ಕೇದಾರನಾಥದ​ ಶಂಕರಾಚಾರ್ಯರ ಮೂರ್ತಿ ನೋಡಬೇಕು; ಪ್ರಧಾನಿ ಮೋದಿಗೆ ಹೆಚ್​ಡಿ ದೇವೇಗೌಡರಿಂದ ಪತ್ರ | JDS Leader HD Deve Gowda writes to PM Narendra Modi on Kedarnath Shankaracharya Statue


ಕೇದಾರನಾಥದ​ ಶಂಕರಾಚಾರ್ಯರ ಮೂರ್ತಿ ನೋಡಬೇಕು; ಪ್ರಧಾನಿ ಮೋದಿಗೆ ಹೆಚ್​ಡಿ ದೇವೇಗೌಡರಿಂದ ಪತ್ರ

ಬೆಂಗಳೂರು: ನನಗೆ ನೀವು (ಪ್ರಧಾನ ಮಂತ್ರಿ ನರೇಂದ್ರ ಮೋದಿ) ಕೇದಾರನಾಥದಲ್ಲಿ ಉದ್ಘಾಟಿಸಿದ ಶ್ರೀ ಆದಿಶಂಕರಾಚಾರ್ಯರ ಕಪ್ಪು ಕಲ್ಲಿನ ಸುಂದರ ಮೂರ್ತಿಯನ್ನು ನೋಡಬೇಕು ಅನಿಸಿದೆ. ಈ ಪವಿತ್ರ ಕ್ಷೇತ್ರವನ್ನು ಪುನರ್​ನಿರ್ಮಾಣ ಮಾಡುವಲ್ಲಿ ನೀವು ಕೈಗೊಂಡ ಕಾರ್ಯಗಳಿಗಾಗಿ ನಾನು ನಿಮಗೆ ಶುಭಾಶಯ ಕೋರುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಪತ್ರದ ಮುಖೇನ ತಿಳಿಸಿದ್ದಾರೆ. ಈ ವಿಚಾರವನ್ನು ಅವರು ಇಂದು (ನವೆಂಬರ್ 6) ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ನಾನು ಕರ್ನಾಟಕದಲ್ಲಿನ ಚಿಕ್ಕಮಗಳೂರಿನ ಶ್ರೀ ಶೃಂಗೇರಿ ಶಾರದಾ ಪೀಠದ ಮತ್ತು ಶೃಂಗೇರಿ ಮಠದ ಭಕ್ತನಾಗಿದ್ದೇನೆ. ನಿಮಗೆ ತಿಳಿದಿರುವಂತೆ ಅದು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ದೇಶದ ನಾಲ್ಕು ಕೇಂದ್ರಗಳಲ್ಲಿ ಒಂದಾಗಿದೆ ಎಂದು ದೇವೇಗೌಡರು ಬರೆದುಕೊಂಡಿದ್ದಾರೆ.

ಶೃಂಗೇರಿ ಮಠವು ಶತಮಾನಗಳಿಂದ, ವಿವಿಧ ರಾಜರ, ಆಡಳಿತಗಾರರ ಜೊತೆಗೆ ಧಾರ್ಮಿಕ ಕೇಂದ್ರವಾಗಿ ಒಗ್ಗೂಡಿಸಿಕೊಂಡು ನಡೆದಿರುವುದು ವಿಶೇಷ ಎಂದು ದೇವೇಗೌಡ ಶೃಂಗೇರಿ ಮಠದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಒಡೆಯರ್, ಪೇಶ್ವ, ಕೆಳದಿ ಮತ್ತು ತಿರುವಾಂಕೂರು ಆಳ್ವಿಕೆಯು ಮಠದಿಂದ ಲಾಭಾಂಶ ಪಡೆದುಕೊಂಡಿವೆ. ಮೈಸೂರು ರಾಜರಾದ ಹೈದರ್ ಅಲಿ ಹಾಗೂ ಟಿಪ್ಪು ಸುಲ್ತಾನ್ ಮತ್ತು ಹೈದರಾಬಾದ್​ನ ನಿಜಾಮರು ಕೂಡ ಈ ಧಾರ್ಮಿಕ ಸ್ಥಳದಿಂದ ಒಳಿತನ್ನು ಪಡೆದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಧರ್ಮ ಕ್ಷೇತ್ರದ ಮಾರ್ಗದರ್ಶನವು ಇಂದಿನ ದಿನದ ವರೆಗೂ ಮುಂದುವರಿದಿದೆ. ಶೃಂಗೇರಿ ಮಠ, ವೈಯಕ್ತಿಕವಾಗಿ ನನಗೆ ಸಮಾಜದ ಸಾಮರಸ್ಯದ ಕೇಂದ್ರವಾಗಿ ಕಂಡಿದೆ. ಈ ಪವಿತ್ರ ಕ್ಷೇತ್ರದಿಂದ ನನ್ನ ಜೀವನದಲ್ಲಿ ಪಡೆದುಕೊಂಡ ಆಶೀರ್ವಾದಕ್ಕೆ ನಾನು ಚಿರಋಣಿಯಾಗಿ ಇರುತ್ತೇನೆ ಎಂದು ದೇವೇಗೌಡ ತಿಳಿಸಿದ್ದಾರೆ.

ಶೀಘ್ರವೇ ಕೇದಾರನಾಥಕ್ಕೆ ಭೇಟಿ ಕೊಟ್ಟು, ಹೊಸತಾಗಿ ಉದ್ಘಾಟಿಸಿರುವ ಶಂಕರಾಚಾರ್ಯರ ಪ್ರತಿಮೆ ನೋಡಬೇಕು ಎಂದು ಕಾತುರನಾಗಿದ್ದೇನೆ. ಆ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬವರು ರಚಿಸಿದ್ದಾರೆ ಎಂಬುದು ಸಂತೋಷಕ್ಕೆ ಹೆಚ್ಚಿನ ಕಾರಣವಾಗಿದೆ. ಪ್ರತಿಮೆ ರಚನೆಗೆ ಬಳಸಿದ ಕಪ್ಪು ಶಿಲೆ ಮೈಸೂರಿನ ಹೆಚ್​.ಡಿ. ಕೋಟೆಯದ್ದು ಎಂದು ತಿಳಿದುಕೊಂಡಿದ್ದೇನೆ. ಈ ಕಾರ್ಯದಲ್ಲಿ ಕರ್ನಾಟಕದ ಭಾಗವೂ ಬಹಳಷ್ಟಿದೆ. ಭಗವಂತನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ದೇವೇಗೌಡರು ಮೋದಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಮೈಸೂರಿಂದ ಕೇದಾರನಾಥದವರೆಗೆ; ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿದ ಅರುಣ್ ಯಾರು ಗೊತ್ತಾ?

ಇದನ್ನೂ ಓದಿ: Modi in Kedarnath ಕೇದಾರನಾಥದಲ್ಲಿ ₹130 ಕೋಟಿ ಮೌಲ್ಯದ 5 ಯೋಜನೆ ಉದ್ಘಾಟಿಸಿದ ಮೋದಿ

TV9 Kannada


Leave a Reply

Your email address will not be published. Required fields are marked *