ನವದೆಹಲಿ: ಕೊರೊನಾ ವೈರಸ್​​ನ ವೇರಿಯಂಟ್​ಗಳಲ್ಲಿ ಒಂದಾದ B.1.617 ಡಬಲ್ ಮ್ಯೂಟಂಟ್ ವೈರಸ್​​ನ್ನು ಕಾಂಗ್ರೆಸ್ ಭಾರತೀಯ ವೇರಿಯಂಟ್ ಎಂದು ಕರೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಕಳೆಯುವ ಕೆಲಸಕ್ಕೆ ಮುಂದಾಗಿದೆ ಎಂದು ಬಿಜೆಪಿ ನಾಯಕರು ಈ ಹಿಂದೆ ಆರೋಪಿಸಿದ್ದರು.

ಎಐಸಿಸಿ ರಿಸರ್ಚ್ ಡಿಪಾರ್ಟ್​ಮೆಂಟ್ ಬಿಡುಗಡೆ ಮಾಡಿದೆ ಎನ್ನಲಾದ ಟೂಲ್​ಕಿಟ್​ನಲ್ಲಿ ಕಾಂಗ್ರೆಸ್ ಪ್ರಧಾನಿ ಮೋದಿಯವರ ಮಾನಹಾನಿ ಮಾಡಲು ಮುಂದಾಗಿದೆ ಎಂದು ಕೆಲವು ಪ್ರತಿಗಳನ್ನೂ ಸಹ ಸೋಷಿಯಲ್ ಮೀಡಿಯಾಗಳಲ್ಲಿ ಬಿಜೆಪಿ ನಾಯಕರು ಹಂಚಿಕೊಂಡಿದ್ದರು. ಈ ವಿಚಾರ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು.

ಇದೀಗ ಸ್ವತಃ ಕೇಂದ್ರ ಸರ್ಕಾರವೇ B.1.617 ಡಬಲ್ ಮ್ಯೂಟಂಟ್​ ವೈರಸ್​ನ್ನು ಭಾರತೀಯ ಡಬಲ್ ಮ್ಯೂಟಂಟ್ ಸ್ಟ್ರೇನ್ ಎಂದು ಉಪಯೋಗಿಸಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಅಫಿಡವಿಟ್ ಒಂದರಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಾವ್ಯಾವ ಮ್ಯೂಟಂಟ್ ವೈರಸ್​ಗಳ ವಿರುದ್ಧ ಹೋರಾಡಲಿದೆ ಎಂದು ಉಲ್ಲೇಖಿಸಲಾಗಿದೆ.

ಇದರಲ್ಲಿ ಯುಕೆ ವೇರಿಯಂಟ್, ಸೌತ್ ಆಫ್ರಿಕನ್ ವೇರಿಯಂಟ್ ಮತ್ತು ಇಂಡಿಯನ್ ಡಬಲ್ ಮ್ಯೂಟಂಟ್ ಸ್ಟ್ರೇನ್ ಎಂದು ಉಲ್ಲೇಖಿಸಲಾಗಿದೆ. ಈ ಪ್ರತಿಯನ್ನ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವೇ B.1.617 ಡಬಲ್ ಮ್ಯೂಟಂಟ್​ ವೈರಸ್​ನ್ನು ಭಾರತೀಯ ಮ್ಯೂಟಂಟ್ ಎಂದು ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.

 

The post ಕೇಂದ್ರ ಸರ್ಕಾರವೇ B.1.617 ವೈರಸ್ ‘ಭಾರತೀಯ ವೇರಿಯೆಂಟ್’ ಎಂದಿತ್ತಾ..? ಸಾಕ್ಷಿ ಮುಂದಿಟ್ಟ ಕಾಂಗ್ರೆಸ್ appeared first on News First Kannada.

Source: newsfirstlive.com

Source link