಿದ್ದಾರೆ. ಬಿಜೆಪಿಯಲ್ಲಿನ ಇತ್ತೀಚೆಗಿನ ಬೆಳವಣಿಗೆಗಳಿಂದ ಕಾಂಗ್ರೆಸ್ ಸೇರಲಿದ್ದಾರೆ. ಯಾಕಂದ್ರೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನದ ನಿರೀಕ್ಷೆ ಹೊಂದಿದ್ದ ಸಿಪಿವೈಗೆ ಭಾರೀ ನಿರಾಸೆ ಆಗಿದೆ. ಹೀಗಾಗಿ ಕಾಂಗ್ರೆಸ್ ಕೈಹಿಡಿದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೈಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಕೇಳಿಬಂದಿವೆ.