ಮಂಗಳೂರು: ಕೊರೊನಾ ಎರಡನೇ ಅಲೆಯು ದೇಶದಲ್ಲಿ ಅಪಾರ ಸಾವು ನೋವುಗಳಿಗೆ ಕಾರಣವಾಗಿದೆ. ಕೊರೊನ ನಿಯಂತ್ರಿಸಿ ಲಸಿಕೆ ಹಂಚಿ ಜನರಿಗೆ ಧೈರ್ಯ ನೀಡಬೇಕಾಗಿದ್ದ ಪ್ರಧಾನ ಮಂತ್ರಿಗಳು ಮೊಸಳೆ ಕಣ್ಣೀರು ಸುರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿವೈಎಫ್‍ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಟೀಕಿಸಿದರು.

ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಗಳ ಕೇಂದ್ರ ಸಮಿತಿಗಳ ಕರೆಯನ್ವಯ ಕೊರೊನಾ ಲಸಿಕೆ ನೀಡಲು ವಿಫಲ ಆಗಿರುವ ಕೇಂದ್ರ ಸರ್ಕಾರದ ರಾಷ್ಟ್ರವ್ಯಾಪಿ ಮನೆ ಮನೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಿಸುವಲ್ಲಿ ಹಳಿ ತಪ್ಪಿವೆ. ಸರ್ಕಾರದ ಸಾಲು ಸಾಲು ವೈಫಲ್ಯಗಳು ಘೋರವಾದ ಇತಿಹಾಸ ನಿರ್ಮಿಸುತ್ತಿದೆ. ಜನರು ಆಕ್ಸಿಜನ್, ಲಸಿಕೆ ಸಿಗದೆ ಸಾಯುತ್ತಿದ್ದಾರೆ. ಸ್ಮಶಾನಗಳು ತುಂಬಿ ತುಳುಕುತ್ತಿವೆ ಜನರ ನೆರವಿಗೆ ಬರಬೇಕಿದ್ದ ಸರ್ಕಾರ ಮಕಾಡೆ ಮಲಗಿದೆ ಎಂದು ಸಂತೋಷ್ ಬಜಾಲ್ ಆರೋಪಿಸಿದರು.

ಡಿವೈಎಫ್‍ಐ, ಎಸ್‍ಎಫ್‍ಐ, ಜನವಾದಿ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳ ಅಧೀನದಲ್ಲಿರುವ ಎಲ್ಲಾ ಘಟಕಗಳ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಿಂದಲೇ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳಿರುವ ಭಿತ್ತಿಪತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು.

The post ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ಮನೆ ಮನೆ ಪ್ರತಿಭಟನೆ appeared first on Public TV.

Source: publictv.in

Source link