ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಇಂದು ಮಾತನಾಡಿದ ಸಂದರ್ಭದಲ್ಲಿ ಜೂನ್ 21 ರಿಂದ ಕೋವಿಡ್ 19 ಲಸಿಕೆ ಉಚಿತವಾಗಿ ಕೇಂದ್ರೀಕೃತ ವಿತರಣೆಯನ್ನು ಮತ್ತೆ ಆರಂಭಿಸುವುದಾಗಿ ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಶೇ. 75ರಷ್ಟು ಲಸಿಕೆಯನ್ನು ವಿತರಿಸುವುದರಿಂದ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸೇವಾ ಶುಲ್ಕ 150/- ರೂ. ಗಳಿಗೆ ನಿಗದಿ ಪಡಿಸಿರುವುದರಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ ಮುಂದುವರಿಯಲಿದೆ. ಈ ಕ್ರಮದಿಂದ ಲಸಿಕೆ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುವುದು ಹಾಗೂ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನು ದೀಪಾವಳಿ ಹಬ್ಬದವರೆಗೆ ವಿಸ್ತರಿಸಿರುವುದನ್ನು ಶ್ಲಾಘಿಸಿರುವ ಮುಖ್ಯಮಂತ್ರಿಯವರು ಈ ಕ್ರಮವು ಕೋವಿಡ್ 19ರ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಹಸಿವಿನ ದವಡೆಯಿಂದ ಪಾರುಮಾಡುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿ.. 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ಪ್ರಜೆಗಳಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಪ್ರಧಾನ ಮಂತ್ರಿ ಘೋಷಿಸಿದ್ದಾರೆ. ಘನತೆವೆತ್ತ ಸುಪ್ರೀಮ್ ಕೋರ್ಟ್‌ಗೆ ಧನ್ಯವಾದಗಳು ಎಂದಿದ್ದಾರೆ. 

ಹಾಗೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ..’ಇಲ್ಲ’ ಎನ್ನುವುದಕ್ಕಿಂತ ತಡವಾಗಿ ಆದರೂ ಒಳ್ಳೆಯದೆ. ಕೇಂದ್ರ ಸರ್ಕಾರ ಲಸಿಕೆಯ ಜವಾಬ್ದಾರಿ‌ ಹೊತ್ತಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಒತ್ತಾಯಿಸಿದ ಮಾನ್ಯ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು. ಲಸಿಕೆಗಳ ಸಮಾನ ವಿತರಣೆಯ ಕುರಿತು ಕರ್ನಾಟಕ ಸರ್ಕಾರ ಗಮನ ಹರಿಸಬೇಕಿದೆ ಎಂದಿದ್ದಾರೆ.

 

The post ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ವಿತರಣೆ; ‘ಸುಪ್ರೀಂ ಕೋರ್ಟ್​​ಗೆ ಧನ್ಯವಾದ’ ಎಂದ ಕಾಂಗ್ರೆಸ್ appeared first on News First Kannada.

Source: newsfirstlive.com

Source link