ಮುಂಬಯಿ : ಹದಿನಾಲ್ಕನೇ ಐಪಿಎಲ್‌ನಲ್ಲಿ ಆರ್‌ಸಿಬಿ ಸಿಕ್ಕಾಪಟ್ಟೆ ಜೋಶ್‌ನಲ್ಲಿದೆ. ಎದುರಾಳಿಗಳನ್ನೆಲ್ಲ ಬಡಿದುರುಳಿಸುತ್ತ ತನ್ನ ಗೆಲುವಿನ ಓಟವನ್ನು ಸತತ 4 ಪಂದ್ಯಗಳಿಗೆ ವಿಸ್ತರಿಸಿದೆ. ರವಿವಾರ ಸಂಜೆ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕೊಹ್ಲಿ ಪಡೆ ಕಣಕ್ಕಿಳಿಯಲಿದೆ. ಆರ್‌ಸಿಬಿ ಅಭಿಯಾನ ಐದನೇ ಪಂದ್ಯಕ್ಕೆ ವಿಸ್ತರಿಸುವುದೇ ಅಥವಾ ಚೆನ್ನೈ ಈ ಓಟಕ್ಕೆ ತಡೆಯೊಡ್ಡುವುದೇ ಎಂಬ ಕುತೂಹಲ ತೀವ್ರಗೊಂಡಿದೆ.

ಇದು ಬ್ಯಾಟಿಂಗ್‌ ಟ್ರ್ಯಾಕ್‌ ವಾಂಖೇಡೆಯಲ್ಲಿ ಆರ್‌ಸಿಬಿ ಆಡುತ್ತಿರುವ ಎರಡನೇ ಪಂದ್ಯ. ಗುರುವಾರ ರಾಜಸ್ಥಾನ್‌ ವಿರುದ್ಧ ಪಡಿಕ್ಕಲ್‌-ಕೊಹ್ಲಿ ಇಬ್ಬರೇ ಸೇರಿಕೊಂಡು ರಾಜಸ್ಥಾನ್‌ ನೀಡಿದ ದೊಡ್ಡ ಸವಾಲನ್ನು ಮೆಟ್ಟಿ ನಿಂತಿದ್ದರು. ಪಡಿಕ್ಕಲ್‌ ಅವರಿಂದ ಚೊಚ್ಚಲ ಐಪಿಎಲ್‌ ಶತಕ ಕೂಡ ದಾಖಲಾಗಿತ್ತು. ಈ ದೃಶ್ಯಾವಳಿ ಇನ್ನೂ ಕಣ್ಮುಂದಿದೆ. ಆರ್‌ಸಿಬಿಯ ಈ ಪರಾಕ್ರಮ ಸಹಜವಾಗಿಯೇ ಎದುರಾಳಿಗಳ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಇದು ಟೀಮ್‌ ಇಂಡಿಯಾದ ಹಾಲಿ ಹಾಗೂ ಮಾಜಿ ನಾಯಕರ ನಡುವಿನ ಈ ಪಂದ್ಯ ಎಂಬ ಕಾರಣಕ್ಕಾಗಿಯೂ ಹೆಚ್ಚಿನ ಕೌತುಕ ನಿರ್ಮಿಸಿದೆ. ಮೇಲ್ನೋಟಕ್ಕೆ ಆರ್‌ಸಿಬಿ ಇಲ್ಲಿನ ನೆಚ್ಚಿನ ತಂಡ. 8 ಅಂಕಗಳಿಂದ ಅಗ್ರಸ್ಥಾನ ಅಲಂಕರಿಸಿದೆ. ಚೆನ್ನೈ ಸೋಲಿನ ಆರಂಭದ ಬಳಿಕ ಹ್ಯಾಟ್ರಿಕ್‌ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಆರ್‌ಸಿಬಿಯ ಹಿಂದೆಯೇ ನಿಂತಿದೆ.

ಕಳೆದ ವರ್ಷ ಫ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎಂಬ ಅವಮಾನಕ್ಕೆ ಸಿಲುಕಿದ “ಹಿರಿಯರ ಬಳಗ’ ಚೆನ್ನೈ ಪ್ರಸಕ್ತ ಋತುವಿನಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ. ಹೀಗಾಗಿ ಚೆನ್ನೈ ಸವಾಲನ್ನು ಯಾವ ಕಾರಣಕ್ಕೂ ಲಘುವಾಗಿ ಪರಿಗಣಿಸುವಂತಿಲ್ಲ.

