ಬೆಂಗಳೂರು: ಕಪ್ಪುಶಿಲೀಂಧ್ರ (ಬ್ಲ್ಯಾಕ್​​ ಫಂಗಸ್​​​) ರೋಗದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ನಿನ್ನೆ ರಾಜ್ಯಗಳಿಗೆ 19,420 ವಯಲ್ಸ್ (ಸೀಸೆ) ಲೈಪೋಸೊಮಾಲ್ ಆ್ಯಂಫೋಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು, ರಾಜ್ಯಕ್ಕೆ 1,030 ವಯಲ್ಸ್​ ಪೂರೈಕೆ ಮಾಡಿದೆ. ಮೇ ಒಳಗೆ 3.63 ಲಕ್ಷ ವಯಲ್ಸ್ ಆಮದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕಕ್ಕೆ 1,030 ವಯಲ್ಸ್ ಒದಗಿಸಲಾಗಿದೆ. ಮೊನ್ನೆ 1,270 ವಯಲ್ಸ್ ಹಾಗೂ ಅದಕ್ಕೂ ಮುನ್ನ ಮೂರು ಕಂತುಗಳಲ್ಲಿ 1,660 ವಯಲ್ಸ್ ಒದಗಿಸಲಾಗಿತ್ತು. ದೇಶದಲ್ಲಿಯೇ ತ್ವರಿತವಾಗಿ ಲೈಪೋಸೊಮಾಲ್ ಆ್ಯಂಫೋಟೆರಿಸಿನ್-ಬಿ ಉತ್ಪಾದನೆ ಹೆಚ್ಚಿಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆ್ಯಂಫೋಟೆರಿಸಿನ್-ಬಿ ಚುಚ್ಚುಮದ್ದ ಉತ್ಪಾದಿಸಲು 5 ಕಂಪನಿಗಳಿಗೆ ಲೈಸನ್ಸ್
ದೇಶದ ಐದು ಫಾರ್ಮಾ ಕಂಪನಿಗಳು ಆ್ಯಂಫೋಟೆರಿಸಿನ್-ಬಿ ಉತ್ಪಾದನೆ ಮಾಡುತ್ತಿದ್ದು, ಈಗ ಹೊಸದಾಗಿ ಮತ್ತೆ ಐದು ಕಂಪನಿಗಳಿಗೆ ಲೈಸನ್ಸ್ ನೀಡಲಾಗಿದೆ. ಈ ಸ್ವದೇಶಿ ಕಂಪನಿಗಳು ಮೇ ತಿಂಗಳಲ್ಲಿ 1.63 ಲಕ್ಷ ಸೀಸೆ ಹಾಗೂ ಜೂನ್ ತಿಂಗಳಲ್ಲಿ 2.55 ಸೀಸೆ ಆ್ಯಂಫೋಟೆರಿಸಿನ್-ಬಿ ಉತ್ಪಾದನೆ ಮಾಡಲಿವೆ. ಹಾಗೆಯೇ ಮೈಲಾನ್ ಕಂಪನಿ ಮೂಲಕ ಮೇ ತಿಂಗಳ ಒಳಗಾಗಿ 3.63 ಲಕ್ಷ ವಯಲ್ಸ್ ಆ್ಯಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಸ್ವಲ್ಪ ಭಾಗ ಈಗಾಗಲೇ ಭಾರತ ತಲುಪಿದೆ ಎಂದು ವಿವರಿಸಿದರು.

ಜೂನ್ ತಿಂಗಳಲ್ಲಿ 3.15 ಲಕ್ಷ ಎಂಫೋಟೆರಿಸಿನ್-ಬಿ ವಯಲ್ಸ್ ಆಮದು
ಯೋಜಸಿದಂತೆ ಸಾಗಣೆಯಲ್ಲಿ ಏನೂ ವ್ಯತ್ಯಾಸವಾಗದಿದ್ದರೆ, ಉಳಿದ ಬಹುತೇಕ ಭಾಗ ವಾರದೊಳಗೆ ಭಾರತ ತಲುಪುವ ನಿರೀಕ್ಷೆ ಇದೆ. ಜೂನ್ ತಿಂಗಳಲ್ಲಿ 3.15 ಲಕ್ಷ ವಯಲ್ಸ್ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ 2.55 ಲಕ್ಷ ವಯಲ್ಸ್ ಸ್ವದೇಶಿ ಉತ್ಪಾದನೆ ಸೇರಿ ಜೂನ್ ತಿಂಗಳಲ್ಲಿ 5.7 ಲಕ್ಷ ವಯಲ್ಸ್ ಆ್ಯಂಫೋಟೆರಿಸಿನ್-ಬಿ ಲಭ್ಯವಿರಲಿವೆ. ಅಗತ್ಯವಾದರೆ ಇನ್ನೂ ಹೆಚ್ಚು ಆಮದು ಮಾಡಿಕೊಳ್ಳುತ್ತೇವೆ. ಸ್ವದೇಶಿ ಉತ್ಪಾದನೆಯೂ ಹೆಚ್ಚಾಗುತ್ತಿದ್ದು, ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ. ಕಪ್ಪುಶಿಲೀಂದ್ರ ಹಳೆ ಕಾಯಿಲೆಯಾಗಿದ್ದು, ಇದಕ್ಕೆ ಸಾಕಷ್ಟು ಪರ್ಯಾಯ ಔಷಧಗಳು ಲಭ್ಯವಿವೆ. ಹಾಗಾಗಿ ಇದಕ್ಕೆ ಔಷಧ ಕೊರತೆಯಾಗಬಹುದು ಎಂದು ಗಾಬರಿಗೊಳಗಾಗುವುದು ಬೇಡ ಅಂತ ಡಿವಿಎಸ್​​ ಸ್ಪಷ್ಟಪಡಿಸಿದರು.

The post ಕೇಂದ್ರದಿಂದ ರಾಜ್ಯಕ್ಕೆ 1,030 ವಯಲ್ಸ್ Amphotericin-B ಪೂರೈಕೆ appeared first on News First Kannada.

Source: newsfirstlive.com

Source link