ಕೆಲಸದ ಸ್ಥಳಗಳಲ್ಲಿ ಲಸಿಕಾ ಅಭಿಯಾನ ನಡೆಸಲು ಕೇಂದ್ರ ಸಲಹೆ; ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಪ್ರಾದೇಶಿಕ ಮಟ್ಟದಲ್ಲಿ ಹಲವು ಕ್ರಮ  | To improve vaccination in work places centre suggests to states that badge giving and other plans here is details


ಕೆಲಸದ ಸ್ಥಳಗಳಲ್ಲಿ ಲಸಿಕಾ ಅಭಿಯಾನ ನಡೆಸಲು ಕೇಂದ್ರ ಸಲಹೆ; ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಪ್ರಾದೇಶಿಕ ಮಟ್ಟದಲ್ಲಿ ಹಲವು ಕ್ರಮ 

ಕೊರೊನಾ ಲಸಿಕೆ ಸಾಂಕೇತಿಕ ಚಿತ್ರ

ನವದೆಹಲಿ: ಕೊವಿಡ್ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಳಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, ಲಸಿಕೆ ನೀಡುವಿಕೆಯ ವೇಗವನ್ನು ಹೆಚ್ಚಿಸಲು, ಕೆಲಸದ ಸ್ಥಳದಲ್ಲಿ ಎಲ್ಲರಿಗೂ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಕೈಗೊಳ್ಳಬಹುದಾದ ಉಪಕ್ರಮಗಳ ಕುರಿತು ತಿಳಿಸಿದ್ದಾರೆ. ಜನರನ್ನು ಗುರಿಯಾಗಿಟ್ಟುಕೊಂಡು ಕೆಲಸದ ಸ್ಥಳದಲ್ಲಿ ಕೊವಿಡ್ 19 ಲಸಿಕಾ ಅಭಿಯಾನವನ್ನು ಆಯೋಜಿಸಬಹುದು ಮತ್ತು ಲಸಿಕೆ ಹಾಕಿಸಿಕೊಳ್ಳದ ಸಹೋದ್ಯೋಗಿಗಳನ್ನು ಪ್ರೇರೇಪಿಸಲು ಸಂದೇಶಗಳನ್ನು ಹೊಂದಿರುವ ಬ್ಯಾಡ್ಜ್‌ಗಳನ್ನು ನೀಡಬಹುದು ಎಂದು ಸೂಚಿಸಲಾಗಿದೆ. ಇವುಗಳಲ್ಲದೆ, ಕೇಂದ್ರ ಆರೋಗ್ಯ ಸಚಿವಾಲಯವು ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು ಜಿಲ್ಲೆಗಳು ಅಥವಾ ಹಳ್ಳಿಗಳಲ್ಲಿ ಲಸಿಕೆ ಹಾಕಿದ ಪ್ರಭಾವಿ ವ್ಯಕ್ತಿಗಳು ಮತ್ತು ಸಮುದಾಯದ ಮುಖಂಡರನ್ನು ಲಸಿಕಾ ಅಭಿಯಾನದಲ್ಲಿ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಲಾಗಿದೆ.

‘‘ವಿಶ್ವಾಸಾರ್ಹ ವ್ಯಕ್ತಿಗಳು/ಸಮುದಾಯದ ನಾಯಕರನ್ನು ಗುರುತಿಸಿ ರಾಯಭಾರಿಗಳಾಗಿ ನೇಮಿಸಬಹುದು. ಲಸಿಕೆಗಳ ಎರಡೂ ಡೋಸ್‌ಗಳನ್ನು ತೆಗೆದುಕೊಳ್ಳುವ ಮತ್ತು ಅದರ ಪ್ರಾಮುಖ್ಯತೆಯ ತಿಳಿಸಲು ‘ಹರ್ ಘರ್ ದಸ್ತಕ್’ ಬಗ್ಗೆ ಒಲವು ತೋರಬಹುದು’’ ಎಂದು ರಾಜೇಶ್ ಭೂಷಣ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಲಸಿಕೆ ಪಡೆದ ವ್ಯಕ್ತಿಗಳ ವಿವರಗಳನ್ನು ಕೊವಿನ್​ನಲ್ಲಿ ಸೇರಿಸಲಾಗುತ್ತದೆ. ಎರಡೂ ಡೋಸ್ ಪಡೆದವರಿಗೆ ಸ್ಥಳೀಯ ಮಟ್ಟದಲ್ಲಿ ಪ್ರಮಾಣಪತ್ರಗಳ ಮೂಲಕ ಗೌರವಿಸಲಾಗುವುದು ಮತ್ತು ವಿಶೇಷ ಗ್ರಾಮ ಸಭೆಗಳು ಅಥವಾ ಪಂಚಾಯತ್ ಸಭೆಗಳಲ್ಲಿ ಸನ್ಮಾನಿಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ. “ತಮ್ಮ ಮೊದಲ ಡೋಸ್ ಅನ್ನು ಸ್ವೀಕರಿಸಿದ ವ್ಯಕ್ತಿಗಳು ಸ್ಥಳೀಯ ಭಾಷೆಗಳಲ್ಲಿ ಅಥವಾ ಉಪಭಾಷೆಗಳಲ್ಲಿ ಪಠ್ಯ ಮತ್ತು ಧ್ವನಿ ಕರೆ ಸಂದೇಶಗಳನ್ನು ಸ್ವೀಕರಿಸಬೇಕು, ಅವರು ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಲು ಸಮಯವನ್ನು ನೆನಪಿಸಲಾಗುತ್ತದೆ. ಈ ಸಂದೇಶಗಳನ್ನು ಸ್ಥಳೀಯ ನಾಯಕ ಅಥವಾ ರಾಯಭಾರಿ ಧ್ವನಿಯಲ್ಲಿ ರೆಕಾರ್ಡ್ ಮಾಡಬಹುದು,” ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಎಲ್ಲಾ ಅರ್ಹ ವ್ಯಕ್ತಿಗಳು ಶೀಘ್ರವಾಗಿ ಲಸಿಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 3 ರಂದು ‘ಹರ್ ಘರ್ ದಸ್ತಕ್’ ಅಭಿಯಾನವನ್ನು ಪ್ರಾರಂಭಿಸಿದ್ದರು. ಆ ಅಭಿಯಾನ ನವೆಂಬರ್ 30 ರವರೆಗೆ ಮುಂದುವರಿಯಲಿದೆ. ಎಲ್ಲಾ ಜಿಲ್ಲೆಗಳು ಲಸಿಕೆ ಪಡೆಯದ ಫಲಾನುಭವಿಗಳನ್ನು ಗುರುತಿಸಬೇಕು ಮತ್ತು ಆದ್ಯತೆಯ ಆಧಾರದ ಮೇಲೆ ಲಸಿಕೆ ಹಾಕಲು ಅವರನ್ನು ಸಜ್ಜುಗೊಳಿಸಬೇಕು ಎಂದು ಸಚಿವಾಲಯ ತನ್ನ ಪತ್ರದಲ್ಲಿ ಒತ್ತಿಹೇಳಿದೆ.