ಧೋನಿ ವರ್ಸಸ್‌ ಕೊಹ್ಲಿ
ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ತಂಡ. ಪಡಿಕ್ಕಲ್‌, ಕೊಹ್ಲಿ, ಎಬಿಡಿ, ಮ್ಯಾಕ್ಸ್‌ವೆಲ್‌ ಪ್ರಚಂಡ ಫಾರ್ಮ್ನಲ್ಲಿರುವುದರಿಂದ ತಂಡದ ಬಿಗ್‌ ಸ್ಕೋರ್‌ಗೆ ಯಾವುದೇ ಅಡ್ಡಿಯಿಲ್ಲ. ಮೊದಲು ಬ್ಯಾಟಿಂಗ್‌ ಅಥವಾ ಚೇಸಿಂಗ್‌, ಎರಡಕ್ಕೂ ತಂಡ ಸೈ ಎನಿಸಿದೆ.

ಈ ಬಾರಿ ಆರ್‌ಸಿಬಿ ಬೌಲಿಂಗ್‌ ಕೂಡ ಬಲಿಷ್ಠಗೊಂಡಿದೆ. ಹೆಚ್ಚು ವೈವಿಧ್ಯ ಮಯವಾಗಿದೆ. ವೇಗಿಗಳಾದ ಮೊಹಮ್ಮದ್‌ ಸಿರಾಜ್‌, ಹರ್ಷಲ್‌ ಪಟೇಲ್‌, ಕೈಲ್‌ ಜಾಮೀಸನ್‌, ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ ಉತ್ತಮ ಲಯದಲ್ಲಿದ್ದಾರೆ. ಆದರೆ ಅನುಭವಿ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ದುಬಾರಿಯಾಗಿ ಪರಿಣಮಿಸುತ್ತಿದ್ದಾರೆ. ಚಹಲ್‌ ಬದಲಿಗೆ ಇರುವ ಸ್ಪಿನ್‌ ಆಯ್ಕೆಯೆಂದರೆ ಆ್ಯಡಂ ಝಂಪ. ಆಗ ವಿದೇಶಿ ಆಟಗಾರನ ಕೋಟಾದಿಂದ ಜಾಮೀಸನ್‌ ಅವರನ್ನು ಕೈಬಿಡಬೇಕಾಗುತ್ತದೆ. ಈ ಜಾಗಕ್ಕೆ ನವದೀಪ್‌ ಸೈನಿಗೆ ಅವಕಾಶ ಲಭಿಸಬಹುದು.

ಚೆನ್ನೈ ಸಮರ್ಥ ಬಳಗ
ಚೆನ್ನೈ ಕೂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲಿಯೂ ಸಮರ್ಥವಾಗಿದೆ. ಇಲ್ಲಿ 8ನೇ ಕ್ರಮಾಂಕದ ವರೆಗೂ ಬ್ಯಾಟ್‌ ಬೀಸುವವರ ಪಡೆಯೇ ಇದೆ. ಇವರಲ್ಲಿ ಅನೇಕರು ಆಲ್‌ರೌಂಡರ್‌ಗಳಾಗಿರುವುದೊಂದು ಪ್ಲಸ್‌ ಪಾಯಿಂಟ್‌. ಋತುರಾಜ್‌ ಗಾಯಕ್ವಾಡ್‌, ಫಾ ಡು ಪ್ಲೆಸಿಸ್‌, ಮೊಯಿನ್‌ ಅಲಿ, ಅಂಬಾಟಿ ರಾಯುಡು, ಸುರೇಶ್‌ ರೈನಾ, ಡ್ವೇನ್‌ ಬ್ರಾವೊ, ರವೀಂದ್ರ ಜಡೇಜ, ಸ್ಯಾಮ್‌ ಕರನ್‌… ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ನಾಯಕ ಧೋನಿಯ ಬ್ಯಾಟಿಂಗ್‌ ಚಾರ್ಮ್ ಮಾತ್ರ ಹೊರಟು ಹೋಗಿದೆ.

ಬೌಲಿಂಗ್‌ ವಿಭಾಗದಲ್ಲಿ ದೀಪಕ್‌ ಚಹರ್‌ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದೆರಡೂ ಪಂದ್ಯಗಳಲ್ಲಿ ತಲಾ ನಾಲ್ಕು ವಿಕೆಟ್‌ ಕಬಳಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಶಾದೂìಲ್‌ ಠಾಕೂರ್‌, ಲುಂಗಿ ಎನ್‌ಗಿಡಿ ಉಳಿದಿಬ್ಬರು ವೇಗಿಗಳು. ಚೆನ್ನೈ ಸ್ಪಿನ್‌ ವಿಭಾಗವೂ ಹೆಚ್ಚು ಅಪಾಯಕಾರಿ. ಜಡೇಜ ಮತ್ತು ಮೊಯಿನ್‌ ಅಲಿ ಉತ್ತಮ ಬ್ರೇಕ್‌ ಒದಗಿಸಬಲ್ಲರು.

ಕ್ರೀಡೆ – Udayavani – ಉದಯವಾಣಿ
Read More