ಮಡಿಕೇರಿ: ಇತ್ತೀಚಿನ ಒಮಾನ್‌ ಸೈಲಿಂಗ್‌ ಅರ್ಹತಾ ಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮೂಲಕ ಟೋಕಿಯೊ ಒಲಿಂಪಿಕ್ಸ್‌
ಕ್ರೀಡಾಕೂಟಕ್ಕೆ ಅರ್ಹತೆ ಪಡೆದದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಲ್ಲಿ ಕೇಳಿಬಂದ ಒಂದು ಪ್ರಮುಖ ಹೆಸರು ಕೇಳಪಂಡ ಗಣಪತಿ ಅವರದು. ಇವರು ಕೊಡಗಿನವರೆಂಬುದು ಹೆಮ್ಮೆಯ ಸಂಗತಿ.

ಭಾರತದ ಪ್ರತಿಭಾವಂತ ಸೈಲರ್‌ (ನಾವಿಕ) ಆಗಿರುವ ಗಣಪತಿ ತಮ್ಮ ಜೋಡಿ ವರುಣ್‌ ಥಕ್ಕರ್‌ ಜತೆ ಡಬಲ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಭಾರತದ ಒಟ್ಟು ನಾಲ್ವರು ನಾವಿಕರು ಟೋಕಿಯೊಗೆ ವಿಮಾನ ಏರಲಿದ್ದಾರೆ.

ಕೇಳಪಂಡ ಗಣಪತಿ ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕೊಡಗಿನ 19ನೇ ಕ್ರೀಡಾಪಟು. ಭಾರತದ ವರ್ಣರಂಜಿತ ಹಾಕಿ ಇತಿಹಾಸದಲ್ಲಿ ಕೊಡಗಿನವರ ಕೊಡುಗೆಯನ್ನು ಮರೆಯುವಂತಿಲ್ಲ. ಇದೀಗ ಹಾಕಿ ನಾಡಿನಿಂದ ನಾವಿಕನೋರ್ವ ಪ್ರತಿಷ್ಠಿತ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧೆಗೆ ಇಳಿಯುವುದು ಗಮನಾರ್ಹ ಬೆಳವಣಿಗೆಯಾಗಿದೆ.

7 ವಿವಿಧ ಕ್ರೀಡೆಗಳಲ್ಲಿ ಕೊಡಗಿನ 18 ಒಲಿಂಪಿಯನ್‌ಗಳಿದ್ದಾರೆ. ಹಾಕಿ, ಆ್ಯತ್ಲೆಟಿಕ್ಸ್‌, ಬಾಕ್ಸಿಂಗ್‌, ಟೆನಿಸ್‌, ಸ್ಕ್ವಾಶ್‌, ಬ್ಯಾಡ್ಮಿಂಟನ್‌ನಲ್ಲಿ ಕೊಡಗಿನ ಕ್ರೀಡಾಪಟುಗಳು ಅಮೋಘ ಸಾಧನೆ ತೋರಿದ್ದು, ಈ ಸಾಲಿಗೆ ಸೈಲಿಂಗ್‌ ಕೂಡಾ ಸೇರ್ಪಡೆಯಾಗಿದೆ. ಕೇಳಪಂಡ ಗಣಪತಿ ಮೂಲತಃ ಕೊಡಗಿನ ಗೋಣಿಕೊಪ್ಪ ಸಮೀಪದ ಹಾತೂರು ಗ್ರಾಮದ ಕೇಳಪಂಡ ಚಂಗಪ್ಪ ಅವರ ಪುತ್ರರಾಗಿದ್ದು, 2018ರ ಏಶ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಇದನ್ನೂ ಓದಿ :ಧವನ್‌ – ಪೃಥ್ವಿ ಶಾ ಪ್ರಚಂಡ ಬ್ಯಾಟಿಂಗ್ ಪರಾಕ್ರಮ ‌; ಡೆಲ್ಲಿ ಜಯಭೇರಿ

ಒಲಿಂಪಿಕ್ಸ್‌ನಲ್ಲಿ ಕೊಡಗಿನವರು
ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಡಗಿನ ತಾರೆಗಳೆಂದರೆ ಎಂ.ಪಿ. ಗಣೇಶ್‌, ಎಂ.ಎಂ. ಸೋಮಯ್ಯ, ಬಿ.ಕೆ. ಸುಬ್ರಹ್ಮಣಿ, ಬಿ.ಪಿ. ಗೋವಿಂದ, ಸಿ.ಎಸ್‌. ಪೂಣಚ್ಚ, ಎ.ಬಿ. ಸುಬ್ಬಯ್ಯ, ಅರ್ಜುನ್‌ ಹಾಲಪ್ಪ, ಆರ್‌. ರಘುನಾಥ್‌, ಎಸ್‌.ವಿ. ಸುನೀಲ್‌, ಎಸ್‌.ಕೆ. ಉತ್ತಪ್ಪ ಮತ್ತು ನಿಕಿನ್‌ ತಿಮ್ಮಯ್ಯ.

ಆ್ಯತ್ಲೆಟಿಕ್ಸ್‌ನಲ್ಲಿ ಅಶ್ವಿ‌ನಿ ನಾಚಪ್ಪ, ಎಂ.ಆರ್‌. ಪೂವಮ್ಮ, ಜಿ. ಪ್ರಮೀಳಾ, ಸ್ಕ್ವಾಶ್‌ನಲ್ಲಿ ಜ್ಯೋತ್ಸ್ನಾ ಚಿಣ್ಣಪ್ಪ, ಬಾಕ್ಸಿಂಗ್‌ನಲ್ಲಿ ಸಿ. ಮಾಚಯ್ಯ, ಟೆನಿಸ್‌ನಲ್ಲಿ ರೋಹ‌ನ್‌ ಬೋಪಣ್ಣ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ದೇಶವನ್ನು ಪ್ರತಿನಿಧಿಸಿದ ಕೊಡಗಿನ ಕ್ರೀಡಾಪಟುಗಳು. 1980ರ ಮಾಸ್ಕೊ ಒಲಿಂಪಿಕ್ಸ್‌ ನಲ್ಲಿ ಎಂ.ಎ. ಸೋಮಯ್ಯ ಮತ್ತು 1972ರ ಮ್ಯೂನಿಚ್‌ ಒಲಿಂಪಿಕ್ಸ್‌ನಲ್ಲಿ ಎಂ.ಪಿ. ಗಣೇಶ್‌ ಅವರು ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದ ಹಾಕಿ ತಂಡದ ಸದಸ್ಯರಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ಕ್ರೀಡೆ – Udayavani – ಉದಯವಾಣಿ
Read More