ಲಸಿಕೆ ಪಡೆಯಲು ಉತ್ತೇಜಿಸಲಾಗುವ ಬ್ಯಾಡ್ಜ್​ಗಳಲ್ಲಿ ‘ನಾನು ಸಂಪೂರ್ಣವಾಗಿ ಲಸಿಕೆ ಹಾಕಿದ್ದೇನೆ, ನೀವು ಸಹ ಸಂಪೂರ್ಣವಾಗಿ ಲಸಿಕೆ ಹಾಕಿದ್ದೀರಾ’ ಎಂಬ ಸಂದೇಶಗಳನ್ನು ಬರೆಯಬಹುದು ಎಂದು ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಇಂತಹ ನವೀನ ಆಲೋಚನೆಗಳು ಅಥವಾ ಉಪಕ್ರಮಗಳು ಜನರನ್ನು ಪ್ರೇರೇಪಿಸಲು ಮತ್ತು ಲಸಿಕೆ ಪಡೆಯದ ಫಲಾನುಭವಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಸುಧಾರಿಸುವ ಪ್ರಯತ್ನದಲ್ಲಿ, ಕೇಂದ್ರ ಸರ್ಕಾರವು ಜನರನ್ನು ಬೇಗನೆ ಚುಚ್ಚುಮದ್ದು ಮಾಡುವಂತೆ ಉತ್ತೇಜಿಸಲು ಹಲವಾರು ಚಟುವಟಿಕೆಗಳನ್ನು ಯೋಜಿಸಲಿದೆ ಎಂದು ಇತ್ತೀಚೆಗೆ ಪಿಟಿಐ ವರದಿ ಮಾಡಿತ್ತು. ಕೇಂದ್ರದ ಯೋಜನೆಯ ಭಾಗವಾಗಿ, ಸಂಪೂರ್ಣ ಲಸಿಕೆ ಪಡೆದ ಜನರಿಗೆ ವಾರಕ್ಕೊಮ್ಮೆ ಅಥವಾ ಮಾಸಿಕ ಲಕ್ಕಿ ಡ್ರಾ ಕಾರ್ಯಕ್ರಮಗಳನ್ನು ಆಯೋಜಿಸುವುದು, ಕೆಲಸದ ಸ್ಥಳದಲ್ಲಿ ಲಸಿಕಾ ಅಭಿಯಾನ ಆಯೋಜಿಸುವುದು, ಸಂಪೂರ್ಣವಾಗಿ ಲಸಿಕೆ ಪಡೆದ ಉದ್ಯೋಗಿಗಳಿಗೆ ಬ್ಯಾಡ್ಜ್‌ಗಳನ್ನು ಒದಗಿಸುವಂತಹ ಇತರ ಕ್ರಮಗಳನ್ನು ಯೋಜಿಸಬಹುದು ಎಂದು ಇತ್ತೀಚೆಗೆ ಸಲಹೆ ನೀಡಲಾಗಿದೆ ಎಂದು ಅದು ಉಲ್ಲೇಖಿಸಿತ್ತು. ಇದೀಗ ಆರೋಗ್ಯ ಸಚಿವಾಲಯ, ಅಧಿಕೃತವಾಗಿ ಪತ್ರದ ಮೂಲಕ ಈ ಕುರಿತು ನಿರ್ದೇಶನ ನೀಡಿದೆ.

ಇದನ್ನೂ ಓದಿ:

ಬೂಸ್ಟರ್ ಡೋಸ್ ಲಸಿಕೆ ಅಗತ್ಯವಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ : ಐಸಿಎಂಆರ್ ಮುಖ್ಯಸ್ಥರ ಹೇಳಿಕೆ

ಫೂಟ್​ಬಾಲ್​ ತಾರೆಯೆನಿಸಿದ್ದ ಡಿಯೇಗೋ ಮೆರಡೋನ ವಿರುದ್ಧ ರೇಪ್​ ಆರೋಪ; ನನ್ನ ಬಾಲ್ಯವನ್ನು ಕರಾಳವಾಗಿಸಿದರು ಎಂದ ಮಹಿಳೆ

TV9 Kannada


Leave a Reply

Your email address will not be published. Required fields are marked *